ತಮಿಳುನಾಡಿನಲ್ಲಿ ವಾರಾಂತ್ಯ ಬೀಚ್, ದೇಗುಲ ಪ್ರವೇಶ ನಿರ್ಬಂಧ
ಮಂಗಳವಾರ, 31 ಆಗಸ್ಟ್ 2021 (12:06 IST)
ಚೆನ್ನೈ, ಆಗಸ್ಟ್ 31: ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಬೆನ್ನಲ್ಲೇ ತಮಿಳುನಾಡಿನಲ್ಲಿ ಮತ್ತೆ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಸಾರ್ವಜನಿಕರಿಗೆ ಭಾನುವಾರದಂದು ಬೀಚ್ಗಳಿಗೆ ಪ್ರವೇಶ ನಿರ್ಬಂಧಿಸಿರುವುದಾಗಿ ಘೋಷಿಸಿದ್ದು, ವಾರಾಂತ್ಯದಲ್ಲಿ ಪೂಜಾ ಸ್ಥಳಗಳಲ್ಲಿನ ನಿಷೇಧವನ್ನು ವಿಸ್ತರಿಸಿದೆ. ಧಾರ್ಮಿಕ ಉತ್ಸವಗಳ ಮೇಲೆ ನಿರ್ಬಂಧ ಹೇರಲಾಗಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ 15, ಬೆಳಿಗ್ಗೆ 6ರವರೆಗೂ ಈ ನಿರ್ಬಂಧಗಳು ಜಾರಿಯಲ್ಲಿರುತ್ತದೆ ಎಂದು ಅಧೀಕೃತ ಪ್ರಕಟಣೆ ತಿಳಿಸಿದೆ.
'ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಕೊರೊನಾ ಹರಡುವಿಕೆ ನಿಯಂತ್ರಿಸಲು ಭಾನುವಾರ ಬೀಚ್ಗಳನ್ನು ಮುಚ್ಚಲಾಗುತ್ತದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಪೂಜಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗುವುದು. ಧಾರ್ಮಿಕ ಹಬ್ಬಗಳನ್ನು ನಡೆಸುವುದನ್ನು ಕೂಡ ನಿಷೇಧಿಸಲಾಗಿದೆ' ಎಂದು ಪ್ರಕಟಣೆ ತಿಳಿಸಿದೆ.
ಬೀಚ್ಗಳಲ್ಲಿ ಭಾರಿ ಜನಸಂದಣಿ ಸೇರಿ ಕೊರೊನಾ ನಿಯಮಗಳ ಉಲ್ಲಂಘನೆ ಮಾಡಿರುವ ಚಿತ್ರಗಳು ವೈರಲ್ ಆದ ಬೆನ್ನಲ್ಲೇ ಬೀಚ್ಗಳಿಗೆ ಭಾನುವಾರದಂದು ನಿರ್ಬಂಧ ಹೇರಿ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ.
ಈ ಬಾರಿಯೂ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದ್ದು, ಕಳೆದ ವರ್ಷದಂತೆಯೇ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 10ರಂದು ಅದ್ಧೂರಿಯಾಗಿ ಆಚರಿಸದೇ ಇರಲು ನಿರ್ಧರಿಸಲಾಗಿದೆ. ಮೆರವಣಿಗೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದೇ ವೇಳೆ, ಸರ್ಕಾರ ಜಿಲ್ಲೆಗಳಲ್ಲಿ ವೈರಸ್ ಹರಡುವಿಕೆ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದೆ.
ಶಿಕ್ಷಣ ತಜ್ಞರ ಅಭಿಪ್ರಾಯಗಳನ್ನು ಆಧರಿಸಿ 9ರಿಂದ 12ನೇ ತರಗತಿವರೆಗೆ ಸೆಪ್ಟೆಂಬರ್ 1ರಿಂದ ಕಾಲೇಜುಗಳನ್ನು ತೆರೆಯುವ ತಮ್ಮ ಹಿಂದಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸರ್ಕಾರದ ಪ್ರಕಟಣೆ ಸ್ಪಷ್ಟಪಡಿಸಿದೆ.