ಜಲ್ಲಿಕಟ್ಟುಗೆ ಅಧಿಕೃತ ಚಾಲನೆ: 36ಕ್ಕೂ ಹೆಚ್ಚು ಜನರಿಗೆ ಗಾಯ

ಭಾನುವಾರ, 5 ಫೆಬ್ರವರಿ 2017 (17:34 IST)
ಮಧುರೈನ ಅವನೀಯಪುರಂ ಪಟ್ಟಣದಲ್ಲಿ ಇಂದು ಅಧಿಕೃತವಾಗಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿದೆ. 900ಕ್ಕೂ ಹೆಚ್ಚು ಎತ್ತುಗಳು ಮತ್ತು 700ಕ್ಕೂ ಹೆಚ್ಚು ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ದೇಶವಿದೇಶಗಳಿಂದ ಸಾವಿರಾರು ಜನರು ಪಂದ್ಯ ವೀಕ್ಷಿಸಲು ನೆರೆದಿದ್ದಾರೆ. 
ಬರೊಬ್ಬರಿ ಎರಡು ವರ್ಷದ ಬಳಿಕ ಹಾಗೂ ಜಲಿಕಟ್ಟು ನಿರ್ಬಂಧ ತೆರವುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಈ ಸಾಂಪ್ರದಾಯಿಕ ಆಚರಣೆಗೆ ಅಧಿಕೃತ ಚಾಲನೆ ದೊರೆತಿದೆ. 
 
ಕಂದಾಯ ಸಚಿವ ಆರ್.ಬಿ. ಉದಯ ಕುಮಾರ್ ಮತ್ತು ಜಿಲ್ಲಾಧಿಕಾರಿ ವೀರರಾಘವ ರಾವ್ ಇಂದು ಮುಂಜಾನೆ ಜಲ್ಲಿಕಟ್ಟಿಗೆ ಚಾಲನೆ ನೀಡಿದ್ದು ಪಂದ್ಯದ ಆಯೋಜನೆಯಲ್ಲಿ ಸುಪ್ರೀಂಕೋರ್ಟ್‌ನ ಎಲ್ಲ ಮಾರ್ಗದರ್ಶನಗಳನ್ನು ಅನುಸರಿಸಲಾಗಿದೆ.
 
ಸ್ಪರ್ಧಾಳುಗಳಿಗೆ ಸಮವಸ್ತ್ರಗಳನ್ನು ನೀಡಲಾಗಿದ್ದು, ವೀಕ್ಷಕರು ಆಖಾಡದತ್ತ ನುಗ್ಗುವುದನ್ನು ತಪ್ಪಿಸಲು ವಿಶೇಷ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ.10 ಅಂಬುಲೆನ್ಸ್ ಮತ್ತು ಮೊಬೈಲ್ ಐಸಿಯುವಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ಜಲ್ಲಿಕಟ್ಟು ಕ್ರೀಡೆ ಮೇಲಿನ ನಿರ್ಬಂಧವನ್ನು ತೆರವು ಗೊಳಿಸಬೇಕೆಂದು ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯಾದ್ಯಂತ ಭಾರಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿದ ಬೆನ್ನಲ್ಲೇ ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲ್ಪಟ್ಟ ಜಲ್ಲಿಕಟ್ಟು ಮಸೂದೆ ಅವಿರೋಧವಾಗಿ ಅಂಗೀಕಾರಗೊಂಡಿತ್ತು.
 
ಏತನ್ಮಧ್ಯೆ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ 36 ಮಂದಿ ಗಾಯಗೊಂಡಿದ್ದು. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಹರಿದು ಬಂದಿದೆ. ಸ್ಪರ್ಧೆ ನಡೆಯುತ್ತಿರುವ ಸಮೀಪ ಹಾಕಲಾಗಿರುವ ಟೆಂಟ್ ನಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ