ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಇಂದು I2U2(ಭಾರತ, ಇಸ್ರೇಲ್, ಅಮೆರಿಕ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್) ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಸ್ರೇಲ್ ಪಿಎಂ ಯೈರ್ ಲ್ಯಾಪಿಡ್ ಹಾಗೂ ಯುನೈಟೆಡ್ ಅರಬ್ ಎಮಿರೆಟ್ಸ್ನ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮೊದಲ ಶೃಂಗಸಭೆಯಿಂದಲೇ I2U2 ಸಕಾರಾತ್ಮಕ ಕಾರ್ಯಸೂಚಿಯನ್ನು ಸ್ಥಾಪಿಸಿದೆ. ನಾವು ವಿವಿಧ ವಲಯಗಳಲ್ಲಿ ಜಂಟಿ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೇವೆ ಹಾಗೂ ಮುಂದುವರಿಯಲು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳಿದರು.
I2U2 ಚೌಕಟ್ಟಿನ ದೇಶಗಳು ನೀರು, ಇಂಧನ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ ಹಾಗೂ ಆಹಾರ ಭದ್ರತೆಯಂತಹ 6 ಪ್ರಮುಖ ಕ್ಷೇತ್ರಗಳಲ್ಲಿ ಜಂಟಿಯಾಗಿ ಹೂಡಿಕೆಯನ್ನು ಹೆಚ್ಚಿಸಲು ಒಪ್ಪಿಕೊಂಡಿದ್ದೇವೆ. I2U2ನ ದೃಷ್ಟಿ ಮತ್ತು ಕಾರ್ಯಸೂಚಿ ಪ್ರಗತಿಪರ ಮತ್ತು ಪ್ರಾಯೋಗಿಕವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಮೋದಿ ತಿಳಿಸಿದರು.