ವಿಶೇಷ ಸಂಸತ್ ಅಧಿವೇಶನ : ಪ್ರಮುಖ ವಿಷಯಗಳ ಚರ್ಚೆಗೆ ಸೋನಿಯಾ ಗಾಂಧಿ ಆಗ್ರಹ

ಬುಧವಾರ, 6 ಸೆಪ್ಟಂಬರ್ 2023 (15:09 IST)
ನವದೆಹಲಿ : ಸೆಪ್ಟೆಂಬರ್ 18ರಿಂದ 22ರವರೆಗೆ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಪ್ರಮುಖ ಒಂಬತ್ತು ವಿಷಯಗಳ ಬಗ್ಗೆ ಚರ್ಚೆಗೆ ಸಮಯಾವಕಾಶ ನೀಡಬೇಕು ಎಂದು ಪ್ರಧಾನಿಯವರಿಗೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.
 
ಕಾಂಗ್ರೆಸ್ ಸಂಸದೀಯ ಸಭೆ ಬಳಿಕ ಈ ಪತ್ರವನ್ನು ಬರೆಯಲಾಗಿದೆ. ಇತರ ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ಮಾಡದೇ ನೀವು ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನವನ್ನು ಕರೆದಿರುವಿರಿ. ವಿರೋಧ ಪಕ್ಷಗಳಲ್ಲಿ ನಮ್ಮಲ್ಲಿ ಯಾರಿಗೂ ಅದರ ಕಾರ್ಯಸೂಚಿಯ ಬಗ್ಗೆ ಯಾವುದೇ ಕಲ್ಪನೆ ಇಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅದಾಗ್ಯೂ ಕೂಡಾ ಅಧಿವೇಶನದಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ಮುಖ್ಯವಾಗಿ ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಸಮಸ್ಯೆಗಳು, ಎಂಎಎಸ್ಪಿಗೆ ಸಂಬಂಧಿಸಿದ ರೈತರ ಬೇಡಿಕೆಗಳ ಬಗ್ಗೆ ಚರ್ಚೆಯಾಗಬೇಕು ಎಂದಿದ್ದಾರೆ. 

ಅದಾನಿ ವ್ಯಾಪಾರ ಸಮೂಹದ ವಹಿವಾಟುಗಳನ್ನು ತನಿಖೆ ಮಾಡಲು ಜಂಟಿ ಸಂಸದೀಯ ಸಮಿತಿಗೆ ಬೇಡಿಕೆ, ಮಣಿಪುರದ ಜನರು ಎದುರಿಸುತ್ತಿರುವ ನಿರಂತರ ಸಂಕಟ, ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರಗಳು ಮತ್ತು ಸಾಮಾಜಿಕ ಸಾಮರಸ್ಯದ ಕುಸಿತ, ಹರಿಯಾಣದಂತಹ ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆ, ಚೀನಾದಿಂದ ಭಾರತೀಯ ಭೂಪ್ರದೇಶದಲ್ಲಿ ಮುಂದುವರಿದ ಆಕ್ರಮಣ ಮತ್ತು ಲಡಾಖ್ ಮತ್ತು ಅರುಣಾಚಲ ಪ್ರದೇಶದ ನಮ್ಮ ಗಡಿಗಳಲ್ಲಿ ನಮ್ಮ ಸಾರ್ವಭೌಮತ್ವಕ್ಕೆ ಸವಾಲುಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ