ಹಳೆಯ ನೋಟುಗಳ ಬದಲಾವಣೆಗೆ ಸಿಗುತ್ತಾ ಮತ್ತೊಂದು ಅವಕಾಶ..?

ಬುಧವಾರ, 12 ಏಪ್ರಿಲ್ 2017 (11:35 IST)
ಹಳೆಯ 500 ಮತ್ತು 1000 ರೂಪಾಯಿ ನೋಟುಗಳನ್ನ ಬದಲಾಯಿಸಿಕೊಳ್ಳಲು ಸಾಧ್ಯವಾಗದೇ ಇರುವವರಿಗೆ ಜುಲೈನಲ್ಲಿ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ. ಡಿಸೆಂಬರ್ 30ವರೆಗೆ ಹಣ ಡೆಪಾಸಿಟ್ ಮಾಡಲು ಸಾಧ್ಯವಾಗದೇ ಇರುವವರು ಸೂಕ್ತ ಕಾರಣ ನೀಡಿದಲ್ಲಿ ಹಣ ಬದಲಾವಣೆಗೆ ಮತ್ತೊಂದು ಅವಕಾಶ ನೀಡಲು ಕೆಂದ್ರಕ್ಕೆ ಸೂಚಿಸಬೇಕೆ..? ಎಂಬ ಬಗ್ಗೆ ಜುಲೈನಲ್ಲಿ ಆದೇಶ ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಅಲ್ಲದೆ, ಒಂದೊಮ್ಮೆ ಹಣ ಬದಲಾವಣೆಯ ಅವಕಾಶ ನೀಡಿದ್ದೇ ಆದಲ್ಲಿ ಅದು ಕೇವಲ ವೈಯಕ್ತಿಕ ವ್ಯಕ್ತಿಗಲ್ಲ. ಎಲ್ಲರಿಗೂ ಅನ್ವಯಿಸಲಿದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.  ಹೀಗಾಗಿ, ಸುಪ್ರೀಂಕೋರ್ಟ್ ಮೂಲಕ ನೋಟು ಬದಲಾವಣೆಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ.

ನೋಟು ಬದಲಾವಣೆಗೆ ಮಾರ್ಚ್`ವರೆಗೆ ಅವಕಾಶ ನೀಡುವುದಾಗಿ ಮೋದಿ ಹೇಳಿದ್ದರು. ಆದರೆ, ತಮ್ಮಲ್ಲಿದ್ದ ಹಳೆಯ ನೋಟುಗಳನ್ನ ಆರ್`ಬಿಐ ಸ್ವೀಕರಿಸಿಲ್ಲ ಇನ್ನೂ ಮುಂತಾದ ಕಾರಣಗಳನ್ನೊಳಗೊಂಡ ಅರ್ಜಿಗಳು ಕೋರ್ಟ್ ಮುಂದೆ ಬಂದಿವೆ. ಮಹಿಳೆಯೊಬ್ಬರು ತನ್ನ ತಂದೆಯ ಲಾಕರ್`ನಲ್ಲಿ ಇದ್ದ ಹಳೆಯ ನೊಟುಗಳ ಬದಲಾವಣೆಗೆ ಅವಕಾಶ ಕೋರಿದ್ದಾರೆ. ಆಸ್ತಿಯ ವ್ಯಾಜ್ಯ ಕೋರ್ಟ್`ನಲ್ಲಿದ್ದರಿಂದ ಲಾಕರ್ ತೆರೆಯಲು ಸಾಧ್ಯವಾಗಿಲ್ಲ. ಇದೀಗ, ಕೇಸ್ ಮುಗಿದ ಬಳಿಕ ಅಪ್ಪನ ಲಾಕರ್ ತೆಗೆದಿದ್ದು ಅದರಲ್ಲಿ ಹಳೆಯ ನೋಟುಗಳು ಸಿಕ್ಕಿದ್ದು, ಅವುಗಳ ಬದಲಾವಣೆಗೆ ಅವಕಾಶ ನೀಡುವಂತೆ ಕೋರಿದ್ದಾರೆ.

ಈ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಖೇಹರ್ ನೇತೃತ್ವದ ತ್ರಿಸದಸ್ಯ ಸುಪ್ರೀಂಕೋರ್ಟ್ ಪೀಠ  ಜುಲೈನಲ್ಲಿ ಈ ಕುರಿತ ಆದೇಶ ಹೊರಡಿಸುವುದಾಗಿ ಹೇಳಿದೆ.

 

ವೆಬ್ದುನಿಯಾವನ್ನು ಓದಿ