ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ತಿಳಿಸಿದ ಸುಬ್ರಮಣಿಯನ್ ಸ್ವಾಮಿ
ಗುರುವಾರ, 30 ಮೇ 2019 (12:58 IST)
ನವದೆಹಲಿ : ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಯಾರೆಲ್ಲ ಸ್ಥಾನ ಪಡೆಯಬಹುದು ಎಂಬ ಕುತೂಹಲ ಹಲವರಲ್ಲಿದೆ. ಈ ನಡುವೆ ಸುಬ್ರಮಣಿಯನ್ ಸ್ವಾಮಿ ಅವರು ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಟ್ವೀಟ್ ವೊಂದಕ್ಕೆ ರಿಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ತಿಳಿಸಿದ್ದಾರೆ.
ರಾಮಚಂದ್ರ ಆರ್ ಎಂಬುವವರು ತಮ್ಮ ರಾಮ್ ಸೇತು ಎಂಬ ಟ್ವಿಟ್ಟರ್ ಖಾತೆಯಿಂದ ಸುಬ್ರಮಣಿಯನ್ ಸ್ವಾಮಿ ಅವರನ್ನು ಟ್ಯಾಗ್ ಮಾಡಿ, "ಸರ್, ನೀವು ಎನ್ ಡಿಎ ಸರ್ಕಾರದಲ್ಲಿ ಸಕ್ರಿಯ ಸ್ಥಾನ ಪಡೆದು ಮಾನವ ಸಂಪನ್ಮೂಲ ಇಲಾಖೆ ಸಚಿವರಾಗಿ, ಆಗ ಶಾಲಾ ಪಠ್ಯ ಪುಸ್ತಕಗಳನ್ನು ಬದಲಿಸಿಬಹುದು" ಎಂದಿದ್ದರು.
ಈ ಟ್ವೀಟ್ ಗೆ ರೀಟ್ವೀಟ್ ಮಾಡಿದ ಸುಬ್ರಮಣಿಯನ್ ಸ್ವಾಮಿ, "ನಾನು ಚೌಕಿದಾರ್ ಅಲ್ಲ, ಬದಲಾಗಿ 'ಮಜದೂರ್' (ಕಾರ್ಮಿಕ). ಏಕೆಂದರೆ, ಬಿಜೆಪಿ ಪರವಾಗಿ ಎಷ್ಟೆಲ್ಲ ಕೇಸುಗಳನ್ನು ಫೈಟ್ ಮಾಡಿ ಪಕ್ಷಕ್ಕಾಗಿ ಬಹುಮಹಡಿ ಕಟ್ಟಡ ನಿರ್ಮಿಸಿದ್ದೇನೆ. ಆದರೆ, ನನಗೇ ಐಷಾರಾಮಿ ಬಂಗಲೆ ಸಿಗುತ್ತಿಲ್ಲ. ಹೀಗೆ ಯಾಕಾಗುತ್ತದೆಂದು ಮಹಾಭಾರತ ಯುದ್ಧದ ನಂತರ ಕೃಷ್ಣನೇ ಅರ್ಜುನನಿಗೆ ವಿವರಿಸಿದ್ದ ಎಂದಿದ್ದರು. ಈ ಮೂಲಕ ಅವರು ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.