ಇಂದು 73ನೇ ಸ್ವಾತಂತ್ರ್ಯೋತ್ಸವ ಹಿನ್ನಲೆ; ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ
ಗುರುವಾರ, 15 ಆಗಸ್ಟ್ 2019 (08:37 IST)
ನವದೆಹಲಿ : ಇಂದು ದೇಶದಾದ್ಯಂತ 73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆಮಾಡಿದ್ದು, ದೆಹಲಿಯ ಕೆಂಪು ಕೋಟೆ ಇಂದು ನವವಧುವಿನಂತೆ ಕಂಗೊಳಿಸುತ್ತಿದೆ.
ಇಂದು ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು 6ನೇ ಬಾರಿ ದಿಲ್ಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಅವರು ದೇಶದ ಜನತೆಗೆ ಸ್ವಾತಂತ್ರ ದಿನಾಚರಣೆ ಮತ್ತು ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಹಾಗೇ ನಮ್ಮ ಸರ್ಕಾರ ಜನರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ರೈತರು, ಬಡವರು, ಆದಿವಾಸಿಗಳು, ದಲಿತರ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಶ್ರಮ ಸಂಕಲ್ಪದಿಂದ ಇದು ಸಾಧ್ಯವಾಗಿದೆ. ಉಗ್ರರ ದಮನಕ್ಕೆ ಶಪಥ ಮಾಡಿದ್ದೇವೆ. ರೈತರಿಗಾಗಿ 90 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದೇವೆ. ಜನರಲ್ಲಿ ಹೊಸ ಭರವಸೆ ಮೂಡಿಸಿದ್ದೇವೆ ಎಂದು ಹೇಳಿದ್ದಾರೆ.
ದೇಶದ ಅನೇಕ ರಾಜ್ಯಗಳಲ್ಲಿ ಅತಿವೃಷ್ಟಿ ಅಗಿದೆ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಎನ್ ಡಿಆರ್ ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಭವಿಷ್ಯದ ಜಲ ಕಂಟಕ ನಿರ್ಮೂಲನೆ ಆಗಬೇಕಿದೆ. ಜಲಶಕ್ತಿ ವೃದ್ಧಿಗೆ ಪ್ರತಿಯೊಬ್ಬ ಪ್ರಜೆ ಶ್ರಮಿಸಬೇಕು. ಮುಸ್ಲಿಂ ಸಹೋದರಿಯರಿಗಾಗಿ ತ್ರಿವಳಿ ತಲಾಖ್ ರದ್ದು ಮಾಡಲಾಗಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ಸಂವಿಧಾನದ 370 ವಿಧಿ ರದ್ದಾಗಿದ್ದು, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಕನಸು ನನಸು ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.