ಸಾಮೂಹಿಕ ಅತ್ಯಾಚಾರಗೈದು ರೈಲಿನಿಂದ ಕೆಳಕ್ಕೆ ದೂಡಿದರು

ಸೋಮವಾರ, 19 ಸೆಪ್ಟಂಬರ್ 2016 (14:49 IST)
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅಮಾನುಷ ಕ್ರೌರ್ಯಗಳಿಗೆ ಎಣೆಯೇ ಇಲ್ಲದಂತಾಗಿದೆ. ಅದರಲ್ಲೂ ಅತ್ಯಾಚಾರದಂತಹ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಅಂತಹದ್ದೇ ಒಂದು ಹೇಯ ಘಟನೆ ರಾಜ್ಯದ ಜೌನ್ಪುರ ಜಿಲ್ಲೆಯ ಶಾಹ್‌ಗಂಜ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. 

ತಮ್ಸಾ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 35 ವರ್ಷದ ಮಹಿಳೆಯೋರ್ವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ರೈಲಿನಿಂದ ದೂಡಲಾಗಿದೆ
 
ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಿದ ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರು. ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದರಿಂದ ವಾರಣಾಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಯ ಭಾವಚಿತ್ರ ಸುದ್ದಿ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. 
 
ಅತ್ಯಾಚಾರವಾಗಿರುವುದು ಇನ್ನು ಕೂಡ ದೃಢ ಪಟ್ಟಿಲ್ಲ. ಆಕೆ ಬಲಗಾಲನ್ನು ಕಳೆದುಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. 
 
ಆಕೆ ನಗ್ನಳಾಗಿ ಬಿದ್ದಿದ್ದಳು. ಹೀಗಾಗಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೃತ್ಯ ನಡೆದಿರುವುದು ನಿಜವೆಂದಾದರೆ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಶಿಕ್ಷೆಗೊಳಪಡಿಸಲಾಗುವುದು ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಈ ತಿಂಗಳ ಆರಂಭದಲ್ಲಿ ಕಾಲೇಜು ಯುವತಿಯೋರ್ವಳ ಪರ್ಸ್ ಕದಿಯಲು ಯತ್ನಿಸಿದ್ದ ಕಳ್ಳನೊಬ್ಬ ಬಳಿಕ ಆಕೆಯನ್ನು ಕೆಳಕ್ಕೆ ದೂಡಿದ್ದ. ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದವು. 
 
ಕಳೆದ ತಿಂಗಳು ಸಹ ಮಹಿಳೆಯೊಬ್ಬರನ್ನು ದರೋಡೆ ಮಾಡಿ ರೈಲಿನಿಂದ ದೂಡಿದ ಪ್ರಕರಣ ರಾಜ್ಯದಲ್ಲಿ ನಡೆದಿತ್ತು. 
 
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, ದಾಖಲಾಗಿರುವ ಅಪರಾಧಗಳಲ್ಲಿಯೇ 52 ಪ್ರತಿಶತ ಏರಿಕೆ ಕಂಡು  ಬಂದಿದ್ದು 2011ರಲ್ಲಿ ಇದು 25,737 ಇದ್ದರೆ, 2015ರಲ್ಲಿ 39,239 ಆಗಿದೆ.
 
ರಾಜ್ಯವಾರು ಹೇಳುವುದಾದರೆ ರೈಲಿನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಯುಪಿ ಅದರ ನಂತರದ ಸ್ಥಾನದಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ