ಯುಪಿಎ ಆಡಳಿತಾವಧಿಯಲ್ಲಿ ಮೂರು ಬಾರಿ ಸೀಮಿತ ದಾಳಿ

ಬುಧವಾರ, 5 ಅಕ್ಟೋಬರ್ 2016 (14:53 IST)
ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಒಟ್ಟು ಮೂರು ಬಾರಿ ಸೀಮಿತ ದಾಳಿಯನ್ನು ಕೈಗೊಳ್ಳಲಾಗಿತ್ತು. ಆದರೆ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಇದನ್ನು ಎಂದು ಹೊರಹಾಕಿರಲಿಲ್ಲ ವಿರೋಧ ಪಕ್ಷ ಕಾಂಗ್ರೆಸ್ ಹೇಳಿದೆ. 

ಈ ಹಿಂದೆ ಕೂಡ ನಮ್ಮ ಸೇನೆ ಅನೇಕ ಬಾರಿ ಇಂತರ ಸೀಮಿತ ದಾಳಿಯನ್ನು ನಡೆಸಿ ಯಶಸ್ವಿಯಾಗಿತ್ತು ಎಂದು ಹೇಳಲು ಹೆಮ್ಮೆಯಾಗುತ್ತದೆ. ಯುಪಿಎ ಆಡಳಿತಾವಧಿಯಲ್ಲಿ ಸೆಪ್ಟೆಂಬರ್ 1,2011, ಜುಲೈ 28,2013 ಮತ್ತು ಜನೇವರಿ 14, 2014ರಲ್ಲಿ ನಾವು ವೈರಿಗಳಿಗೆ ತಕ್ಕ ಉತ್ತರವನ್ನು ನೀಡಿದ್ದೆವು ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. 
 
ಆದರೆ ಪ್ರೌಢಿಮೆ, ಬುದ್ದಿವಂತಿಕೆ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಭಾರತೀಯ ಸೇನೆಯ ಪರಿಣಾಮಾತ್ಮಕ ಪ್ರತಿಕ್ರಿಯೆ ಮತ್ತು ಕಾರ್ಯಾಚರಣೆ ಬಗ್ಗೆ ಪ್ರಚಾರ ಮಾಡಿರಲಿಲ್ಲ. ಎಲ್ಲ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಯನ್ನುಸಾರ್ವಜನಿಕ ವೇದಿಕೆಯ ಮುಂದಿಡಲಾಗದು ಎಂದು ಅವರು ತಿಳಿಸಿದ್ದಾರೆ.
 
ಕೇವಲ ಕಾಂಗ್ರೆಸ್ ಸರ್ಕಾರವಲ್ಲ. ಈ ಹಿಂದಿನ ಸರ್ಕಾರಗಳು ಕೂಡ ಸೀಮಿತ ದಾಳಿಯನ್ನು ಕೈಗೊಂಡಿದ್ದವು. ರಾಜಕೀಯ ಭೇದಗಳಿದ್ದರೂ ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಬಂದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರತ್ಯೇಕ ಅಭಿಪ್ರಾಯಗಳಿಲ್ಲ ಎಂದಿದ್ದಾರೆ ಸುರ್ಜೇವಾಲ.
 
ಪಾಕ್ ಸೀಮಿತ ದಾಳಿ ನಡೆದೇ ಇಲ್ಲ ಎನ್ನುತ್ತಿರುವ ಬಗ್ಗೆ ಪ್ರತಿಕ್ರಿಯೆ ಕೇಳಲಾಗಿ, ಸೀಮಿತ ದಾಳಿ ಮೇಲೆ ಪ್ರಶ್ನೆ ಎತ್ತಲು ಯಾವುದೇ ಕಾರಣಗಳಿಲ್ಲ. ಎಲ್ಲ ಸಾಕ್ಷ್ಯ, ದಾಖಲೆಗಳೊಂದಿಗೆ ಕೇಂದ್ರ ಸರ್ಕಾರ ಪಾಕಿಸ್ತಾನದ ಮೋಸ ಮತ್ತು ಸುಳ್ಳು ಪ್ರಚಾರವನ್ನು ಬಯಲು ಮಾಡಬೇಕೆಂದು ಎಂದು ಅವರು ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ