ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಇಂದು 5.19ಕ್ಕೆ ಸಂಜೆ ಸೂರ್ಯ ರಶ್ಮಿ ಲಿಂಗವನ್ನು ಸ್ಪರ್ಶಿಸಿ ಹಾಗುಹೋಗುವ ಕೌತುಕ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಗಣ ಇದನ್ನು ಕಣ್ತುಂಬಿಸಿಕೊಂಡು ಪುನೀತವಾಯಿತು.
ಮಕರ ಸಂಕ್ರಾಂತಿ ಹಬ್ಬದ ದಿನ ಸೂರ್ಯ ತನ್ನ ಪಥ ಬದಲಿಸುತ್ತಾನೆ. ಪ್ರತಿವರ್ಷ ಈ ವಿಶೇಷ ದಿನದಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯ ರಶ್ಮಿ ಹಾದು ಹೋಗುತ್ತವೆ. ಹೀಗಾಗಿ ಇಂದು ಮುಂಜಾನೆಯಿಂದ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ, ಅಭಿಷೇಕ ನಡೆಯುತ್ತಿತ್ತು.
ಇಂದು ನಸುಕಿನ ಜಾವದಿಂದ ಅಪಾರ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ದೇವಸ್ಥಾನ ಗವಿಯಲ್ಲಿರುವುದರಿಂದ ಏಕಕಾಲಕ್ಕೆ ಕೇವಲ 20 ರಿಂದ 25 ಜನ ಮಾತ್ರ ದೇವರ ದರ್ಶನ ಪಡೆಯಬಹುದು. ಹೀಗಾಗಿ ಸೂರ್ಯ ರಶ್ಮಿ ಗಂಗಾಧರನನ್ನು ಸ್ಪರ್ಶಿಸುವ ದೃಶ್ಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ದೇವಸ್ಥಾನದದ ಹೊರಗೆ ಎಲ್‌ಸಿಡಿ ಮಾನಿಟರ್ ಅಳವಡಿಸಲಾಗಿತ್ತು.
ಸರಿಯಾಗಿ 5.19ಕ್ಕೆ ಸೂರ್ಯರಶ್ಮಿ ನಂದಿಯ ಕೊಂಬಿನ ಸುತ್ತ ಹರಿದು ಶಿವಲಿಂಗದ ಪಾದವನ್ನು ಸ್ಪರ್ಶಿಸಿ ಬಳಿಕ ಲಿಂಗವನ್ನು ಹೊಂಬಣ್ಣದ್ದಾಗಿಸಿತು. ಆ ಪುಣ್ಯ ಸಮಯದಲ್ಲಿ ಶಿವಲಿಂಗಕ್ಕೆ ಹೆಚ್ಚಿನ ಶಾಖ ಉಂಟಾಗಬಾರದೆಂದು ಅರ್ಚಕರು ಹಾಲಿನ ಅಭಿಷೇಕ ನೆರವೇರಿಸಿದರು. ಈ ವಿಸ್ಮಯಕಾರಿ ಘಳಿಗೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ