2023 ರ ಚುನಾವಣೆಗೆ ಇಡೀ ರಾಜ್ಯ ಸುತ್ತುತ್ತೇನೆ: ಎಚ್.ಡಿ. ದೇವೇಗೌಡ

ಬುಧವಾರ, 13 ಅಕ್ಟೋಬರ್ 2021 (14:52 IST)
ವಿಜಯಪುರ : ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿವೆ. 2023 ರ ಚುನಾವಣೆಗೆ ಇಡೀ ರಾಜ್ಯ ಸುತ್ತುತ್ತೇನೆ.

ಜೆಡಿಎಸ್ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೇನೆ, ಯಾವ ಪಕ್ಷದ ಜೊತೆ ಚುನಾವಣೆ ಸಂಬಂಧ ಇರಿಸಿಕೊಳ್ಳದೇ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಅವರು ಬುಧವಾರ ಉತ್ಸಾಹದ ಮಾತುಗಳನ್ನಾಡಿದ್ದಾರೆ.
ಉಪ ಚುನಾವಣೆ ಹಿನ್ನೆಲೆಯಲ್ಲಿ ಸಿಂದಗಿ ನಗರಕ್ಕೆ ಅಗಮಿಸಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತದಾರರ ತೀರ್ಪು ಅಂತಿಮ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ನಾನು ಯಾರ ವಿರುದ್ಧವೂ ಆಪಾದನೆ ಮಾಡುವುದಿಲ್ಲ. ಸಿಂದಗಿ ಉಪ ಚುನಾವಣೆ ಪಕ್ಷದ ಅಳಿವು, ಉಳಿವಿನ ಪ್ರಶ್ನೆಯಲ್ಲ. ನಮ್ಮ ಪಕ್ಷವನ್ನು ಮುಗಿಸಲು ಎರಡು ರಾಜಕೀಯ ಪಕ್ಷಗಳು ಏನೆಲ್ಲಾ ಪ್ರಯತ್ನ ಮಾಡಿದರೂ ಸಾಧ್ಯವಾಗಿಲ್ಲ ಎಂದರು.
ಸಿಂದಗಿ ಶಾಕರಾಗಿದ್ದ ದಿ.ಎಂ.ಸಿ.ಮನಗೂಳಿ ಅವರನ್ನು ಸ್ಮರಿಸಿದ ದೇವೇಗೌಡರು, ಎಂ.ಸಿ.ಮನಗೂಳಿ 1994 ರಿಂದ ನನ್ನ ಸಹಪಾಠಿಯಾಗಿ ಕೆಲಸ ಮಾಡಿದ್ದರು. ಸಿಂದಗಿ ಕ್ಷೇತ್ರದ ಅಭಿವೃದ್ದಿಗೆ ಕಾಳಜಿ ಹೊಂದಿದ್ದರು. ಅವರ ಅಕಾಲಿಕ ಅಗಲಿಕೆ ಉಪ ಚುನಾವಣೆ ತಂದಿಟ್ಟಿದೆ. ಸಿಂದಗಿ ಕ್ಷೇತ್ರದಲ್ಲಿ ನಾವು ಅಳಿಲು ಸೇವೆ ಮಾಡಿದ್ದು,ಈ ಕ್ಷೇತ್ರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದರು.
ಈ ಕ್ಷೇತ್ರದಲ್ಲಿ 9 ಜನ ಆಕಾಂಕ್ಷಿಗಳು ಟಿಕೆಟ್ ಗೆ ಅರ್ಜಿ ಹಾಕಿದ್ದರು. ಕುಮಾರಸ್ವಾಮಿ ಅವರೆಲ್ಲರೊಂದಿಗೆ ಎರಡು ದಿನ ಚರ್ಚೆಯ ಬಳಿಕ ಒಮ್ಮತದಿಂದ ನಾಜಿಯಾ ಅಂಗಡಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ ಎಂದರು.
ನಾನು ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದ ನಾಯಕನಾಗಿ, ಸಚಿವನಾಗಿ, ಮುಖ್ಯಮಂತ್ರಿ ಮತ್ತು ಪ್ರಧಾನಿ ಯಾಗಿ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಇಂತ ಇಳಿ ವಯಸ್ಸಿನಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದೇನೆ. ಜಯ ಗಳಿಸುವ ದೃಢವಾದ ಸಂಕಲ್ಪದಿಂದ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ