ಶಾಲಾ ಬಸ್ ಅಪಘಾತ ಪ್ರಕರಣ: ಇಬ್ಬರು ಅಧಿಕಾರಿಗಳು ಅಮಾನತು

ಶುಕ್ರವಾರ, 20 ಜನವರಿ 2017 (15:22 IST)
ಸಂಪೂರ್ಣ ದೇಶವನ್ನೇ ತಲ್ಲಣಗೊಳಿಸಿದ ಶಾಲಾ ಬಸ್ ಅಫಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸರ್ಕಾರ ಇಟಾ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದೆ.

ಇಟಾ ಶಾಲಾ ಆಡಳಿತ, ಬಸ್ ಚಾಲಕನ ಮೇಲೆ ಪ್ರಕರಣ ದಾಖಲಾಗಿದ್ದು, ಪ್ರಕರಣದ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. 
 
ಖಾಸಗಿ ಶಾಲಾ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ 15ಕ್ಕಿಂತ ಹೆಚ್ಚು ಮಕ್ಕಳು ದುರ್ಮರಣವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಅಲಿಗಂಜ್ ರಸ್ತೆಯಲ್ಲಿ ಗುರುವಾರ ನಡೆದಿತ್ತು. ದುರ್ಘಟನೆಯಲ್ಲಿ 49ಕ್ಕಿಂತ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  
 
ಮೃತ ಮಕ್ಕಳು ಅಲಿಗಂಜ್‌ನ ಜೆ.ಎಸ್ ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದರು. ದಟ್ಟ ಮಂಜಿನಿಂದಾಗಿ ರಸ್ತೆ ಸರಿಯಾಗಿ ಕಾಣಿಸದೆ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮೃತರೆಲ್ಲರೂ 13 ವರ್ಷದೊಳಗಿನವರು ಎಂದು ತಿಳಿದು ಬಂದಿದೆ. 
 
ಉತ್ತರ ಪ್ರದೇಶದಾದ್ಯಂತ ದಟ್ಟ ಮಂಜು ಆವರಿಸಿದ್ದು ಶಾಲೆಗಳಿಗೆ ರಜೆ ನೀಡುವಂತೆ ಸೂಚಿಸಲಾಗಿತ್ತು. ಆದರೆ  ಜೆ.ಎಸ್ ವಿದ್ಯಾ  ಶಾಲೆಗೆ ರಜೆ ನೀಡಿರಲಿಲ್ಲ.
 
ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಸಂತಾಪವನ್ನು ವ್ಯಕ್ತ ಪಡಿಸಿದ್ದರು.
 

ವೆಬ್ದುನಿಯಾವನ್ನು ಓದಿ