ವಿಶ್ವಕಪ್ ಎಫೆಕ್ಟ್; ಪಾಕ್ ಉಗ್ರರ ಪ್ರಶ್ನಿಸಲು ಭಾರತಕ್ಕೆ ಚಾನ್ಸ್
ಮಂಗಳವಾರ, 29 ಮಾರ್ಚ್ 2011 (16:27 IST)
2008ರ ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಪಾಕಿಸ್ತಾನವು ತನ್ನ ದೇಶದ ಶಂಕಿತ ಭಯೋತ್ಪಾದಕರ ವಿಚಾರಣೆಗೆ ಭಾರತಕ್ಕೆ ಅನುಮತಿ ನೀಡಿರುವ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಉಭಯ ರಾಷ್ಟ್ರಗಳ ಗೃಹ ಕಾರ್ಯದರ್ಶಿಗಳ ನಡುವಿನ ಮಾತುಕತೆಯಿಂದ ಈ ಫಲಿತಾಂಶ ಹೊರ ಬಿದ್ದಿದೆ.
ಭಾರತದ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಮತ್ತು ಪಾಕಿಸ್ತಾನದ ಗೃಹ ಕಾರ್ಯದರ್ಶಿ ಚೌಧರಿ ಖಮರ್ ಜಮಾನ್ ಮಂಗಳವಾರ ಎರಡನೇ ಸುತ್ತಿನ ಮಾತುಕತೆ ನಡೆಸಿದ ಬಳಿಕ ಈ ಜಂಟಿ ಹೇಳಿಕೆಯನ್ನು ನೀಡಿದ್ದಾರೆ. ಇದರೊಂದಿಗೆ ನಿನ್ನೆ ಆರಂಭವಾಗಿದ್ದ ಮಾತುಕತೆ ಇಂದು ಸಕಾರಾತ್ಮಕ ಫಲಿತಾಂಶದೊಂದಿಗೆ ಮುಕ್ತಾಯ ಕಂಡಿದೆ.
ಭಾರತದ ತನಿಖಾಧಿಕಾರಿಗಳು ಮುಂಬೈ ದಾಳಿ ಸಂಬಂಧ ಪಾಕಿಸ್ತಾನದ ಜೈಲಿನಲ್ಲಿರುವ ಲಷ್ಕರ್ ಇ ತೋಯ್ಬಾದ ಶಂಕಿತ ಭಯೋತ್ಪಾದಕರನ್ನು ಅಲ್ಲಿಗೆ ಹೋಗಿ ಮೊತ್ತ ಮೊದಲ ಬಾರಿ ವಿಚಾರಣೆ ನಡೆಸುವ ಅವಕಾಶ ಇದರಿಂದ ದೊರೆತಂತಾಗಿದೆ. ವಿಚಾರಣೆ ನಡೆಸಲು ನೀಡುವ ಅವಕಾಶದ ಮಾದರಿ ಹೇಗಿರುತ್ತದೆ ಮತ್ತು ಯಾವಾಗ ಎಂಬುದನ್ನು ಕೆಲವೇ ದಿನಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಕಪ್ ಆಹ್ವಾನದ ಕೊಡುಗೆಯೇ? ಮೊಹಾಲಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ನಾಳೆ ಜತೆಯಾಗಿ ನೋಡಲಿರುವ ಪ್ರಧಾನಿಗಳಾದ ಭಾರತದ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಯೂಸುಫ್ ರಾಜಾ ಗಿಲಾನಿಯವರ ಪಾಲಿಗೆ ಇದು ಸಿಹಿಸುದ್ದಿ.
ಏನೇ ಆದರೂ ಮಾತುಕತೆ ಮುಂದುವರಿಯಬೇಕು, ಎಲ್ಲಾ ಸಮಸ್ಯೆಗಳಿಗೂ ಮಾತುಕತೆಯೇ ಪರಿಹಾರ ಎಂದು ಹೇಳಿಕೊಂಡು ಬಂದಿದ್ದ ಉಭಯ ರಾಷ್ಟ್ರಗಳ ಪ್ರಧಾನ ಮಂತ್ರಿಗಳು ಬುಧವಾರ ಕ್ರಿಕೆಟ್ ಪಂದ್ಯವನ್ನು ಜತೆಯಾಗಿ ವೀಕ್ಷಿಸಿದ ನಂತರ ಕ್ರೀಡಾಂಗಣದ ಆವರಣದಲ್ಲೇ ಆಯೋಜಿಸಲಾಗುವ ಔಪಚಾರಿಕ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಬರುವಂತೆ ಪಾಕ್ ಪ್ರಧಾನಿಗೆ ಭಾರತದ ಪ್ರಧಾನಿ ನೀಡಿರುವ ಆಹ್ವಾನಕ್ಕೆ ಪ್ರತಿಯಾಗಿ ಮುಂಬೈ ದಾಳಿ ಶಂಕಿತರ ವಿಚಾರಣೆಗೆ ಪಾಕಿಸ್ತಾನ ಅವಕಾಶ ನೀಡಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವೆ ಮುರಿದು ಬಿದ್ದಿರುವ ಮಾತುಕತೆ ಪುನಶ್ಚೇತನ ಪಡೆದುಕೊಳ್ಳುವ ಸಾಧ್ಯತೆಗಳು ಎದ್ದು ಕಾಣುತ್ತಿವೆ.
ಸಂಜೋತಾ ವಿವರಣೆ ನೀಡಿದ ಭಾರತ... ಪಾಕಿಸ್ತಾನವು ಮುಂಬೈ ದಾಳಿಕೋರ ಶಂಕಿತರ ವಿಚಾರಣೆಗೆ ಅವಕಾಶ ನೀಡಿದ್ದರೆ, ಭಾರತವು ಸಂಜೋತಾ ರೈಲು ಸ್ಫೋಟದ ವಿವರಗಳನ್ನು ಪಾಕ್‌ಗೆ ಹಸ್ತಾಂತರಿಸಿದೆ. ಹಿಂದೂ ಬಲಪಂಥೀಯರು ಪಾಲ್ಗೊಂಡಿದ್ದಾರೆ ಎಂದು ಹೇಳಲಾಗಿರುವ ಪ್ರಕರಣದ ಕುರಿತು ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡುವ ಭರವಸೆಯನ್ನು ಕೂಡ ನೀಡಿದೆ.
2007ರಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಹೋಗುತ್ತಿದ್ದ ರೈಲಿನಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಇದು 'ಹಿಂದೂ ಭಯೋತ್ಪಾದನೆ' ಎಂದು ಕೇಂದ್ರ ಸರಕಾರ ಆರೋಪಿಸಿಕೊಂಡು ಬಂದಿದೆ. ಈ ಘಟನೆಯಲ್ಲಿ 68 ಮಂದಿ ಬಲಿಯಾಗಿದ್ದರು.
ಪ್ರಕರಣದ ಆರೋಪಪಟ್ಟಿ ಸಲ್ಲಿಕೆಯಾದ ನಂತರ ಇನ್ನಷ್ಟು ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ಭಾರತವು ಪಾಕಿಸ್ತಾನಕ್ಕೆ ತಿಳಿಸಿದೆ.