ರಾಹುಲ್ ಗಾಂಧಿ ಭಾರತೀಯ ಪೌರರೇ ಅಲ್ಲ, ಅವರಿಗಿರೋದು ಬ್ರಿಟಿಷ್ ಪೌರತ್ವ: ಇಂದು ವಿಚಾರಣೆ ಶುರು

Krishnaveni K

ಬುಧವಾರ, 25 ಸೆಪ್ಟಂಬರ್ 2024 (12:01 IST)
ನವದೆಹಲಿ: ಲೋಕಸಭೆಯ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಗೆ ಬ್ರಿಟಿಷ್ ಪೌರತ್ವವಿರುವ ಕಾರಣ ಸಿಬಿಐ ತನಿಖೆ ಮಾಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಅಲಹಾಬಾದ್ ಕೋರ್ಟ್ ಕೈಗೆತ್ತಿಕೊಳ್ಳಲಿದೆ.

ಭಾರತೀಯ ನ್ಯಾಯ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿ ಸಿಬಿಐ ತನಿಖೆ ನಡೆಸಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ಇಂದು ಅಲಹಾಬಾದ್ ಕೋರ್ಟ್ ವಿಚಾರಣೆ ಆರಂಭಿಸಲಿದೆ. ಅವರ ಬ್ರಿಟಿಷ್ ಪೌರತ್ವದ ಬಗ್ಗೆ ವಿವರವಾದ ತನಿಖೆ ನಡೆಸಬೇಕು ಎಂದು ಕೋರಲಾಗಿದೆ.

ರಾಹುಲ್ 2003/2006 ರ ನಂತರ ಭಾರತೀಯ ಪೌರತ್ವ ಪಡೆದಿದ್ದರೆ ಅದನ್ನು ನಾಮ ನಿರ್ದೇಶನಗಳಲ್ಲಿ ಉಲ್ಲೇಖಿಸಬೇಕು. ಇಲ್ಲದೇ ಹೋದರೆ ಲೋಕಸಭಾ ಸದಸ್ಯತ್ವವನ್ನೇ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಭಾರತದ ಸಂವಿಧಾನದ 84 (ಎ) ವಿಧಿಯಲ್ಲಿ ಹೇಳಿರುವಂತೆ ಅವರು ಬ್ರಿಟಿಷ್ ಪೌರರಾಗಿದ್ದರೆ ಲೋಕಸಭೆಗೆ ಸ್ಪರ್ಧಿಸಲು ಅನರ್ಹರು ಎಂದು ಹೇಳಲಾಗುತ್ತದೆ. ಹೀಗಾಗಿ ಈ ಬಗ್ಗೆ ತನಿಖೆಯಾಗಬೇಕೆಂದು ಕರ್ನಾಟಕದ ಬಿಜೆಪಿ ಸದಸ್ಯ ಎಸ್ ವಿಘ್ನೇಶ್ ಎಂಬವರು ಅರ್ಜಿ ಸಲ್ಲಿಸಿದ್ದರು.

ಅವರು ಬ್ರಿಟಿಷ್ ಪೌರತ್ವ ಹೊಂದಿದ್ದರೆ ತಕ್ಷಣವೇ ಅವರ ಭಾರತೀಯ ಪೌರತ್ವ ರದ್ದುಗೊಳಿಸಬೇಕು ಎಂದು ಇತ್ತೀಚೆಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೆಹಲಿ ಕೋರ್ಟ್ ಗೆ ಮನವಿ ಮಾಡಿದ್ದರು. ಇದೀಗ ಅಲಹಾಬಾದ್ ಕೋರ್ಟ್ ನಲ್ಲಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ