'ಕಾಸಿಗಾಗಿ ಓಟು' ಬಿಜೆಪಿ ಕೂಸು; ಆಘಾತಕಾರಿ ಅಂಶ ಬಯಲು

ಬುಧವಾರ, 23 ಮಾರ್ಚ್ 2011 (17:03 IST)
ಮೂರು ವರ್ಷಗಳ ಹಿಂದೆ ವಿಶ್ವಾಸ ಮತ ಸಾಬೀತು ಸಂದರ್ಭದಲ್ಲಿ ನಡೆದ 'ಕಾಸಿಗಾಗಿ ಓಟು' ಪ್ರಕರಣದ ಒಳ ಹೂರಣ ಬಯಲಾಗಿದೆ. ಇದು ಎಲ್.ಕೆ. ಆಡ್ವಾಣಿ, ಅರುಣ್ ಜೇಟ್ಲಿ ಮತ್ತು ಸುಧೀಂದ್ರ ಕುಲಕರ್ಣಿ ಮುಂತಾದ ಬಿಜೆಪಿ ನಾಯಕರ ಕೃಪಾಶೀರ್ವಾದದೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಡೆಸಲಾದ 'ಅಣಕು ಕಾರ್ಯಾಚರಣೆ' ಎಂದು ಆರೋಪಿಸಲಾಗಿದೆ.

2008ರ ಜುಲೈ 22ರಂದು ಯುಪಿಎ-Iಕ್ಕೆ ಎದುರಾಗಿದ್ದ ಸಂಕಷ್ಟ ವಿಶ್ವಾಸ ಮತ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳ ಸಂಸದರಿಗೆ ಲಂಚ ಕೊಟ್ಟು ಕಾಂಗ್ರೆಸ್ ಮತ್ತು ಸರಕಾರವು ಸಂಸದರನ್ನು ಖರೀದಿಸಿತ್ತು ಎಂದು ಆರೋಪಿಸಲಾಗಿತ್ತು. ಸದನದಲ್ಲಿಯೇ ನೋಟಿನ ಕಟ್ಟುಗಳನ್ನು ಬಿಜೆಪಿ ಸಂಸದರು ಪ್ರದರ್ಶಿಸಿ ಕೇಂದ್ರಕ್ಕೆ ಭಾರೀ ಮುಖಭಂಗವನ್ನುಂಟು ಮಾಡಿದ್ದರು.

ಕೆಲ ದಿನಗಳ ನಂತರ ಬಿಜೆಪಿ ಸಂಸದರಿಗೆ ಲಂಚ ನೀಡುತ್ತಿರುವುದರ 'ಅಣಕು ಕಾರ್ಯಾಚರಣೆ'ಯ ವೀಡಿಯೋ ಕೂಡ ಪ್ರಸಾರಗೊಂಡಿತ್ತು. 'ಸಿಎನ್ಎನ್-ಐಬಿಎನ್' ಇದನ್ನು ಪ್ರಸಾರ ಮಾಡಿತ್ತು. ಆದರೆ ಪ್ರಸಕ್ತ ಅವೆಲ್ಲವೂ ಬಿಜೆಪಿ ಪ್ರಾಯೋಜಿತ ಎಂದು ಆರೋಪಿಸಲಾಗಿದೆ. ಇಂತಹ ಆರೋಪವನ್ನು ಮಾಡಿರುವುದು 'ಟೆಹೆಲ್ಕಾ' ಪತ್ರಿಕೆ. ಹಲವು ಪುರಾವೆಗಳನ್ನು ಈ ಸಂಬಂಧ ಪತ್ರಿಕೆ ಒದಗಿಸಿದೆ.

ಟೆಹೆಲ್ಕಾ ವರದಿಯ ಪ್ರಕಾರ, ಭಾರತ-ಅಮೆರಿಕಾ ನಡುವಿನ ಅಣು ಒಪ್ಪಂದದ ಕುರಿತು ಎಡಪಕ್ಷಗಳು ಸರಕಾರದಿಂದ ಬೆಂಬಲ ವಾಪಸ್ ಪಡೆದುಕೊಂಡ ನಂತರ ನಡೆದ ವಿಶ್ವಾಸ ಮತದ ಸಂದರ್ಭದಲ್ಲಿ ಸಂಸದರನ್ನು ಖರೀದಿಸಲು ಹೊರಟದ್ದು ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷವಲ್ಲ. ಬದಲಿಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳನ್ನು ಬಲೆಗೆ ಹಾಕಲು ಹೊರಟಿದ್ದೇ ಬಿಜೆಪಿ. ಸರಕಾರಕ್ಕೆ ಕಪ್ಪುಮಸಿ ಬಳಿಯುವ ಉದ್ದೇಶದಿಂದ ಇಂತಹ ಕೃತ್ಯಕ್ಕೆ ಕೈ ಹಾಕಲಾಗಿತ್ತು.

ಅಚ್ಚರಿಯ ವಿಚಾರವೆಂದರೆ, ಇದಕ್ಕೆ ಬಿಜೆಪಿ ಹಿರಿಯ ಮುಖಂಡರು ಒಪ್ಪಿಗೆ ಸೂಚಿಸಿರುವುದು. ಎಲ್.ಕೆ. ಆಡ್ವಾಣಿ, ಕರ್ನಾಟಕ ಮೂಲದ ಸುಧೀಂದ್ರ ಕುಲಕರ್ಣಿ, ಅರುಣ್ ಜೇಟ್ಲಿಯವರು ಪ್ರಾಯೋಜಿತ 'ಅಣಕು ಕಾರ್ಯಾಚರಣೆ'ಗೆ ಅಸ್ತು ಎಂದಿದ್ದರು ಎಂದು ವರದಿ ಮಾಡಲಾಗಿದೆ.

ಟೆಹೆಲ್ಕಾ ತನಿಖಾ ವರದಿಯ ಮೊದಲ ಭಾಗದಲ್ಲಿ ಇದಕ್ಕೆ ನೀಡಿರುವ ಪುರಾವೆ, ಅಂದು ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ವರದಿಗಾರನ ಹೇಳಿಕೆ. ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಏನೆಲ್ಲ ನಡೆದಿತ್ತು ಎಂಬುದನ್ನು 'ಸಿಎನ್ಎನ್-ಐಬಿಎನ್' ವರದಿಗಾರ ಸಿದ್ಧಾರ್ಥ ಗೌತಮ್ ವಿವರವಾಗಿ ಪತ್ರಿಕೆಗೆ ತಿಳಿಸಿದ್ದಾರೆ.

ಕಾಸಿಗಾಗಿ ಓಟು ಹಗರಣದ ತನಿಖೆಗೆ ನೇಮಕಗೊಂಡಿದ್ದ ಸಂಸದೀಯ ಸಮಿತಿಯ ವರದಿಯ ಪ್ರತಿ ಮತ್ತು ದೂರವಾಣಿ ಸಂಭಾಷಣೆಗಳು ಕೂಡ ಟೆಹೆಲ್ಕಾಕ್ಕೆ ಲಭ್ಯವಾಗಿದೆ.

2008ರ ಜುಲೈ 21ರಂದು, ಅಂದರೆ ವಿಶ್ವಾಸ ಮತ ನಡೆಯುವ ಹಿಂದಿನ ದಿನ, ತಾನು ಮತ್ತು ಇತರ ಇಬ್ಬರು ಬಿಜೆಪಿ ಸಂಸದರನ್ನು (ಫಗ್ಗನ್ ಸಿಂಗ್ ಕುಲಾಸ್ತೆ ಮತ್ತು ಮಹಾವೀರ್ ಬಗೋಡಾ) ಮಾರಾಟ ಮಾಡುವ ಸಂಬಂಧ ಬಿಜೆಪಿ ಸಂಸದ ಅಶೋಕ್ ಅರ್ಗಲ್ ಆಹ್ವಾನ ನೀಡುತ್ತಿರುವ ದೂರವಾಣಿ ಸಂಭಾಷಣೆ ಕೂಡ ಬಹಿರಂಗವಾಗಿದೆ.

ಇದೇ ಹಗರಣದ ಕುರಿತು ವಿಕಿಲೀಕ್ಸ್ ಬಹಿರಂಗಪಡಿಸಿರುವ ದಾಖಲೆಗಳ ಬಗ್ಗೆ ಸಂಸತ್ತಿನಲ್ಲಿ ಗಲಾಟೆ ಮಾಡುತ್ತಿರುವ ಬಿಜೆಪಿ ವಿರುದ್ಧ ಇದೀಗ ಕಾಂಗ್ರೆಸ್ ಮತ್ತು ಕೇಂದ್ರ ಸರಕಾರ, ಟೆಹೆಲ್ಕಾ ವರದಿಯನ್ನು ಮುಂದಿಟ್ಟು ಪ್ರತಿದಾಳಿ ನಡೆಸುತ್ತಿದೆ. ಬಿಜೆಪಿ ನಾಯಕರೇ ಆಯೋಜಿಸಿರುವ ಅಣಕು ಕಾರ್ಯಾಚರಣೆಯಿದು, ಇದಕ್ಕೆ ಬಿಜೆಪಿಯೇ ಹಣ ಸಂದಾಯ ಮಾಡಿದೆ ಎಂದು ಸರಕಾರ ಸಂಸತ್ತಿನಲ್ಲಿ ಆರೋಪಿಸುತ್ತಿದೆ.

ವೆಬ್ದುನಿಯಾವನ್ನು ಓದಿ