ಸೀಟು ಜಗಳ; ಜಯಲಲಿತಾ ಕ್ಯಾಂಪಿನಿಂದ ವೈಕೋ ಔಟ್

ಭಾನುವಾರ, 20 ಮಾರ್ಚ್ 2011 (17:07 IST)
ಕಳೆದ ಬಾರಿಗಿಂತ ತೀರಾ ಕಡಿಮೆ ಮತ್ತು ಕೇಳಿದಷ್ಟು ಸೀಟು ಕೊಡಲಿಲ್ಲ ಎಂಬ ಕಾರಣವನ್ನು ಮುಂದೊಡ್ಡಿರುವ ವೈಕೋ ನೇತೃತ್ವದ ಎಂಡಿಎಂಕೆ ಜಯಲಲಿತಾ ಅವರ ಎಐಎಡಿಎಂಕೆ ಮೈತ್ರಿಕೂಟದಿಂದ ಹೊರ ಬಿದ್ದಿದೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಇಲ್ಲ ಎಂದು ವೈಕೋ ಇದರ ಬೆನ್ನಿಗೆ ಪ್ರಕಟಿಸಿದ್ದಾರೆ.

ಏಪ್ರಿಲ್ 13ರಂದು ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಎಲ್ಲಾ 234 ಕ್ಷೇತ್ರಗಳ ಫಲಿತಾಂಶ ಮೇ 13ರಂದು ಪ್ರಕಟವಾಗಲಿದೆ. ಪ್ರಸಕ್ತ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಕರುಣಾನಿಧಿ ನೇತೃತ್ವದ ಡಿಎಂಕೆ ಮೈತ್ರಿಕೂಟವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಪಣತೊಟ್ಟಿರುವ ಜಯಲಲಿತಾ, ಹಲವು ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ನಡುವೆ ಇಂತಹ ಪ್ರಸಂಗ ನಡೆದಿರುವುದು ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ.

ಕಳೆದ ಬಾರಿ ಎಂಡಿಎಂಕೆ 35 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ ಕನಿಷ್ಠ 31 ಸೀಟುಗಳಾದರೂ ಬೇಕೆಂದು ವೈಕೋ ಪಟ್ಟು ಹಿಡಿದಿದ್ದರು. ಆದರೆ ಜಯಲಲಿತಾ ಕೇವಲ 12 ಸೀಟುಗಳನ್ನು ಬಿಟ್ಟುಕೊಡಲು ಮಾತ್ರ ಸಿದ್ಧರಿದ್ದರು. ಇದರಿಂದ ಅಸಮಾಧಾನಗೊಂಡ ಎಂಡಿಎಂಕೆ, ಜಯಲಲಿತಾ ಕ್ಯಾಂಪಿನಿಂದ ಹೊರ ಬಿದ್ದಿದೆ.

ಜಯಲಲಿತಾ ಅವರ ಪಕ್ಷವು ನಮ್ಮನ್ನು ನಡೆಸಿಕೊಂಡ ರೀತಿ ಪಕ್ಷದ ಕಾರ್ಯಕರ್ತರಿಗೆ ತೀವ್ರ ನೋವನ್ನು ತಂದಿದೆ ಎಂದು ವೈಕೋ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇತರ ಹತ್ತು ಪಕ್ಷಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿರುವ ಜಯಲಲಿತಾ ಅವರ ಎಐಎಡಿಎಂಕೆಗೆ ಈ ಬಾರಿ ಅತಿದೊಡ್ಡ ಮಿತ್ರಪಕ್ಷವೆಂದರೆ ನಟ ವಿಜಯಕಾಂತ್ ಅವರ ಡಿಎಂಡಿಕೆ. ಅವರಿಗೆ 41 ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. 160 ಕ್ಷೇತ್ರಗಳಲ್ಲಿ ಎಐಎಡಿಎಂಕೆ ಸ್ಪರ್ಧಿಸುತ್ತಿದೆ.

ಉಳಿದಂತೆ ಸಿಪಿಐ 10, ಸಿಪಿಐ (ಎಂ) 12 ಮತ್ತು ಇತರ ಸಣ್ಣಪುಟ್ಟ ಪಕ್ಷಗಳು ಸೇರಿವೆ.

ಅತ್ತ ಡಿಎಂಕೆ 119 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದರ ಮೈತ್ರಿಕೂಟದಲ್ಲಿ ಪ್ರಮುಖ ಪಾಲುದಾರ ಕಾಂಗ್ರೆಸ್‌ಗೆ 63 ಸೀಟುಗಳನ್ನು ಕರುಣಾನಿಧಿ ಬಿಟ್ಟು ಕೊಟ್ಟಿದ್ದಾರೆ. ರಾಮದಾಸ್ ಅವರ ಪಿಎಂಕೆಗೆ 30, ವಿಸಿಕೆಗೆ 10 ಸೀಟುಗಳನ್ನು ಡಿಎಂಕೆ ಮೈತ್ರಿಕೂಟ ಮೀಸಲಿಟ್ಟಿದೆ. ಒಟ್ಟಾರೆ ಈ ಮೈತ್ರಿಕೂಟದಲ್ಲಿರುವ ಪಕ್ಷಗಳ ಸಂಖ್ಯೆ ಎಂಟು.

ವೆಬ್ದುನಿಯಾವನ್ನು ಓದಿ