ಕೇಂದ್ರವು ತನ್ನ ಆಯ್ಕೆಯ ವ್ಯಕ್ತಿಗಳನ್ನು ನೇಮಿಸುತ್ತಿದೆ:ಸುಪ್ರೀಂ ಕಿಡಿ

ಗುರುವಾರ, 16 ಸೆಪ್ಟಂಬರ್ 2021 (10:25 IST)
ಹೊಸದಿಲ್ಲಿ,ಸೆ.16 :  ಕೇಂದ್ರ ಸರಕಾರವು ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ನ್ಯಾಯಾಲಯವು ಶಿಫಾರಸು ಮಾಡಿರುವ ಪಟ್ಟಿಯಲ್ಲಿನ ತನ್ನ ಇಷ್ಟದ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ಅಸಮಾಧಾನವನ್ನು ವ್ಯಕ್ತಪಡಿಸಿತು.

ನ್ಯಾಯಮಂಡಳಿಗಳು ಆಡಳಿತಾತ್ಮಕ ಮತ್ತು ತೆರಿಗೆ ಸಂಬಂಧಿತ ವಿವಾದಗಳನ್ನು ಇತ್ಯರ್ಥಗೊಳಿಸುವ ಅರೆ ನ್ಯಾಯಾಂಗ ಸಂಸ್ಥೆಗಳಾಗಿದ್ದು,ದೇಶಾದ್ಯಂತ 15 ನ್ಯಾಯಮಂಡಳಿಗಳಲ್ಲಿ 200ಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ ಎನ್ನಲಾಗಿದೆ.
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(ಎನ್ಸಿಎಲ್ಟಿ) ಮತ್ತು ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ನೇಮಕಾತಿಗಳನ್ನು ಮಾಡುತ್ತಿರುವ ಸರಕಾರದ ರೀತಿಯು ತನಗೆ ಹಿಡಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹಾಗೂ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಲ್.ನಾಗೇಶ್ವರ ರಾವ್ ಅವರ ಪೀಠವು ಹೇಳಿತು.
ಆಯ್ಕೆ ಪಟ್ಟಿಯನ್ನು ತಾನು ನೋಡಿದ್ದೇನೆ. ಆಯ್ಕೆ ಸಮಿತಿಯು ಒಂಭತ್ತು ನ್ಯಾಯಾಂಗ ಸದಸ್ಯರನ್ನು ಮತ್ತು 10 ತಾಂತ್ರಿಕ ಸದಸ್ಯರನ್ನು ಶಿಫಾರಸು ಮಾಡಿತ್ತು. ಆಯ್ಕೆ ಪಟ್ಟಿಯಲ್ಲಿನ ಮೂರು ಹೆಸರುಗಳನ್ನು ಮತ್ತು ಆಯ್ಕೆ ಪಟ್ಟಿಯಲ್ಲಿನ ಇತರ ಹೆಸರುಗಳನ್ನು ಕಡೆಗಣಿಸಿ ಕಾಯುವಿಕೆ ಪಟ್ಟಿಯಿಂದ ಇತರರನ್ನು ಆಯ್ಕೆ ಮಾಡಿರುವುದನ್ನು ನೇಮಕಾತಿ ಪತ್ರಗಳು ತೋರಿಸುತ್ತಿವೆ ಎಂದು ನ್ಯಾ.ರಮಣ ಬೆಟ್ಟು ಮಾಡಿದರು. ಸೇವಾ ಕಾನೂನಿನಲ್ಲಿ ಸರಕಾರವು ಅಭ್ಯರ್ಥಿಗಳ ಆಯ್ಕೆ ಪಟ್ಟಿಯ ಬದಲಿಗೆ ಕಾಯುವಿಕೆ ಪಟ್ಟಿಯಲ್ಲಿನ ಹೆಸರುಗಳನ್ನು ಪರಿಗಣಿಸುವಂತಿಲ್ಲ. ಕೇಂದ್ರ ಸರಕಾರವು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಸಮ್ಮತಿಸಿರುವ ಹೆಸರುಗಳಲ್ಲಿಯೂ ಇದೇ ಸಮಸ್ಯೆಯಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರಿಗೆ ತಿಳಿಸಿದ ನ್ಯಾ.ರಮಣ,'ಸರಕಾರವು ವ್ಯವಹರಿಸುತ್ತಿರುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ರೀತಿಯು ನಮಗೆ ತೀವ್ರ ಅಸಂತೋಷವನ್ನುಂಟು ಮಾಡಿದೆ. ಸಂದರ್ಶನಗಳನ್ನು ನಡೆಸಿದ ಬಳಿಕ ನಾವು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುತೇವೆ ಮತ್ತು ತಾನು ಅವರನ್ನು ಆಯ್ಕೆ ಮಾಡುವುದಿಲ್ಲ ಎಂದು ಸರಕಾರವು ಹೇಳುತ್ತಿದೆ 'ಎಂದರು.
ತಾನೂ ಎನ್ಸಿಎಲ್ಟಿ ಆಯ್ಕೆ ಸಮಿತಿಯ ಭಾಗವಾಗಿದ್ದೆ. ಸಮಿತಿಯು ನ್ಯಾಯಾಂಗ ಸದಸ್ಯರ ಹುದ್ದೆಗೆ 534 ಮತ್ತು ತಾಂತ್ರಿಕ ಸದಸ್ಯರ ಹುದ್ದೆಗೆ 400 ಜನರನ್ನು ಸಂದರ್ಶನಕ್ಕೊಳಪಡಿಸಿತ್ತು. ಈ ಪೈಕಿ 10 ನ್ಯಾಯಾಂಗ ಸದಸ್ಯರು ಮತ್ತು 11 ತಾಂತ್ರಿಕ ಸದಸ್ಯರ ಪಟ್ಟಿಯನ್ನು ಸಮಿತಿಯು ಶಿಫಾರಸು ಮಾಡಿತ್ತು. ನ್ಯಾಯಾಂಗ ಸದಸ್ಯರ ಪಟ್ಟಿಯಲ್ಲಿ ಸರಕಾರವು ಕೇವಲ ನಾಲ್ವರನ್ನು ಆಯ್ಕೆ ಮಾಡಿಕೊಂಡಿದೆ ಮತ್ತು ನಂತರ ಕಾಯುವಿಕೆ ಪಟ್ಟಿಯಲ್ಲಿನ ಹೆಸರುಗಳನ್ನು ಪರಿಗಣಿಸಿದೆ ಎಂದು ನ್ಯಾ.ರಮಣ ಹೇಳಿದರು.
ಮಂಗಳವಾರ ರಾತ್ರಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೇಂದ್ರವು,ತಾನು 2020ರಿಂದ ನ್ಯಾಯಮಂಡಳಿಗಳಿಗೆ 84 ಸದಸ್ಯರನ್ನು ನೇಮಕಗೊಳಿಸಿದ್ದೇನೆ ಮತ್ತು ಸರಕಾರದ ಬಳಿ ಯಾವುದೇ ಶಿಫಾರಸುಗಳು ಬಾಕಿಯಿಲ್ಲ ಎಂದು ತಿಳಿಸಿತ್ತು. ನ್ಯಾ.ರಮಣ ನೇತೃತ್ವದ ಶೋಧ ಮತ್ತು ಆಯ್ಕೆ ಸಮಿತಿಯು ಸಲ್ಲಿಸಿದ್ದ ಎಲ್ಲ ಹೆಸರುಗಳನ್ನು ತಾನು ಪರಿಗಣಿಸಿದ್ದೇನೆ ಎಂದೂ ಅದು ಹೇಳಿತ್ತು.
ಸೆ.6ರಂದು ಸರ್ವೋಚ್ಚ ನ್ಯಾಯಾಲಯವು ದೇಶಾದ್ಯಂತ ನ್ಯಾಯಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವಲ್ಲಿ ಕೇಂದ್ರದ ನಿಷ್ಕ್ರಿಯತೆಗಾಗಿ ಅದನ್ನು ಕಟುವಾಗಿ ಟೀಕಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ