ತ್ರಿವಳಿ ತಲಾಖ್ ವಿಚಾರಣೆ ಅಂತ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ಗುರುವಾರ, 18 ಮೇ 2017 (21:36 IST)
ತಲಾಖ್ ಸಾಂವಿಧಾನಿಕ ಮಾನ್ಯತೆ ಕುರಿತ ಅರ್ಜಿಗಳ ವಿಚಾರಣೆಯನ್ನ ಸುಪ್ರೀಂಕೋರ್ಟ್ ಸಂವಿಧಾನ ಪೀಠ ಮುಕ್ತಾಯಗೊಳಿಸಿದ್ದು, ತೀರ್ಪನ್ನ ಕಾಯ್ದಿರಿಸಿದೆ.
ತಲಾಖ್, ನಿಖಾ ಹಲಾಲ್, ಬಹುಪತ್ನಿತ್ವ ಕುರಿತಾದ ಅರ್ಜಿಗಳು ಸುಪ್ರೀಂಕೋರ್ಟ್ ಮುಂದೆ ಬಂದಿದ್ದವು. ಬೇಸಿಗೆ ರಜಾ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತೀ ಖೇಹರ್ ನೇತೃತ್ವದಲ್ಲಿ ಐವರು ವಿವಿಧ ಧರ್ಮಗಳ ನ್ಯಾಯಾಧೀಶರನ್ನೊಳಗೊಂಡ ಪಂಚ ಪೀಠ ವಿಚಾರಣೆ ನಡೆಸಿದೆ.
ಅಂತಿಮ ವಾದ-ವಿವಾದದ ವೇಳೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ, ತ್ರಿವಳಿ ತಲಾಖ್ ಅನ್ನ ಸಮರ್ಥನೆ ಮಾಡಿಕೊಂಡಿದ್ದು, ತಲಾಖ್ ವೇಳೆ ಮಹಿಳೆಯರ ವಾದವನ್ನೂ ಪರಿಗಣಿಸುವಂತೆ ಖಾಸಿಗಳಿಗೆ ಸಲಹೆ ಮತ್ತು
ಸೂಚನೆಗಳ ಜಾರಿಗೆ ಸಿದ್ಧವಿರುವುದಾಗಿ ಹೇಳಿದೆ. ಈ ಸಂದರ್ಭ ಸುಪ್ರೀಂಕೋರ್ಟ್, ತಲಾಖ್ ತಿರಸ್ಕರಿಸುವ ಅಧಿಕಾರ ಪತ್ನಿಗಿದೆಯೇ ಮತ್ತು ತ್ರಿವಳಿ ತಲಾಖ್ ಬಗ್ಗೆ ಖುರಾನಿನಲ್ಲಿ ಉಲ್ಲೇಖವಿದೆಯೇ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನ ಪ್ರಶ್ನಿಸಿದೆ.
ಬುಧವಾರ ಕೇಂದ್ರ ಸರ್ಕಾರ ಸಹ ತ್ರಿವಳಿ ತಲಾಖ್ ನಿಷೇಧಿಸುವಂತೆ ಸುಪ್ರೀಂಕೋರ್ಟ್`ಗೆ ಮನವಿ ಸಲ್ಲಿಸಿತ್ತು. 25 ರಾಷ್ಟ್ರಗಳಲ್ಲಿ ನಿಷೇಧಗೊಂಡಿರುವ ತಲಾಖ್ ಕಡ್ಡಾಯವೆಂದು ಹೇಳಲಾಗದು ಎಂದು ಅಟಾರ್ನಿ ಜನರಲ್ ವಾದಿಸಿದ್ದರು. ಜುಲೈನಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ.