ನರೇಂದ್ರ ಮೋದಿ ಸಾಗರಕ್ಕೆ ಅಣೆಕಟ್ಟು ಕಟ್ಟಲು ಹೊರಟಿರುವುದು ಗೊತ್ತೇ ಇದೆ. ಈಗ ಅವರ ಸರದಿ 'ಜುರಾಸಿಕ್ ಪಾರ್ಕ್' ನಿರ್ಮಾಣ. ಹೌದು, ಇದುವರೆಗೆ ಹಾಲಿವುಡ್ ಸಿನಿಮಾಗಳಲ್ಲಿ ನೋಡಿದ್ದ ಡೈನೋಸಾರ್‌ಗಳಿಗಾಗಿ ಗುಜರಾತಿನಲ್ಲಿ ಪಾರ್ಕೊಂದು ನಿರ್ಮಾಣವಾಗಲಿದೆ.
ಆದರೆ ಇದು ಜೀವಂತ ಡೈನೋಸಾರ್‌ಗಳಿಗೆ ನಿರ್ಮಿಸಲಾಗುತ್ತಿರುವ ಪಾರ್ಕ್ ಅಲ್ಲ. ಬದಲಿಗೆ ಡೈನೋಸಾರ್‌ಗಳ ಪಳೆಯುಳಿಕೆ ಸಂಗ್ರಹಾಲಯ. ಈ ಹಿಂದೆ ಭಾರೀ ಸಂಖ್ಯೆಯ ಡೈನೋಸಾರ್‌ಗಳು ನೆಲೆಸಿದ್ದ ಖೇಡಾ ಜಿಲ್ಲೆಯ ರಯೋಲಿ ಗ್ರಾಮದಲ್ಲಿ ಈ ಪಾರ್ಕ್ ತಲೆ ಎತ್ತಲಿದೆ.
ಅಹಮದಾಬಾದಿನಿಂದ 85 ಕಿಲೋ ಮೀಟರ್ ದೂರದಲ್ಲಿರುವ ಬಾಲಸಿನೋರ್ ಎಂಬಲ್ಲಿದೆ ರಯೋಲಿ ಗ್ರಾಮ. ಇಲ್ಲಿ ಡೈನೋಸಾರ್ ವಿವಿಧ ಪ್ರಭೇದಗಳ 1000ಕ್ಕೂ ಹೆಚ್ಚು ಮೊಟ್ಟೆಗಳ ಪಳೆಯುಳಿಕೆಗಳು ಪತ್ತೆಯಾಗಿದ್ದವು. ಅದೇ ಸ್ಥಳವನ್ನು 'ಡೈನೋಸಾರ್ ಪ್ರವಾಸೋದ್ಯಮ'ವನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಗುಜರಾತ್ ಸರಕಾರ ಕೈ ಹಾಕಿದೆ.
ಈ ಸ್ಥಳವು ಗುಜರಾತ್ ಪರಿಸರ ವಿಜ್ಞಾನ ಮತ್ತು ಅಧ್ಯಯನ ಪ್ರತಿಷ್ಠಾನದ ವಶದಲ್ಲಿದೆ.
ಕಚ್‌ನಲ್ಲಿ ಫ್ಲೆಮಿಂಗೋ ಸಿಟಿ ಅಥವಾ ಸಾಸನ್ ಗಿರ್‌ನಲ್ಲಿನ ಏಷಿಯಾ ಸಿಂಹ ಅಭಯಧಾಮಗಳು ಇರುವಂತೆ ಬಾಲಸಿನೋರ್‌ನಲ್ಲಿ ಡೈನೋಸಾರ್ ಪಳೆಯುಳಿಕೆ ಪಾರ್ಕ್ ಕೂಡ ವಿಶಿಷ್ಟವಾದುದು. ಇಲ್ಲಿನ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅಂತಾರಾಷ್ಟ್ರೀಯ ಆಕರ್ಷಣಾ ಕೇಂದ್ರವನ್ನಾಗಿ ಪರಿವರ್ತಿಸಲು ನಾವು ಸಾಕಷ್ಟು ಶ್ರಮ ವಹಿಸುತ್ತಿದ್ದೇವೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಜಯನಾರಾಯಣ್ ವ್ಯಾಸ್ ತಿಳಿಸಿದ್ದಾರೆ.
ಇಲ್ಲಿ ಮೊತ್ತ ಮೊದಲ ಬಾರಿ ಡೈನೋಸಾರ್ ಪಳೆಯುಳಿಕೆಗಳು ಪತ್ತೆಯಾದದ್ದು 1981ರಲ್ಲಿ. ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾ ಸಂಸ್ಥೆಗೆ ಇದು ಸಿಕ್ಕಿತ್ತು. ಇದಾದ ಒಂದು ವರ್ಷದ ನಂತರ ಸುಮಾರು 1000 ಡೈನೋಸಾರ್ ಮೊಟ್ಟೆಗಳು ಸಿಕ್ಕಿದ್ದವು. ಬಳಿಕ ಭಾರೀ ಸಂಖ್ಯೆಯ ವಿಜ್ಞಾನಿಗಳು ಇಲ್ಲಿಗೆ ಅಧ್ಯಯನಕ್ಕಾಗಿ ಬರುತ್ತಿದ್ದಾರೆ.
ವಿಜ್ಞಾನಿಗಳ ಪ್ರಕಾರ ಇಲ್ಲಿ ಡೈನೋಸಾರ್‌ಗಳ ಕನಿಷ್ಠ ಏಳು ಪ್ರಭೇದಗಳು ಬದುಕಿದ್ದವು. ಸಿಕ್ಕಿರುವ ಪಳೆಯುಳಿಕೆಗಳು 6.5 ಕೋಟಿ ವರ್ಷಗಳಷ್ಟು ಪುರಾತನವಾದುವು ಎಂದು ಅವರು ಅಂದಾಜಿಸಿದ್ದಾರೆ.