ಲಕ್ಷ, ಕೋಟಿ ಆದಾಯವಿದ್ದರೂ ಟ್ಯಾಕ್ಸ್ ಕಟ್ಟದ ಯೂಟ್ಯೂಬರ್ಸ್

ಶುಕ್ರವಾರ, 23 ಜೂನ್ 2023 (17:45 IST)
ತಿರುವನಂತಪುರಂ : ಟ್ಯಾಕ್ಸ್ ಕಟ್ಟದ ಹಿನ್ನೆಲೆ ಕೇರಳದ ಹಲವು ಯೂಟ್ಯೂಬರ್ಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
 
ಕೇರಳ ರಾಜ್ಯದ ಎರ್ನಾಕುಲಂ, ಪತ್ತನಂತಿಟ್ಟ, ತ್ರಿಶೂರ್, ಅಲಪ್ಪುಳ, ಕೊಟ್ಟಾಯಂ ಹಾಗೂ ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 13 ಪ್ರಮುಖ ಯೂಟ್ಯೂಬರ್ಗಳು ಹಾಗೂ ಕಂಟೆಂಟ್ ಕ್ರಿಯೇಟರ್ಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಯೂಟ್ಯೂಬರ್ಗಳು ವಾರ್ಷಿಕವಾಗಿ ಅಂದಾಜು 1 ಕೋಟಿ ರೂ. ಹಣ ಗಳಿಸುತ್ತಾರೆ. ಆದರೆ ಅವರ ತೆರಿಗೆ ಕಡತಗಳಲ್ಲಿ ಆದಾಯವನ್ನು ನಿಖರವಾಗಿ ತೋರಿಸಲಾಗಿಲ್ಲ. ತೆರಿಗೆಯನ್ನು ಅವರ ಆದಾಯದ ಮೂಲದಿಂದಲೇ ಕಡಿತಗೊಳಿಸುವುದು ಸೂಕ್ತವಲ್ಲದ ಕಾರಣ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ಈ ಯೂಟ್ಯೂಬರ್ಗಳು ತಮಗೆ ಯಾವುದೇ ಸ್ಥಿರವಾದ ಪಾವತಿಗಳು ಬರುವುದಿಲ್ಲ, ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಂದ ಪಡೆಯುವ ಮಾಸಿಕ ಪಾವತಿಗಳು ಅವರ ಕಂಟೆಂಟ್ಗಳ ವೀಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿಕೊಳ್ಳುತ್ತಾರೆ.

ಕೆಲ ಯೂಟ್ಯೂಬರ್ಗಳು ಕಂಪನಿಗಳಿಂದ ಹಣವನ್ನು ಪಡೆದು ಕಂಟೆಂಟ್ ಸೃಷ್ಟಿಮಾಡಿದ್ದರೂ ಅದನ್ನು ಬಹಿರಂಗಪಡಿಸಿಲ್ಲ. ಇದರಿಂದಾಗಿ ತೆರಿಗೆ ಪಾವತಿ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಈ ಹಿನ್ನೆಲೆ ಕೊಚ್ಚಿ ಮೂಲದ ಐಟಿ ಎನ್ಫೋರ್ಸ್ಮೆಂಟ್ ವಿಂಗ್ ಈ ದಾಳಿಯನ್ನು ನಡೆಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ