ವಿಶ್ವದ ದಢೂತಿ ಮಹಿಳೆಯನ್ನು ಭಾರತಕ್ಕೆ ಕರೆತರಲು ತಗುಲಿದ ವೆಚ್ಚವೆಷ್ಟು ಗೊತ್ತಾ?

ಸೋಮವಾರ, 13 ಫೆಬ್ರವರಿ 2017 (09:07 IST)
ವಿಶ್ವದಲ್ಲೇ ಅತಿ ಹೆಚ್ಚು ತೂಕವಿರುವ ಮಹಿಳೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಈಜಿಪ್ಟ್‌ನ ಎಮನ್ ಅಹ್ಮದ್ ಅವರನ್ನು ಭಾರತಕ್ಕೆ ತರಲು ತಗುಲಿದ ವೆಚ್ಚವೆಷ್ಟು ಗೊತ್ತಾ? ಬರೊಬ್ಬರಿ 83 ಲಕ್ಷ. ಮತ್ತೀಗ ಅವರ ಚಿಕಿತ್ಸೆಗೆ 1 ಕೋಟಿ ರೂಪಾಯಿ ತಗುಲಲಿದೆ ಎಂದು ಸೈಫಿ ಆಸ್ಪತ್ರೆ ಮೂಲಗಳು ಸ್ಪಷ್ಟ ಪಡಿಸಿವೆ. 

500 ಕೆಜಿ ತೂಕದ , ಈಜಿಪ್ತಿನ ಎಮನ್ ಅಹಮದ್ ಕಳೆದೆರಡು ದಿನಗಳ ಹಿಂದೆ ತಮ್ಮ ಸಹೋದರಿ ಶೈಮಾ ಅಹಮದ್ ಜತೆಯಲ್ಲಿ ಮುಂಬೈ ತಲುಪಿದ್ದಾರೆ. ಕಳೆದ 25 ವರ್ಷಗಳಿಂದ ಮನೆ ಬಿಟ್ಟು ಹೊರಬರಲಾರದ ಸ್ಥಿತಿಯಲ್ಲಿ ಮಲಗಿದ್ದಲ್ಲೇ ಈ ಮಹಿಳೆಯನ್ನು ತೂಕ ಇಳಿಸಿಕೊಳ್ಳುವ ಶಸ್ತ್ರಚಿಕಿತ್ಸೆಗಾಗಿ ಅಲೆಗ್ಸಾಂಡ್ರಿಯಾದಿಂದ ಬೆಡ್ ಸಮೇತವಾಗಿ ತರಲಾಗಿತ್ತು.
 
ಕಾರ್ಗೋ ವಿಮಾನದಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ 500 ಕೆಜಿ ತೂಕದ ಎಮನ್ ಅವರನ್ನು ಟ್ರಕ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಕ್ರೇನ್ ಸಹಾಯದಿಂದ ಅವರನ್ನು ಆಸ್ಪತ್ರೆಯ ವಿಶೇಷ ರೂಮ್‌ಗೆ ಕೊಂಡೊಯ್ಯಲಾಗಿತ್ತು.  
 
36 ವರ್ಷದ ಎಮನ್ ಬ್ಯಾರಿಯಾಟ್ರಿಕ್ ಸರ್ಜರಿ ಮತ್ತು ಇನ್ನಿತರ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮುಫಾಸಲ್ ಲಕ್ಡವಾಲಾ ನೇತೃತ್ವದ ವೈದ್ಯ ತಂಡ ಎಮನ್ ಅವರ ಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಿದೆ.
 
ಕಳೆದ 3 ತಿಂಗಳಿಂದ ಎಮನ್ ಸಂಪರ್ಕದಲ್ಲಿರುವ ವೈದ್ಯರ ತಂಡ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ. ಹಲವು ತಿಂಗಳುಗಳ ಕಾಲ ಅವರು ಇಲ್ಲಿರಬೇಕಾಗುತ್ತದೆ. 
 
ವರದಿಗಳ ಪ್ರಕಾರ ಹುಟ್ಟಿದಾಗಿನಿಂದ ಎಮನ್ ಎಲಿಫಾಂಟಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿದ್ದು, ಹುಟ್ಟಿದಾಗ ಅವರ ತೂಕ 5 ಕೆಜಿಯಷ್ಟಿತ್ತು.
 

ವೆಬ್ದುನಿಯಾವನ್ನು ಓದಿ