ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷ ನಾಯಕನಾದ ಮೊದಲ ದಿನವೇ ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ನಡುವೆ ಮಾತಿನ ಏಟು-ಎದಿರೇಟು ಕಂಡುಬಂದಿದೆ.
ಇಂದು ಸ್ಪೀಕರ್ ಆಗಿ ಓಂ ಬಿರ್ಲಾ ಎರಡನೇ ಬಾರಿಗೆ ಆಯ್ಕೆಯಾದ ಬಳಿಕ ಪ್ರಧಾನಿ ಮೋದಿ ಭಾಷಣ ಮಾಡಿದರು. ಈ ವೇಳೆ ಓಂ ಬಿರ್ಲಾ ಸಾಧನೆಗಳ ಬಗ್ಗೆ ಕೊಂಡಾಡಿದರು. ಜೊತೆಗೆ ಕಳೆದ ಬಾರಿ ನಿಮ್ಮ ಅಧ್ಯಕ್ಷತೆಯಲ್ಲಿ ನಾವು ಸುಗಮವಾಗಿ ಸಂಸತ್ ನಡೆಸಿದೆವು ಎಂದು ಮೋದಿ ಹೇಳಿಕೆ ನೀಡಿದ್ದರು.
ಇದಕ್ಕೆ ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ ತಿರುಗೇಟು ನೀಡಿದ್ದಾರೆ. ವಿಪಕ್ಷ ನಾಯಕನಾಗಿ ರಾಹುಲ್ ಗೆ ಇಂದು ಮೊದಲ ದಿನ. ವಿಪಕ್ಷ ನಾಯಕನಾದ ರಾಹುಲ್ ಗಾಂಧಿಗೆ ಭಾಷಣ ಮಾಡಲು ಅವಕಾಶ ನೀಡಲಾಗಿತ್ತು. ಈ ವೇಳೆ ಮೋದಿಗೆ ತಿರುಗೇಟು ನೀಡಿದ ರಾಹುಲ್, ಸಂಸತ್ ನ್ನು ಎಷ್ಟು ಚೆನ್ನಾಗಿ ನಡೆಸುತ್ತೇವೆ ಎಂದಲ್ಲ, ಜನರ ಧ್ವನಿಗೆ ಇಲ್ಲಿ ಎಷ್ಟು ಬೆಲೆ ಸಿಗುತ್ತದೆ ಎನ್ನುವುದು ಮುಖ್ಯ ಎಂದಿದ್ದಾರೆ.
ಇನ್ನು, ಸ್ಪೀಕರ್ ಆಯ್ಕೆ ಬಳಿಕ ಅವರನ್ನು ಸ್ಥಾನದಲ್ಲಿ ಕುಳ್ಳಿರಿಸಲು ರಾಹುಲ್ ಗಾಂಧಿಯನ್ನೂ ಕರೆಯಲಾಗಿತ್ತು. ಈ ವೇಳೆ ಮೋದಿ ಮತ್ತು ರಾಹುಲ್ ಪರಸ್ಪರ ಕೈಕುಲುಕಿಕೊಂಡರು. ಇಂದು ರಾಹುಲ್ ಗಾಂಧಿ ವಿಪಕ್ಷ ನಾಯಕನಾದ ಹಿನ್ನಲೆಯಲ್ಲಿ ಅವರ ಡ್ರೆಸ್ ಕೂಡಾ ಬದಲಾಗಿದ್ದು ವಿಶೇಷವಾಗಿತ್ತು.