ವಯಸ್ಸಾದ ಮನೆಯ ಸದಸ್ಯರನ್ನ ಹುಲಿಗೆ ಬಲಿ ಕೊಡುತ್ತಿರುವ ಜನ: ಉತ್ತರಪ್ರದೇಶದಲ್ಲಿ ಆತಂಕಕಾರಿ ಕೃತ್ಯ
ಮಂಗಳವಾರ, 4 ಜುಲೈ 2017 (18:18 IST)
ಉತ್ತರ ಪ್ರದೇಶ ರಾಜ್ಯದಲ್ಲಿ ವಯಸ್ಸಾದ ಹಿರಿ ಜೀವಗಳನ್ನ ಹುಲಿಗಳಿಗೆ ಆಹಾರವಾಗಿಸುತ್ತಿರುವ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ.
ಫಿಲಿಬಿಟ್ ಅರಣ್ಯ ಪ್ರದೇಶದ ಹೊಂದಿಕೊಂಡಂತಿರುವ ಗ್ರಾಮಗಳ ಜನ ತಮ್ಮ ಮನೆಯ ವಯಸ್ಸಾದವರನ್ನ ಹುಲಿಗಳಿಗೆ ಆಹಾರವಾಗಿ ಬಲಿ ಕೊಟ್ಟು ಬಳಿಕ ಪರಿಹಾರದ ಹಣ ಪಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ. ಫೆಬ್ರವರಿಯಿಂದೀಚೆಗೆ ಈ ರೀತಿಯ 7 ಪ್ರಕರಣಗಳು ಬೆಳಕಿಗೆ ಬಂದಿವೆ. ಹುಲಿ ದಾಳಿಗೊಳಗಾದವರ ಕುಟುಂಬಕ್ಕೆ ಲಕ್ಷ ಲಕ್ಷ ಪರಿಹಾರ ಸಿಗುತ್ತಿದ್ದು, ಹಣದ ಆಸೆಗೆ ಕೆಲವರು ಇಂತಹ ಕಿಡಿಗೇಡಿ ಕೃತ್ಯ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕೇಂದ್ರ ವನ್ಯಮೃಗ ಅಪರಾಧ ವಿಭಾಗದ ಅಧಿಕಾರಿ ಕಲೀಮ್ ಅಥಾರ್ ತನಿಖೆ ನಡೆಸಿ ವರದಿ ತಯಾರಿಸಿದ್ದಾರೆ. ಹುಲಿ ದಾಳಿಗೊಳಗಾದ ದೇಹಗಳು ಸಿಕ್ಕ ಪ್ರದೇಶ, ಹುಲಿ ದಾಳಿ ಸಂದರ್ಭ, ಕುಟುಂಬ ಪರಿಸ್ಥಿಗಳನ್ನ ಅವಲೋಕಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಜುಲೈ 1ರಂದು ಹುಲಿ ದಾಳಿಗೊಳಗಾಗಿ 55 ವರ್ಷದ ಮಹಿಳೆ ಮೃತಪಟ್ಟ ಘಟನೆ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿ ವಿ.ಕೆ. ಸಿಂಗ್ ತನಿಖೆಗಿಳಿದಾಗ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ಗ್ರಾಮಸ್ಥರು ಹೊಲದಲ್ಲಿ ಹುಲಿ ದಾಳಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಆದರೆ, ಮೃತ ಮಹಿಳೆಯ ಬಟ್ಟೆ ಅರಣ್ಯದ ಒಂದೂವರೆ ಕಿ.ಮೀ ಒಳಗೆ ಪತ್ತೆಯಾಗಿವೆ. ಸಂಬಂಧಿಕರೇ ಅರಣ್ಯಕ್ಕೆ ಕರೆದೊಯ್ದು ಹುಲಿ ಬಾಯಿಗೆ ಕೊಟ್ಟು ಬಳಿಕ ಕಳೆಬರವನ್ನ ಹೊಲಕ್ಕೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಮಹಿಳೆಯ ಬಟ್ಟ ಸಿಕ್ಕಿದ ಅರಣ್ಯದಿಂದ ಹೊಲಕ್ಕೆ ಟ್ರ್ಯಾಕ್ಟರ್ ಓಡಾಡಿರುವ ಗುರುತುಗಳು ಕೃತ್ಯದ ಬಗ್ಗೆ ಸುಳಿವು ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ