ಯಾರಿಗೆ ಸಿಗುತ್ತೆ ಸೈಕಲ್? ಅಪ್ಪನಿಗಾ, ಮಗನಿಗಾ?

ಸೋಮವಾರ, 16 ಜನವರಿ 2017 (09:21 IST)
ಉತ್ತರ ಪ್ರದೇಶದಲ್ಲಿ ಸೈಕಲ್‌ಗಾಗಿ ನಡೆಯುತ್ತಿರುವ ಫೈಟ್ ನಿರ್ಣಾಯಕ ಘಟಕ್ಕೆ ತಲುಪಿದೆ. ಸಮಾಜವಾದಿ ಪಕ್ಷದ ಚಿಹ್ನೆ ಸೈಕಲ್‌ನ್ನು ಯಾರಿಗೆ ನೀಡಬೇಕೆಂಬುದಕ್ಕೆ ಸಂಬಂಧಿಸಿದ ಆದೇಶವನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸುವ ನಿರೀಕ್ಷೆ ಇದೆ.  

ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಕೌಟುಂಬಿಕ  ಕಲಹ ಪಕ್ಷವನ್ನೇ ಒಡೆಯಲು ಕಾರಣವಾಗಿದೆ. ಎರಡು ಬಣದವರು ಪಕ್ಷದ ಚಿಹ್ನೆ 'ಸೈಕಲ್'ನ್ನು ತಮ್ಮದಾಗಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಚುನಾವಣಾ ಆಯೋಗದ ಮೆಟ್ಟಿಲೇರಿದ್ದರು.
 
ಈ ಕುರಿತು ಚುನಾವಣಾ ಆಯೋಗ ಕಳೆದ ವಾರ ವಿಚಾರಣೆ ನಡೆಸಿತ್ತು. ಸುಮಾರು 4ಗಂಟೆಗಿಂತಲೂ ಹೆಚ್ಚು ಕಾಲ ಎರಡು ಕಡೆಯವರ ವಾದ ಪ್ರತಿವಾದ ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ್ದು, ಚಿಹ್ನೆ ಯಾರಿಗೆ ಸೇರಬೇಕು ಎಂಬ ನಿರ್ಧಾರವನ್ನು ಕಾಯ್ದಿರಿಸಿತ್ತು.
 
ಈ ಕುರಿತಂತೆ ಇಂದು ಆಯೋಗ ನಿರ್ಣಯ ಪ್ರಕಟಿಸುವ ಸಾಧ್ಯತೆಗಳಿದ್ದು ಎಲ್ಲರ ಚಿತ್ತ ನವದೆಹಲಿಯತ್ತ ನೆಟ್ಟಿದೆ. ಆಯೋಗ ಚಿಹ್ನೆಯನ್ನು ಯಾವುದಾದರೂ ಒಂದು ಬಣಕ್ಕೆ ನೀಡಬಹುದು ಅಥವಾ ಎರಡು ಬಣದವರಿಗೆ ಸೈಕಲ್ ಬಿಟ್ಟು ಪ್ರತ್ಯೇಕ ಚಿಹ್ನೆ ನೀಡುವ ಸಾಧ್ಯತೆಗಳನ್ನು ಸಹ ಅಲ್ಲಗಳೆಯಲಾಗದು.  
 
ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಫೆಬ್ರವರಿ 11ರಿಂದ ಪ್ರಾರಂಭವಾಗಿ ಮಾರ್ಚ್ 8 ರಂದು ಮುಕ್ತಾಯಗೊಳ್ಳಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ