ಉಗ್ರರ ದಾಳಿ: ಇದೊಂದು ಹೇಡಿಗಳ ಕೃತ್ಯ ಎಂದ ಪ್ರಧಾನಿ ಮೋದಿ

ಭಾನುವಾರ, 18 ಸೆಪ್ಟಂಬರ್ 2016 (16:10 IST)
ಉತ್ತರ ಕಾಶ್ಮಿರದ ಉರಿ ಪಟ್ಟಣದಲ್ಲಿರುವ ಸೇನಾ ಕಚೇರಿ ಮೇಲೆ ಉಗ್ರ ದಾಳಿ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ, ಇದೊಂದು ಹೇಡಿಗಳ ಕೃತ್ಯ.ಇದರ ಹಿಂದಿರುವ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಖಚಿತ ಎಂದು ದೇಶದ ಜನತೆಗೆ ಭರವಸೆ ನೀಡಿದ್ದಾರೆ. 
 
ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಸೇವೆಯನ್ನು ದೇಶ ಸದಾ ನೆನಪಿನಲ್ಲಿಡುತ್ತದೆ ಎಂದು ಸ್ಮರಿಸಿದರು.
 
ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವ ಪರಿಕ್ಕರ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಪರಿಕ್ಕರ್ ಕಾಶ್ಮಿರಕ್ಕೆ ತೆರಳುತ್ತಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
 
ಉತ್ತರ ಕಾಶ್ಮಿರದ ಉರಿ ಪಟ್ಟಣದ ಬಳಿಯಿರುವ ಸೇನಾ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 17 ಯೋಧರು ಮತ್ತು ನಾಲ್ವರು ಉಗ್ರರು ಹತರಾಗಿದ್ದಾರೆ. 
 
ಉರಿ ಪಟ್ಟಣದಲ್ಲಿರುವ ಸೇನಾ ಮುಖ್ಯ ಕಚೇರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ ಸೇನಾ ಕಚೇರಿಯೊಳಗೆ ಮೂವರು ಉಗ್ರರು ಇರಬಹುದು ಎಂದು ಶಂಕಿಸಲಾಗಿದ್ದು ಗುಂಡಿನ ಕಾಳಗ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
 
ಘಟನೆಯಲ್ಲಿ ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
 
ಕಳೆದ 2014ರ ಡಿಸೆಂಬರ್ 5 ರಂದು ಉರಿಪಟ್ಟಣದಲ್ಲಿರುವ ಸೇನಾ ಕಚೇರಿಯ ಮೇಲೆ ದಾಳಿ ನಡೆಸಿ ಅಟ್ಟಹಾಸವನ್ನು ಮೆರೆದಿದ್ದ ಉಗ್ರರನ್ನು ಸೇನಾಪಡೆಗಳು ಹತ್ಯೆಗೈದಿದ್ದವು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ