20ಕ್ಕೆ ವಿಪಕ್ಷ ನಾಯಕರ ಜತೆ ಸೋನಿಯಾ ಸಭೆ

ಶನಿವಾರ, 14 ಆಗಸ್ಟ್ 2021 (13:21 IST)
ಮುಂಬೈ(ಆ.14): ಕೇಂದ್ರದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿಪಕ್ಷಗಳ ನಾಯಕರ ಒಗ್ಗೂಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಆ.20ರಂದು ಸೋನಿಯಾ ಗಾಂಧಿ ಅವರು ವಿಪಕ್ಷಗಳ ನಾಯಕರಿಗಾಗಿ ಭೋಜನ ಕೂಟ ಏರ್ಪಡಿಸಿದ್ದಾರೆ.

1999ರಲ್ಲೂ ಸೋನಿಯಾ ಇದೇ ರೀತಿಯ ಚಹಾಕೂಟ ಏರ್ಪಡಿಸಿದ್ದರು. ಮುಂದೆ ಅದು 2004ರಲ್ಲಿ ಯುಪಿಎ ಸರ್ಕಾರದ ಉಗಮಕ್ಕೆ ನಾಂದಿ ಹಾಡಿತ್ತು. ಈಗ ಮತ್ತೆ ಅಂಥದ್ದೇ ಯತ್ನಕ್ಕೆ ಸೋನಿಯಾ ಚಾಲನೆ ನೀಡಿದ್ದು ಗಮನಾರ್ಹ.
20ರಂದು ನಡೆವ ಕೂಟಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಆಹ್ವಾನಿಸಲಾಗಿದೆ.
ಅಲ್ಲದೆ ಹಿರಿಯ ನಾಯಕರಾದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸಹ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜೊತೆಗೆ ಮೇವು ಹಗರಣದಲ್ಲಿ ಜೈಲು ಪಾಲಾಗಿದ್ದ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಆಹ್ವಾನಿಸಲಾಗಿದೆ.
ಸೋನಿಯಾ ಗಾಂಧಿ ನೇತೃತ್ವದ ಈ ಸಭೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಿಪಿಎಂ ಪಕ್ಷದ ಹಿರಿಯ ಮುಖಂಡರೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಪೆಗಾಸಸ್ ಬೇಹುಗಾರಿಕೆ ಮತ್ತು ಕೃಷಿ ಕಾಯ್ದೆಗಳ ಕುರಿತಾಗಿ ವಿಪಕ್ಷಗಳು ನಡೆಸಿದ ಗದ್ದಲಗಳು ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳನ್ನು ನುಂಗಿ ಹಾಕಿದ ಕೆಲ ದಿನಗಳ ಬೆನ್ನಲ್ಲೇ, ಸೋನಿಯಾ ಅವರು ವಿಪಕ್ಷಗಳ ನಾಯಕರ ಸಭೆ ನಡೆಸಲು ನಿರ್ಧರಿಸಿದ ಮಾಹಿತಿ ಹೊರಬಿದ್ದಿದೆ.
ಈ ಹಿಂದೆ 2024ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನೇತೃತ್ವದ ಎನ್ಡಿಎ ಕೂಟವನ್ನು ಮಣಿಸುವ ಸಲುವಾಗಿ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಭೋಜನ ಕೂಟವನ್ನು ಏರ್ಪಡಿಸಿದ್ದರು. ಜತೆಗೆ ಇದೇ ಉದ್ದೇಶದೊಂದಿಗೆ ಮಮತಾ ಬ್ಯಾನರ್ಜಿ ಅವರು ಸಹ ಇತ್ತೀಚೆಗಷ್ಟೇ 5 ದಿನಗಳ ದಿಲ್ಲಿ ಪ್ರವಾಸ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ