ನವದೆಹಲಿ: ಡಾ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಚಿವ ಸಂಪುಟ ತೀರ್ಮಾನಿಸಿದ್ದ ವಿಚಾರವೊಂದಕ್ಕೆ ಆಕ್ರೋಶಗೊಂಡು ರಾಹುಲ್ ಗಾಂಧಿ ಪೇಪರ್ ನ್ನೇ ಪತ್ರಿಕಾಗೋಷ್ಠಿಯಲ್ಲಿ ಹರಿದು ಹಾಕಿದ್ದರು. ಅಷ್ಟಕ್ಕು ರಾಹುಲ್ ಅಂದು ಹಾಗೆ ಮಾಡಿದ್ದೇಕೆ?
ಇದು 2013 ರಲ್ಲಿ ನಡೆದ ಘಟನೆ. ಆಗ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿದ್ದರು. ಡಾ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಎರಡನೇ ಬಾರಿಗೆ ಅಧಿಕಾರ ಮುಗಿಸಲು ಒಂದು ವರ್ಷ ಬಾಕಿಯಿತ್ತು.
ಈ ವೇಳೆ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲೇ ಸಚಿವ ಸಂಪುಟ ಮಾಡಿದ್ದ ನಿರ್ಧಾರದ ಪೇಪರ್ ನ್ನೇ ಹರಿದು ಹಾಕಿ ವಿವಾದಕ್ಕೆ ಕಾರಣವಾಗಿದ್ದರು. ಇದು ಮನಮೋಹನ್ ಸಿಂಗ್ ಗೆ ಮಾಡಿದ ಅವಮಾನ ಎಂದು ಇಂದಿಗೂ ಬಿಜೆಪಿ ಟೀಕಿಸುತ್ತಿದೆ.
ಸಾಮಾನ್ಯವಾಗಿ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನವನ್ನು ನ್ಯಾಯಾಲಯವೂ ಪ್ರಶ್ನಿಸಲು ಕೆಲವೊಂದು ಪರಿಮಿತಿಗಳಿವೆ. ಆದರೆ ರಾಹುಲ್ ಅಂದು ಮಾಡಿದ ಕೆಲಸ ಎಳಸುತನ, ಮನಮೋಹನ್ ಸಿಂಗ್ ರಂತಹ ಹಿರಿಯ ನಾಯಕರಿದ್ದ ಸಚಿವ ಸಂಪುಟಕ್ಕೆ ಮಾಡಿದ ಅವಮಾನ ಎಂದು ಹಲವರು ಇಂದಿಗೂ ಬಣ್ಣಿಸುತ್ತಾರೆ. ಸ್ವತಃ ರಾಹುಲ್ ಗಾಂಧಿ ಕೆಲವು ಸಮಯದ ಹಿಂದೆ ತನ್ನ ಅಂದಿನ ಕೆಲಸಕ್ಕೆ ಪಶ್ಚಾತ್ತಾಪ ಪಟ್ಟಿದ್ದು ಇದೆ.
ರಾಹುಲ್ ಹರಿದು ಹಾಕಿದ ಪತ್ರದಲ್ಲೇನಿತ್ತು?
ಶಾಸಕರು, ಸಂಸದರ ವಿರುದ್ಧ ಕ್ರಿಮಿನಲ್ ಅಪರಾಧ ಸಾಬೀತಾಗಿ 2 ವರ್ಷ ಅಥವಾ ಹೆಚ್ಚು ಸಮಯ ಶಿಕ್ಷೆಯಾದರೆ ಅಂತಹವರ ಸ್ಥಾನ ತಕ್ಷಣದಿಂದಲೇ ಜಾರಿಯಾಗುವಂತೆ ರದ್ದು ಮಾಡುವಂತೆ ಸುಪ್ರೀಂಕೋರ್ಟ್ ಆದೇಶವಿತ್ತು. ಇದರ ವಿರುದ್ಧವಾಗಿ ಅಂದು ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟ ಯಾವುದೇ ಸಂಸದರಿಗೆ ಮೂರು ತಿಂಗಳ ಸಮಯಾವಕಾಶ ನೀಡುವ ನಿರ್ಧಾರ ಕೈಗೊಂಡಿತ್ತು.
ಸಚಿವ ಸಂಪುಟದ ಈ ತೀರ್ಮಾನ ರಾಹುಲ್ ಗಾಂಧಿಯವರನ್ನು ಕೆರಳಿಸಿತ್ತು. ಇದು ಅತ್ಯಂತ ಕೆಟ್ಟ ನಿರ್ಧಾರ ಎಂದು ಪತ್ರಿಕಾಗೋಷ್ಠಯಲ್ಲೇ ಅವರು ಸಚಿವ ಸಂಪುಟದ ನಿರ್ಧಾರ ಪ್ರಕಟಿಸಿದ್ದ ಕಾಗದ ಪತ್ರವನ್ನು ಹರಿದುಹಾಕಿದ್ದರು. ರಾಹುಲ್ ಈ ವರ್ತನೆ ಇಂದಿಗೂ ಮರೆಯಲಾಗದ ಘಟನೆಯಾಗಿ ಉಳಿದುಕೊಂಡಿದೆ.
ರಾಹುಲ್ ಅಂದು ಪತ್ರಿಕಾಗೋಷ್ಠಿಯಲ್ಲಿ ಸಚಿವ ಸಂಪುಟದ ನಿರ್ಧಾರವನ್ನು ಪ್ರಶ್ನಿಸುವ ಬದಲು ನೇರವಾಗಿ ಮನಮೋಹನ್ ಸಿಂಗ್ ಬಳಿ ಆಕ್ಷೇಪ ವ್ಯಕ್ತಪಡಿಸಬಹುದಿತ್ತು. ಅದರ ಬದಲು ಕಾಗದ ಪತ್ರವನ್ನು ಹರಿದು ಹಾಕಿದ್ದು ಡಾ ಮನಮೋಹನ್ ಸಿಂಗ್ ರಂತಹ ಹಿರಿಯ ರಾಜಕಾರಣಿಗಳಿದ್ದ ಸಚಿವ ಸಂಪುಟ್ಕೆ ಮಾಡಿದ ಅವಮಾನ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಾರೆ.