ಮೋದಿ 'ಇಂದ್ರ-ಚಂದ್ರ' ಎಂದಿದ್ದ ಅಮೆರಿಕಾ ಹೇಳಿದ್ದೇನು?

ಮಂಗಳವಾರ, 22 ಮಾರ್ಚ್ 2011 (13:08 IST)
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಒಂದು ಕಡೆಯಿಂದ ವೀಸಾ ನಿರಾಕರಿಸುತ್ತಿರುವುದನ್ನು ಮುಂದುವರಿಸುತ್ತಾ ಬಂದಿರುವ ಅಮೆರಿಕಾ, ಇನ್ನೊಂದು ಕಡೆಯಿಂದ 'ನಾಳೆಯ ದಿನ ಅವರು ರಾಷ್ಟ್ರ ರಾಜಕಾರಣಕ್ಕೆ ಬಂದರೆ' ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಬೇಕಾದ ಸಿದ್ಧತೆಯನ್ನೂ ನಡೆಸುತ್ತಿದೆ. ಹಿಂದೂ ನಾಯಕ, ಭ್ರಷ್ಟಾಚಾರದಿಂದ ದೂರ ಇರುವವರು, ಸಮರ್ಥ ನಾಯಕ ಎಂದೆಲ್ಲ ಬಿರುದು-ಬಿನ್ನಾಣಗಳನ್ನು ಕೂಡ ಅದು ನೀಡಿದೆ.

ಇದು ಮುಂಬೈಯಲ್ಲಿನ ಅಮೆರಿಕಾ ರಾಯಭಾರ ಕಚೇರಿಯ ಮುಖ್ಯಸ್ಥ ಮೈಕೆಲ್ ಎಸ್. ಓವೆನ್ 2006ರ ನವೆಂಬರ್ 2ರಂದು ತಮ್ಮ ದೇಶಕ್ಕೆ ರವಾನಿಸಿರುವ ರಹಸ್ಯ ದಾಖಲೆಯ ಮುಖ್ಯಾಂಶಗಳು. ನರೇಂದ್ರ ಮೋದಿ ಬಗ್ಗೆ ಭಾರೀ 'ಅಧ್ಯಯನ' ನಡೆಸಿ ರಾಯಭಾರಿಗಳು ಕಳುಹಿಸಿರುವ ಈ ದಾಖಲೆ 'ವಿಕಿಲೀಕ್ಸ್' ಕೈ ಸೇರಿತ್ತು. ಅದನ್ನು ಪಡೆದುಕೊಂಡಿರುವ 'ದಿ ಹಿಂದೂ' ಆಂಗ್ಲಪತ್ರಿಕೆ ಬಹಿರಂಗಪಡಿಸಿದೆ. ಅದರ ಸಂಕ್ಷಿಪ್ತ ಮಾಹಿತಿಗಳು ಇಲ್ಲಿವೆ.

ಮೋದಿಯನ್ನು ಒಲಿಸಿಕೊಳ್ಳುವುದು ಹೇಗೆ?
ನರೇಂದ್ರ ಮೋದಿ ಬಿಜೆಪಿ ಮುಖ್ಯಸ್ಥರಾದಾಗ ಮತ್ತು 2009ರಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣಾ ಪ್ರಚಾರದಲ್ಲಿ ಪಕ್ಷವನ್ನು ಮುನ್ನಡೆಸುವಾಗ ಅವರ ಜತೆ ಅಮೆರಿಕಾ ಸರಕಾರವು ಹೇಗೆ ವ್ಯವಹರಿಸಬೇಕು ಎಂಬುದನ್ನು ಈಗಲೇ ಯೋಚನೆ ಮಾಡಬೇಕು.

ಅಹಮದಾಬಾದ್‌ಗೆ ಹೋದಾಗಲೆಲ್ಲ ನಮ್ಮ ರಾಯಭಾರಿಗಳು ಮೋದಿಯನ್ನು ಭೇಟಿ ಮಾಡುತ್ತಾರೆ. ಹೀಗೆ ಭೇಟಿ ಮಾಡುವುದರಿಂದ, ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅವರಿಗೆ ನೇರವಾಗಿ ಸಂದೇಶವೊಂದನ್ನು ರವಾನಿಸಿದಂತೆ ಆಗುತ್ತದೆ. ಅಲ್ಲದೆ, ನಾವು ಈಗ ಅವರನ್ನು ಭೇಟಿ ಮಾಡದೆ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಗಟ್ಟಿಯಾಗಲಿರುವ ಬಿಜೆಪಿಯು ನಮ್ಮನ್ನು ಅವಕಾಶವಾದಿಗಳು ಎಂದು ಆರೋಪಿಸುವುದರಿಂದಲೂ ತಪ್ಪಿಸಿಕೊಂಡಂತೆ ಆಗುತ್ತದೆ.

ಮೋದಿ ಗೆಲುವು ಖಚಿತ...
ಗುಜರಾತಿನ ಮುಸ್ಲಿಮೇತರ ಮತದಾರರ ವಲಯದಲ್ಲಿ ಪ್ರಸಿದ್ಧಿಯಿಂದ ಮುಂದುವರಿಯುತ್ತಿರುವ ಮುಖ್ಯಮಂತ್ರಿ ನರೇಂದ್ರ ಮೋದಿ 2007ರಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಸಂಶಯಗಳೇ ಇಲ್ಲ. ನಾವು ಅಹಮದಾಬಾದ್‌ಗೆ ಹೋದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಇದೇ ಮಾತನ್ನು ಹೇಳುತ್ತಿದ್ದರು. ಇಲ್ಲಿ ಪ್ರಶ್ನೆಯಿರುವುದು ಎಷ್ಟು ದೊಡ್ಡ ಅಂತರದ ಗೆಲುವು ಮೋದಿಯವರದ್ದಾಗುತ್ತದೆ ಎನ್ನುವುದು ಮಾತ್ರ.

ರಾಷ್ಟ್ರ ರಾಜಕಾರಣದ ಮೇಲೆ ಮೋದಿ ಕಣ್ಣು...
ಮೋದಿಯವರು ರಾಷ್ಟ್ರ ರಾಜಕಾರಣದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವುದು ಬಹುತೇಕ ಖಚಿತ. ಮತದಾರರ ಬೆಂಬಲವನ್ನು ಪಡೆದುಕೊಂಡಿರುವ ಅವರು ಆ ಮೂಲಕ ಬಿಜೆಪಿ ರಾಷ್ಟ್ರೀಯ ನಾಯಕತ್ವ ಪಡೆಯುವ ನಿಟ್ಟಿನಲ್ಲಿದ್ದಾರೆ. ಬಿಜೆಪಿಗೆ ಚೇತರಿಕೆ ನೀಡಲು ಮೋದಿಯಿಂದ ಮಾತ್ರ ಸಾಧ್ಯ ಎಂದು ಎಲ್.ಕೆ. ಆಡ್ವಾಣಿ ಕೂಡ ನಂಬಿದ್ದಾರೆ ಎಂದು ಗುಜರಾತ್ ಬಿಜೆಪಿ ಸಂಸದ ಹರೇನ್ ಪಾಠಕ್ ನಮಗೆ ಹೇಳಿದ್ದಾರೆ.

ಯುವ ಜನತೆಯ ಜತೆ ಅವರು ಹೊಂದಿರುವ ಸಂಬಂಧ, ಅವರ ಪ್ರಭಾವ ಖಂಡಿತಾ ಪಕ್ಷಕ್ಕೆ ಲಾಭವಾಗಲಿದೆ ಎನ್ನುವ ಅಭಿಪ್ರಾಯವಿದೆ. ಆರೆಸ್ಸೆಸ್ ನಾಯಕ ರಾಮ್ ಮಾಧವ್ ಕೂಡ ಇದನ್ನೇ ನಮಗೆ ಹೇಳಿದ್ದಾರೆ.

ಮೋದಿ ನಾಯಕತ್ವದ ಬಗ್ಗೆ ಮಹಾರಾಷ್ಟ್ರದಲ್ಲೂ ಅತ್ಯುತ್ತಮ ಅಭಿಪ್ರಾಯವಿದೆ. ಪ್ರಧಾನ ಮಂತ್ರಿಯಾಗುವ ಸಾಮರ್ಥ್ಯ ಮೋದಿಗೆ ಇದೆ ಎಂದು ಬಿಜೆಪಿಯ ಬಹುಮಂದಿ ನಂಬಿದ್ದಾರೆ. ಮುಖ್ಯಮಂತ್ರಿಯ ಇತರ ವಿಚಾರಗಳು ಹೆಚ್ಚು ಪ್ರಚಾರಕ್ಕೆ ಬಂದರೆ, ಆಗ ಜನತೆ 2002ರ ಘಟನೆಯನ್ನು ಮತದಾರರು ಮರೆಯಬಹುದು. ಇದನ್ನೇ ಬಿಜೆಪಿ ಬಳಸಿಕೊಳ್ಳಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿಯೂಶ್ ಗೋಯಲ್ ಹೇಳಿದ್ದಾರೆ.

ಮೋದಿ ಸಮರ್ಥ ನಾಯಕ...
ಒಬ್ಬ ಸಮರ್ಥ ಆಡಳಿತಗಾರ, ಉದ್ಯಮ ಸ್ನೇಹಿ ವ್ಯಕ್ತಿ, ಅವಿವೇಕದ ವ್ಯಕ್ತಿಯಲ್ಲ, ಕಾನೂನು-ಸುವ್ಯವಸ್ಥೆಯನ್ನು ಪಾಲಿಸುವ ರಾಜಕಾರಣಿ ಎಂದು ತನ್ನನ್ನು ತಾನು ಯಶಸ್ವಿಯಾಗಿ ಬಿಂಬಿಸಿಕೊಂಡಿರುವುದರಿಂದ ಗುಜರಾತ್ ಮತದಾರರು ಮೋದಿಯನ್ನು ಮೆಚ್ಚುತ್ತಾರೆ ಎಂದು ಬಿಜೆಪಿಯ ಬಹುತೇಕ ಮಂದಿ ಹೇಳಿದ್ದಾರೆ.

ಬೆಂಬಲಿಗರು ಮತ್ತು ವಿಶ್ಲೇಷಕರು ಕೂಡ ಮೋದಿಯ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಗುಜರಾತಿಲ್ಲಿ ಭ್ರಷ್ಟಾಚಾರವನ್ನು ಇಳಿಕೆ ಮಾಡುವ ಮೂಲಕ ಪರಿಶುದ್ಧ ರಾಜಕಾರಣಿ ಎಂಬ ಪಟ್ಟವೂ ಅವರಿಗೆ ದೊರೆತಿದೆ. ಆದರೂ ವಾಸ್ತವದಲ್ಲಿ ಮೋದಿ ಎಷ್ಟು ಪರಿಶುದ್ಧರು ಎಂಬ ಪ್ರಶ್ನೆ ಉಳಿದುಕೊಂಡಿದೆ.

ಭಾರತದ ಇತರ ಚುನಾಯಿತ ಪ್ರತಿನಿಧಿಗಳು ತಮ್ಮ ಸ್ಥಾನವನ್ನು ಸ್ವಂತಕ್ಕೆ ಅಥವಾ ಕುಟುಂಬಕ್ಕೆ (ಸ್ವಜನ ಪಕ್ಷಪಾತ) ಬಳಸಿಕೊಳ್ಳುವಂತಹ ವ್ಯಕ್ತಿ ಮೋದಿಯಲ್ಲ ಎಂದು ಹಲವು ಮಂದಿ ಹೇಳುತ್ತಾರೆ. ಅಧಿಕಾರಶಾಹಿ ವ್ಯವಸ್ಥೆಯಲ್ಲಿನ ಲಂಚಬಾಕತನವನ್ನು ಕೂಡ ಅವರು ಪರಿಣಾಮಕಾರಿಯಾಗಿ ನಿಯಂತ್ರಿಸಿರುವ ಮಾತುಗಳಿವೆ. ಆದರೂ ದೊಡ್ಡ ಮಟ್ಟದ ಭ್ರಷ್ಟಾಚಾರಗಳು ಈಗಲೂ ಸಾಮಾನ್ಯ ಎಂದು ಹೇಳಲಾಗುತ್ತಿದೆ.

ಪತ್ರಕರ್ತ ಜಾವೇದ್ ರಹಮತುಲ್ಲಾ ಹೇಳುವ ಪ್ರಕಾರ, ರಿಲಯೆನ್ಸ್ ತನ್ನ ಸಂಸ್ಕರಣಾ ಕೇಂದ್ರವನ್ನು ಜಾಮಾನಗರಕ್ಕೆ ವಿಸ್ತರಿಸಲು ಅನುಮತಿಗಾಗಿ ದೊಡ್ಡ ಪ್ರಮಾಣದ ಲಂಚ ನೀಡಿದೆ. ಆದರೆ ಈ ಹಣ ಮೋದಿ ಅಥವಾ ಯಾವುದೇ ವ್ಯಕ್ತಿಗೆ ಸೇರುವ ಬದಲು, ನೇರವಾಗಿ ಬಿಜೆಪಿ ಪಕ್ಷದ ಪೆಟ್ಟಿಗೆಗೆ ಹೋಗಿದೆ.

ಮುಸ್ಲಿಮರನ್ನು ಎಲ್ಲಿಡಬೇಕೋ ಅಲ್ಲಿಟ್ಟಿದ್ದಾರೆ...
2002ರ ರಕ್ತಸಿಕ್ತ ಅಧ್ಯಾಯದ ಕುರಿತು ಗುಜರಾತಿಗಳು ಮತ್ತು ಭಾರತೀಯರಲ್ಲಿ ಸಾಮಾನ್ಯ ಭಿನ್ನಮತ ಮುಂದುವರಿದಿದೆ. ಸಾಕಷ್ಟು ಮಂದಿಗೆ, ಅದರಲ್ಲೂ ಮುಸ್ಲಿಮರು, ಮಾನವ ಹಕ್ಕುಗಳ ಹೋರಾಟಗಾರರು, ಶಿಕ್ಷಿತ ನಗರ ಪ್ರದೇಶದ ಪ್ರಗತಿಪರ ಅಥವಾ ಎಡಪಂಥೀಯ ಮಂದಿಗೆ ಮೋದಿ ಅಪಥ್ಯವಾದರೆ, ಹಿಂದೂಗಳಲ್ಲಿ ಬಹುತೇಕ ಮಂದಿ ಅವರನ್ನು ಮೆಚ್ಚುತ್ತಾರೆ.

ಮುಸ್ಲಿಮರ ಕಡೆಗಿನ ಗುಜರಾತಿ ಹಿಂದೂಗಳ ನಕಾರಾತ್ಮಕ ಧೋರಣೆ ಮುಂದುವರಿದಿದೆ. ಭಾರತದಲ್ಲಿ ಮುಸ್ಲಿಮರಲ್ಲ, ನಾವು ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳು ಎಂಬ ಭಾವನೆ ಅವರಲ್ಲಿದೆ. 2002ರ ಗಲಭೆಗಿಂತ ಮೊದಲು ಹಿಂದೂಗಳಿಗೆ ರಾಜಕಾರಣಿಗಳಿಂದ ಅನ್ಯಾಯವಾಗುತ್ತಿತ್ತು, ಮುಸ್ಲಿಮರಿಗೆ ವಿಶೇಷ ಉಪಚಾರ ನೀಡಲಾಗುತ್ತಿತ್ತು ಎಂಬ ಕೋಪವಿದೆ.

ಆದರೆ ಮೋದಿ 2002ರಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲವೂ ಬದಲಾಗಿದೆ. ಮುಸ್ಲಿಮರನ್ನು ಎಲ್ಲಿಡಬೇಕೋ, ಅಲ್ಲಿ ಮೋದಿ ಇಟ್ಟಿದ್ದಾರೆ.

ಹಜ್ ಸಬ್ಸಿಡಿ, ಮುಸ್ಲಿಂ ನಾಗರಿಕ ಸಂಹಿತೆ, ವಂದೇ ಮಾತರಂ ಹಾಡುವುದು ಅಥವಾ ಇತರ ಧಾರ್ಮಿಕ ಸೂಕ್ಷ್ಮ ವಿಚಾರಗಳನ್ನು ಬಿಜೆಪಿ ತನ್ನ ರಾಷ್ಟ್ರೀಯ ರಾಜಕೀಯ ನಿಲುವಿನಲ್ಲಿ ಪ್ರತಿಧ್ವನಿಸುವುದನ್ನು ಮುಂದುವರಿಸಿದೆ.

ಹೀಗೆಂದು ಅಮೆರಿಕಾ ರಾಯಭಾರಿಗಳು, ತಾವು ಸಂಗ್ರಹಿಸಿರುವ ಮಾಹಿತಿ ಮತ್ತು ಅಭಿಪ್ರಾಯವನ್ನು ಒಟ್ಟು ಮಾಡಿ ಅಮೆರಿಕಾಕ್ಕೆ 2006ರಲ್ಲಿ ರವಾನಿಸಿದ್ದರು.

ವೆಬ್ದುನಿಯಾವನ್ನು ಓದಿ