ಭೋಪಾಲ್ : ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ (99) ಅವರು ಭಾನುವಾರ ಮಧ್ಯಪ್ರದೇಶದ ನರಸಿಂಗ್ಪುರದಲ್ಲಿ ನಿಧನರಾದರು.
ನರಸಿಂಗ್ಪುರದ ಶ್ರೀಧಾಮ ಜೋತೇಶ್ವರ ಆಶ್ರಮದಲ್ಲಿ ಮಧ್ಯಾಹ್ನ 3.30ಕ್ಕೆ ಸ್ವರೂಪಾನಂದರು ಕೊನೆಯುಸಿರೆಳೆದರು. ಲಘು ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ ಎಂದು ತಿಳಿಸಲಾಗಿದೆ. ಸ್ವರೂಪಾನಂದರ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.
ಸ್ವರೂಪಾನಂದರು ಸಿಯೋನಿ ಜಿಲ್ಲೆಯ ಜಬಲ್ಪುರ ಸಮೀಪದ ದಿಘೋರಿ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. 9ನೇ ವಯಸ್ಸಿನಲ್ಲಿ ಮನೆ ತೊರೆದ ಅವರು ಹಿಂದೂ ಧರ್ಮದ ಉನ್ನತಿಗಾಗಿ ಧರ್ಮದ ಪ್ರಯಾಣವನ್ನು ಪ್ರಾರಂಭಿಸಿದರು.
ಸ್ವರೂಪಾನಂದ ಸರಸ್ವತಿ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು. ಆ ಸಮಯದಲ್ಲಿ ಅವರನ್ನು ಕ್ರಾಂತಿಕಾರಿ ಸಾಧು ಎಂದು ಕರೆಯಲಾಗುತ್ತಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೂ ಕೊಡುಗೆ ನೀಡಿದ್ದಾರೆ.