ಜಯಲಲಿತಾ ಸಾವಿನ ಬಗ್ಗೆ ತನಿಖೆಗೆ ಆದೇಶಿಸಿದ ಸಿಎಂ ಪಳನಿಸ್ವಾಮಿ

ಗುರುವಾರ, 17 ಆಗಸ್ಟ್ 2017 (18:50 IST)
ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಎಐಎಡಿಎಂಕೆ ಎರಡು ಬಣಗಳ ವಿಲೀನಕ್ಕೆ ದಾರಿ ಮಾಡಿಕೊಡುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ದಿವಂಗತ ಜೆ. ಜಯಲಲಿತಾ ಸಾವಿನ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗ ರಚಿಸಲಾಗುವುದು. ಜಯಲಲಿತಾ ಅವರ ನಿವಾಸವನ್ನು ಸ್ಮಾರಕವಾಗಿ ಬದಲಿಸಲಾಗುವುದು ಎಂದು ತಿಳಿಸಿದ್ದಾರೆ. 
 
ಪನ್ನೀರ್ ಸೆಲ್ವಂ ನೇತೃತ್ವದ ಪುರಚಿ ತಲೈವಿ ಅಮ್ಮಾ ಬಣ, ಉಭಯ ಬಣಗಳ ಮಾತುಕತೆ ನಡೆಯಬೇಕಾದಲ್ಲಿ ಅಮ್ಮಾ(ಜಯಲಲಿತಾ) ಸಾವಿನ ಬಗ್ಗೆ ತನಿಖೆಯಾಗಬೇಕು ಎನ್ನುವ ಷರತ್ತನ್ನು ಸಿಎಂ ಪಳನಿಸ್ವಾಮಿಗೆ ವಿಧಿಸಿತ್ತು. 
 
ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮುಖ್ಯ ಆರೋಪಿಯಾಗಿರುವ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಮುಖ್ಯಸ್ಥೆ ವಿ.ಕೆ. ಶಶಿಕಲಾ ಮತ್ತು ಅವರ ಕುಟುಂಬದ ಸದಸ್ಯರನ್ನು ಪಕ್ಷದಿಂದ ಹೊರಹಾಕಬೇಕು ಎನ್ನುವುದು ಪನ್ನೀರ್‌ಸೆಲ್ವಂ ಬಣದ ಪ್ರಮುಖ ಬೇಡಿಕೆಯಾಗಿದೆ.
 
ಆಗಸ್ಟ್ 15 ರಂದು ಹಿರಿಯ ಎಐಎಡಿಎಂಕೆ (ಅಮ್ಮ) ನಾಯಕ ತಮಿಳುನಾಡು ಸಚಿವ ಕೆ.ಎ. ಸೆಂಗೊಟೈಯ್ಯನ್ ಮಾತನಾಡಿ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಬಣಗಳ ವಿಲೀನ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದ್ದರು.
 
ಮತ್ತೊಂದೆಡೆ, ಎಐಎಡಿಎಂಕೆ (ಅಮ್ಮ) ನಾಯಕ ಮತ್ತು ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್,  ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ನೇತೃತ್ವದ ಬಣಗಳು ನಮ್ಮ ವಿರುದ್ಧವಾದಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ