ನಾನು ಭಾರತಾಂಬೆ ಪುತ್ರ, ಅಮೆರಿಕಾ ಪಾಠ ಬೇಡ: ಮೋದಿ

ಮಂಗಳವಾರ, 22 ಮಾರ್ಚ್ 2011 (16:22 IST)
ಅಮೆರಿಕಾವು ತನ್ನನ್ನು ಭ್ರಷ್ಟತೆಗೆ ನಿಲುಕದ ವ್ಯಕ್ತಿ ಮತ್ತು ಪ್ರಭಾವಿ ಆಡಳಿತಗಾರ ಎಂದು ಹೇಳಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ನನಗೆ ಮಾನವ ಹಕ್ಕುಗಳ ಬೋಧನೆ ಮಾಡುವುದು ಬೇಡ; ನಾನು ಭಾರತಾಂಬೆಯ ಪುತ್ರ. ಅಮೆರಿಕಾ ಯಾವ ರೀತಿಯಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ನನಗೆ ಗೊತ್ತು ಎಂದು ಅಮೆರಿಕಾಕ್ಕೆ ಹೇಳಿದ್ದೆ ಎಂದಿದ್ದಾರೆ.

2006ರ ನವೆಂಬರ್ 2ರಂದು ಮುಂಬೈಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯು ವಾಷಿಂಗ್ಟನ್‌ಗೆ ಕಳುಹಿಸಿದ್ದ ರಹಸ್ಯ ದಾಖಲೆಯಲ್ಲಿ ಮೋದಿಯನ್ನು ಪ್ರಶಂಸೆ ಮಾಡಲಾಗಿತ್ತು. ಜತೆಗೆ ಇತರ ಕೆಲವು ಅಂಶಗಳನ್ನು ಕೂಡ ನಮೂದು ಮಾಡಲಾಗಿತ್ತು. ಇದಕ್ಕೆ ಮೋದಿ ಪ್ರತಿಕ್ರಿಯೆ ನೀಡಿದರು.

'ಮೋದಿ ಭ್ರಷ್ಟತೆಗೆ ನಿಲುಕದ ವ್ಯಕ್ತಿ ಎನ್ನುವುದು ಈಗ ಅಮೆರಿಕಾಕ್ಕೂ ಗೊತ್ತಿದೆ. ವಿಕಿಲೀಕ್ಸ್ ಎರಡು ಮುಖವನ್ನು ತೋರಿಸಿದೆ: ಒಂದು ಭಾರತ ಸರಕಾರದ್ದು. ಇನ್ನೊಂದು ಪ್ರಗತಿಪರ ಗುಜರಾತ್‌ನದ್ದು. ನನಗೆ ಮಾನವ ಹಕ್ಕುಗಳ ಬಗ್ಗೆ ನೀವು ಬೋಧನೆ ಮಾಡಬೇಡಿ, ನಾನು ಭಾರತಾಂಬೆಯ ಪುತ್ರ. ಅಮೆರಿಕಾ ಎಷ್ಟು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ನನಗೆ ಗೊತ್ತು ಎಂದು ನಾನು ಅಮೆರಿಕಾ ರಾಯಭಾರಿಗಳಿಗೆ ಹೇಳಿದ್ದೆ' ಎಂದರು.

ಮೋದಿ ಭ್ರಷ್ಟತೆಗೆ ನಿಲುಕದ ವ್ಯಕ್ತಿ, ಸಮರ್ಥ ಆಡಳಿತಗಾರ, ವ್ಯಾಪಾರಿ ಸಂಸ್ಕೃತಿಯನ್ನು ಗಾಢವಾಗಿ ಆಲಿಂಗಿಸಿಕೊಂಡಿರುವ ರಾಜ್ಯದಲ್ಲಿ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ವ್ಯಕ್ತಿ, ಅವಿವೇಕ ರಹಿತರು, ಕಾನೂನು-ಸುವ್ಯವಸ್ಥೆಯನ್ನು ಪಾಲಿಸುವ ರಾಜಕಾರಣಿ, ಹಿಂದೂ ಬಹುಸಂಖ್ಯಾತರ ಹಿತಾಸಕ್ತಿಯನ್ನು ಕಾಪಾಡುವವರು ಎಂದೆಲ್ಲ ತನ್ನನ್ನು ತಾನು ಬಿಂಬಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿರುವುದನ್ನು ಅಮೆರಿಕಾ ರಾಯಭಾರಿ ತನ್ನ ರಹಸ್ಯ ದಾಖಲೆಯಲ್ಲಿ ನಮೂದಿಸಿ ಅಮೆರಿಕಾಕ್ಕೆ ಕಳುಹಿಸಿದ್ದರು.

'ಹೇಳಿಕೆಗಳನ್ನು (ಬಿಜೆಪಿ ನಾಯಕರ) ಇದ್ದ ಹಾಗೆ ಮರು ನಮೂದಿಸಿರುವುದು (ಅಮೆರಿಕಾ ರಾಯಭಾರಿಗಳ ದಾಖಲೆಗಳಲ್ಲಿ) ನನಗೆ ಸಂತಸ ತಂದಿದೆ. ಆದರೆ ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುತ್ತಿರುವ ಅಮೆರಿಕಾ ಕುರಿತು ಸರಕಾರವು ಯೋಚನೆ ಮಾಡಬೇಕು ಎಂದು ಗುಜರಾತ್ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.

ವಿಕಿಲೀಕ್ಸ್ ವರದಿಗಳು ಸ್ಪಷ್ಟವಾಗಿವೆ. ಅಮೆರಿಕನ್ನರು ನಮಗೆ ಮಾನವ ಹಕ್ಕುಗಳ ಕುರಿತು ಬೋಧನೆ ಮಾಡಬೇಕಾಗಿಲ್ಲ ಎಂದು ನಾನು ಸಾರ್ವಜನಿಕವಾಗಿ ಹೇಳಿರುವಂತೆ, ಅಮೆರಿಕಾ ರಾಯಭಾರಿಗಳಿಗೂ ಹೇಳಿದ್ದೆ. ಮೋದಿ ಭ್ರಷ್ಟನಲ್ಲ ಎಂದು ಅಮೆರಿಕಾ ಯೋಚನೆ ಮಾಡಿರುವುದು ಖುಷಿ ತಂದಿದೆ. ಇದನ್ನೇ ಮನಮೋಹನ್ ಸಿಂಗ್ ಸರಕಾರದ ಬಗ್ಗೆ ಹೇಳಬಹುದೇ ಎಂದು ಮೋದಿ ಪ್ರಶ್ನಿಸಿದರು.

ವೆಬ್ದುನಿಯಾವನ್ನು ಓದಿ