ಕರ್ನಾಟಕದಂತೇ ಹಿಮಾಚಲ ಪ್ರದೇಶದಲ್ಲೂ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಈಗ ವಿದ್ಯತ್ ಕ್ಷಾಮ ಎದುರಾಗಿದ್ದು, ದಿಕ್ಕೇ ತೋಚದ ಸರ್ಕಾರ ಉಚಿತ ವಿದ್ಯುತ್ ಯೋಜನೆಗೇ ಕತ್ತರಿ ಹಾಕಿದೆ. ಆದಾಯ ತೆರಿಗೆ ಪಾವತಿಸುವವರಿಗೆ ಉಚಿತ ವಿದ್ಯುತ್ ಇಲ್ಲ ಎಂಬ ಹೊಸ ನಿಯಮ ಜಾರಿಗೆ ತಂದಿದೆ.
ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿಪಿಎಲ್ ಕಾರ್ಡ್ ಮತ್ತು ನಗರ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಮಾತ್ರ ತಿಂಗಳಿಗೆ 125 ಯೂನಿಟ್ ಉಚಿತ ವಿದ್ಯುತ್ ಸಿಗಲಿದೆ. ಅಲ್ಲದೆ, ಒಂದು ಕುಟುಂಬದಿಂದ ಒಂದು ಮೀಟರ್ ಗೆ ಮಾತ್ರ ಉಚಿತ ವಿದ್ಯುತ್ ಸಿಗಲಿದೆ.
ಉಚಿತ ವಿದ್ಯುತ್ ಪಡೆಯುವವರ ಆಧಾರ್ ನಂಬರ್ ಜೊತೆಗೆ ಪಡಿತರ ಸಂಖ್ಯೆಯನ್ನು ಲಿಂಕ ಮಾಡಲಾಗುತ್ತದೆ. ರಾಜ್ಯದಲ್ಲಿರುವ ಅರ್ಧಕ್ಕರ್ಧ ಜನ ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದರಿಂದ ರಾಜ್ಯ ಸರ್ಕಾರ ಈ ಹಣಕಾಸು ವರ್ಷದಲ್ಲಿ 1,800 ಕೋಟಿ ರೂ. ನಷ್ಟ ಅನುಭವಿಸಿದೆ. ರಾಜ್ಯದ ಒಟ್ಟಾರೆ ಸಾಲ 85,000 ಕೋಟಿ ದಾಟಿದೆ.