ಗುಟ್ಕಾ ಕಾಗದ ಸ್ಯಾಶೆಗೂ ತಡೆ; ಅಡಕೆಗೆ ಮತ್ತೆ ಸಂಕಷ್ಟ?

ಮಂಗಳವಾರ, 29 ಮಾರ್ಚ್ 2011 (15:56 IST)
ಕಾಗದ ಮತ್ತು ಅಲ್ಯೂಮಿನಿಯಂ ಹಾಳೆಗಳನ್ನೊಳಗೊಂಡ ಸ್ಯಾಶೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಯೋಚನೆಯಲ್ಲಿದ್ದ ಗುಟ್ಕಾ ಮತ್ತು ಪಾನ್ ಮಸಾಲ ಕಂಪನಿಗಳಿಗೆ ಮತ್ತೆ ನಿರಾಸೆಯಾಗುವ ಸಾಧ್ಯತೆಗಳಿವೆ. ಅದರಲ್ಲೂ ಪ್ಲಾಸ್ಟಿಕ್ ಅಂಶಗಳಿವೆ ಎಂದು ತಗಾದೆ ಎತ್ತಲಾಗುತ್ತಿದ್ದು, ಅಡಕೆ ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಗುವ ಭೀತಿ ಎದುರಾಗಿದೆ.

ಮಾರ್ಚ್ 1ರಿಂದ ಪ್ಲಾಸ್ಟಿಕ್ ಸ್ಯಾಶೆಗಳಲ್ಲಿ ಪಾನ್ ಮಸಾಲ ಮತ್ತು ಗುಟ್ಕಾ ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಅಡಕೆಯ ಬೆಲೆ ಪಾತಾಳಕ್ಕೆ ಕುಸಿದಿದೆ. ಇದರ ನಡುವೆ ಪರ್ಯಾಯ ಮಾರ್ಗೋಪಾಯಗಳನ್ನು ಹುಡುಕುವಲ್ಲಿ ಗುಟ್ಕಾ ಕಂಪನಿಗಳು ನಿರತವಾಗಿದ್ದವು.

ಕಾಗದದ ಸ್ಯಾಶೆಯ ಬಳಕೆ ಮಾಡುವುದು ಇದರಲ್ಲಿ ಪ್ರಮುಖವಾದದ್ದು. ಪೊಟ್ಟಣದ ಒಳ ಭಾಗದಲ್ಲಿ ಅಲ್ಯೂಮಿನಿಯಂ ಹಾಳೆಯನ್ನು ಅಂಟಿಸುವ ಪ್ರಯೋಗಕ್ಕೆ ಕಂಪನಿಗಳು ಮುಂದಾಗಿದ್ದವು. ಇದಕ್ಕೆ ಒಪ್ಪಿಗೆ ಪಡೆದುಕೊಳ್ಳಲು ಸ್ಯಾಶೆಗಳ ಮಾದರಿಗಳನ್ನು ಲಕ್ನೋದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳುಹಿಸಿ ಕೊಡಲಾಗಿತ್ತು.

ಆದರೆ ಇದುವರೆಗೂ ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ನೀಡಿಲ್ಲ. ಮೂಲಗಳ ಪ್ರಕಾರ, ನೂತನ ಸ್ಯಾಶೆಯಲ್ಲಿ ಪ್ಲಾಸ್ಟಿಕ್ ಅಂಶಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅದಕ್ಕೆ ಒಪ್ಪಿಗೆ ನೀಡಲಾಗುತ್ತಿಲ್ಲ.

ಹೊಸ ಸ್ಯಾಶೆಯಲ್ಲಿ ಪಾನ್ ಮಸಾಲ ಮಾರಾಟ ಮಾಡಲು ಇದುವರೆಗೆ ಪರವಾನಗಿ ನೀಡಲಾಗಿಲ್ಲ. ಲಕ್ನೋ ಮಂಡಳಿಯಿಂದ ನಿರಕ್ಷೇಪಣಾ ಪ್ರಮಾಣ ಪತ್ರ ಸಿಗದ ಹೊರತು ಯಾವುದೇ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಅವುಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ರಾಧೇಶ್ಯಾಮ್ ತಿಳಿಸಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯದೆ ಹೊಸ ಸ್ಯಾಶೆಯಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟ ಮಾಡಿದರೆ, ಅದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ ಮತ್ತು ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಅತ್ತ ಗುಟ್ಕಾ ಮತ್ತು ಪಾನ್ ಮಸಾಲ ಕಂಪನಿಗಳು ನೂತನ ಸ್ಯಾಶೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಾರಂಭಿಸಿವೆ. ಅಬಕಾರಿ ಇಲಾಖೆಗೆ ಸ್ಯಾಶೆ ಮಾದರಿಯನ್ನು ತಾವು ಕಳುಹಿಸಿದ್ದೇವೆ. ಬಳಿಕ ನಾವು ಮಾರಾಟ ಆರಂಭಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಹಾಗೊಂದು ವೇಳೆ ಅಬಕಾರಿ ಇಲಾಖೆಯು ನೂತನ ಸ್ಯಾಶೆಯಲ್ಲಿ ಪ್ಲಾಸ್ಟಿಕ್ ಅಂಶಗಳಿವೆ ಎಂದು ಪರೀಕ್ಷೆಯ ನಂತರ ತಿಳಿಸಿದಲ್ಲಿ, ತಾವು ಪ್ರಸಕ್ತ ಮಾರುಕಟ್ಟೆಗೆ ಬಿಡಲಾಗಿರುವ ಗುಟ್ಕಾ ಮತ್ತು ಪಾನ್ ಮಸಾಲಗಳನ್ನು ವಾಪಸ್ ಪಡೆಯುತ್ತೇವೆ ಎಂದು ಕಂಪನಿಯೊಂದರ ಮುಖ್ಯಸ್ಥ ತಿಳಿಸಿದ್ದಾರೆ.

ಈಗ ಐದು ಪ್ರಮುಖ ಕಂಪನಿಗಳು ನೂತನ ಸ್ಯಾಶೆಯಲ್ಲಿ ಮಾರಾಟ ಆರಂಭಿಸಿವೆ. ಇತರ ಕಂಪನಿಗಳು ಏಪ್ರಿಲ್ 1ರಿಂದ ಇದನ್ನೇ ಅನುಸರಿಸುವ ನಿರೀಕ್ಷೆಗಳಿವೆ. ಈ ಹಿಂದಿನ ದರದಲ್ಲೇ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ ದರ ಏರಿಕೆಯ ಪ್ರಸ್ತಾಪವಿಲ್ಲ ಎಂದು ಕಂಪನಿಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ