ನಾಗಾರಾಧನೆಯ ನಾಡು ಕುಕ್ಕೆಸುಬ್ರಹ್ಮಣ್ಯದಲ್ಲಿ ಷಷ್ಠಿ ಸಂಭ್ರಮ

- ಬಿ.ಎಂ.ಲವಕುಮಾರ್, ಮೈಸೂರು
WD
WD
ಸುತ್ತಲೂ ಹಸಿರು ಹಚ್ಚಡವನ್ನೊದ್ದು ಮುಗಿಲೆತ್ತರಕ್ಕೇರಿ ನಿಂತ ಪರ್ವತಶ್ರೇಣಿಗಳು... ಅವುಗಳ ನಡುವಿನಲ್ಲಿ ತೂಗಿ ತೊನೆಯುವ ತೆಂಗು ಅಡಿಕೆ ತೋಟಗಳು... ಜುಳು ಜುಳು ನಿನಾದಗೈಯ್ಯುತ್ತಾ ಹರಿವ ಕುಮಾರಧಾರಾ ನದಿ... ದೇಗುಲದಿಂದ ಅಲೆಅಲೆಯಾಗಿ ಹೊರಹೊಮ್ಮುವ ಗಂಟೆಯ ನಿನಾದ... ಕಿವಿಗೆ ಅಪ್ಪಳಿಸುವ ಚಂಡೆಯ ಸದ್ದು... ಭಕ್ತಿ ಭಾವದಿಂದ ಸುಬ್ರಹ್ಮಣ್ಯನಿಗೆ ನಮಿಸುವ ಭಕ್ತರು... ಇದು ಸಪ್ತ ಮಹಾಕ್ಷೇತ್ರಗಳಲ್ಲೊಂದಾದ ಪರಶುರಾಮ ಸೃಷ್ಟಿಯ ನಾಗಪೂಜೆಯ ನಾಡು ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಸಿಗುವ ದಿನನಿತ್ಯದ ಸುಂದರ, ರಮಣೀಯ ದೃಶ್ಯಗಳು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪರಮ ಪವಿತ್ರ ಕ್ಷೇತ್ರ, ಪ್ರವಾಸಿ ತಾಣವೂ ಆಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೆ ಸೇರಿದೆ. ಕೊಡಗು, ಹಾಸನ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ಈ ಕ್ಷೇತ್ರದ ಪೂರ್ವಕ್ಕೆ ಸಹ್ಯಾದ್ರಿ ಶ್ರೇಣಿಯ ಕುಮಾರ ಪರ್ವತ, ಶೇಷ ಪರ್ವತ ಹಾಗೂ ಸಿದ್ದ ಪರ್ವತಗಳಿದ್ದು, ದಟ್ಟ ಕಾಡನ್ನು ಹೊಂದಿ ತನ್ನದೇ ಆದ ನಿಸರ್ಗ ರಮಣೀಯತೆಯಿಂದ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಹಾಗಾಗಿ ಇಲ್ಲಿಗೆ ಕೇವಲ ಸ್ವಾಮಿ ಸುಬ್ರಹ್ಮಣ್ಯನ ದರ್ಶನ ಮಾಡಲು ಮಾತ್ರ ಭಕ್ತರು ಬರುವುದಲ್ಲದೆ, ಚಾರಣ ಮಾಡಲು ಕೂಡ ಪ್ರವಾಸಿಗರು ಆಗಮಿಸುತ್ತಾರೆ.

ಸುಬ್ರಹ್ಮಣ್ಯ ಕ್ಷೇತ್ರವು ವರ್ಷದ ಎಲ್ಲಾ ದಿನಗಳಲ್ಲಿಯೂ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಅಷ್ಟೇ ಅಲ್ಲ ಸುತ್ತಲೂ ಪರ್ವತ ಹಾಗೂ ಅರಣ್ಯದಿಂದ ಆವೃತವಾಗಿರುವುದರಿಂದ ಮಳೆಯೂ ಹೆಚ್ಚಾಗಿಯೇ ಸುರಿಯುತ್ತಿರುತ್ತದೆ. ಆದರೆ ಇದೀಗ ವರುಣ ಒಂದಷ್ಟು ಬಿಡುವು ನೀಡಿದ್ದರಿಂದ ಜನರೆಲ್ಲಾ ಮೈಕೊಡವಿಕೊಂಡು ಮೇಲೆದ್ದಿದ್ದಾರಲ್ಲದೆ, ಮುಂದೆ ಬರಲಿರುವ ಚಂಪಾಷಷ್ಠಿಯ ದಿವ್ಯ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.

WD
ಸಾಮಾನ್ಯವಾಗಿ ಚಂಪಾ ಷಷ್ಠಿಯಂದು ಎಲ್ಲಿ ಸುಬ್ರಹ್ಮಣ್ಯ ದೇಗುಲವಿದೆಯೋ ಅಲ್ಲೆಲ್ಲಾ ವಿಶೇಷ ಪೂಜೆಗಳು ನಡೆಯುತ್ತವೆ. ಅಷ್ಟೇ ಅಲ್ಲ ಅಶ್ವತ್ಥ ಕಟ್ಟೆಯಲ್ಲಿ ಸರ್ಪಾಕಾರದ ವಿಗ್ರಹವನ್ನಿಟ್ಟು ಸುಬ್ರಹ್ಮಣ್ಯ ಸ್ವಾಮಿಯನ್ನು ಆವಾಹನೆ ಮಾಡಿ ಹಾಲೆರೆದು ಅಭಿಷೇಕ ಮಾಡಿ ಪಾಯಸದ ನೈವೇದ್ಯ ಅರ್ಪಿಸಿ ಅಂದು ಉಪವಾಸ ವೃತವನ್ನು ಆಚರಿಸಲಾಗುತ್ತದೆ.

ಹಾಗೆನೋಡಿದರೆ ಕುಕ್ಕೆಸುಬ್ರಹ್ಮಣ್ಯ ಕ್ಷೇತ್ರವು ನಾಗಪೂಜೆಗೆ ಹೆಸರುವಾಸಿಯಾಗಿದೆ. ವಲ್ಮೀಖ ಅರ್ಥಾತ್ ಹುತ್ತ ಇಲ್ಲಿನ ಆರಾಧ್ಯ ದೈವ. ಅಲ್ಲಿಂದ ತೆಗೆದ ಮಣ್ಣು ಪ್ರಸಾದವಾಗಿದೆ. ಸರ್ಪದೋಷಕ್ಕೊಳಗಾದವರು ಇಲ್ಲಿ ಸರ್ಪ ಸಂಸ್ಕಾರ ಮಾಡಿ ತಮ್ಮ ಪಾಪ ಕಳೆದು ಕೊಳ್ಳುತ್ತಾರೆ.
ಸುಬ್ರಹ್ಮಣ್ಯ ದೇವಾಲಯವು ಸುಮಾರು ಎಂಟನೆಯ ಶತಮಾನದ್ದು ಎನ್ನಲಾಗಿದೆ. ಇಲ್ಲಿ ನರಸಿಂಹ, ಉಮಾಮಹೇಶ್ವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆಯಾದರೂ ಸುಬ್ರಹ್ಮಣ್ಯನೇ ಆದಿದೈವನಾಗಿದ್ದಾನೆ.

ಹಿಂದೆ ಸುಬ್ರಹ್ಮಣ್ಯವು ಬಲ್ಲಾಳರಾಜನ ರಾಜಧಾನಿಯಾಗಿತ್ತು ಎನ್ನಲಾಗಿದೆ. ಇಲ್ಲಿನ ದೇವಾಲಯದಲ್ಲಿರುವ ಮೂರ್ತಿ ಬಲ್ಲಾಳ ಅರಸರದ್ದಾಗಿದೆ. ಇತಿಹಾಸದ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯನ್ನು ಹನ್ನೊಂದನೇ ಶತಮಾನದಲ್ಲಿ ಹೊಯ್ಸಳ ಬಲ್ಲಾಳ ಅರಸರು ಆಳುತ್ತಿದ್ದರೆನ್ನಲಾಗಿದೆ. ಆದರೆ ಇಕ್ಕೇರಿ ಅರಸರು ಆಳ್ವಿಕೆ ನಡೆಸಲು ಆರಂಭಿಸಿದ ಬಳಿಕ ಕೆಲವೊಂದು ಗ್ರಾಮಗಳಲ್ಲಿ ಮಾತ್ರ ಬಲ್ಲಾಳ ಅರಸರ ಆಳ್ವಿಕೆ ನಡೆಯುತ್ತಿತ್ತು. ಆ ಸಂದರ್ಭ ಸುಬ್ರಹ್ಮಣ್ಯವೂ ಅವರ ಆಳ್ವಿಕೆಗೆ ಒಳಪಟ್ಟಿತ್ತು ಎನ್ನಲಾಗುತ್ತಿದೆ.

ಈ ದೇಗುಲದಲ್ಲಿ ಪ್ರತಿಷ್ಠಾಪಿತವಾಗಿರುವ ಬಲ್ಲಾಳ ಅರಸರ ಮೂರ್ತಿಯ ಹಿಂದೆ ದಂತಕಥೆಯೊಂದು ಇರುವುದನ್ನು ನಾವು ಕಾಣಬಹುದು. ಅದೇನೆಂದರೆ ವೇದವ್ಯಾಸ ಸಂಪುಟದ ವಿಗ್ರಹವನ್ನು ಯಾರಿಂದಲೂ ಭಗ್ನಗೊಳಿಸುವುದು ಅಸಾಧ್ಯ ನಂಬಿಕೆ ಹರಡಿತ್ತು. ಇದನ್ನು ಪರೀಕ್ಷಿಸಿ ನೋಡಿಯೇ ಬಿಡೋಣ ಎಂಬ ತೀರ್ಮಾನಕ್ಕೆ ಬಂದ ಅರಸ ಆನೆಯ ಮೂಲಕ ಮುರಿಯಲು ಮುಂದಾದನು. ಈ ಸಂದರ್ಭ ಅರಸನಿಗೆ ಇದ್ದಕ್ಕಿಂದತೆಯೇ ಮೈಮೇಲೆ ಉರಿಬಾಧೆ ಕಾಣಿಸಿಕೊಂಡಿತು. ತಕ್ಷಣ ಅವನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿದನೆಂದೂ ಈ ಸಂದರ್ಭ ಸುಬ್ರಹ್ಮಣ್ಯ ಸ್ವಾಮಿ ಅರಸನ ಪ್ರತಿಮೆಯನ್ನು ದೇವಾಲಯದ ಮುಖ್ಯದ್ವಾರದಲ್ಲಿಡಲು ಆದೇಶಿಸಿದನೆಂದೂ ಅದರಂತೆ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗಿದೆ. ಇಂದಿಗೂ ಕೂಡ ಚಂಪಾಷಷ್ಠಿಯ ದಿನದಂದು ಸುಬ್ರಹ್ಮಣ್ಯಸ್ವಾಮಿಯ ಉತ್ಸವ ಮೂರ್ತಿಯನ್ನು ಹೊರಗೆ ಮೆರವಣಿಗೆಯಲ್ಲಿ ತಂದಾಗ ಮೊದಲು ಬಲ್ಲಾಳರಸರ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಮುಂದಿನ ಕೈಂಕರ್ಯಗಳು ನಡೆಯುತ್ತದೆ.

WD
ಕುಮಾರಸ್ವಾಮಿಯು ದೇವಸೇನೆಯೊಂದಿಗೆ ಮತ್ತು ಭಕ್ತ ವಾಸುಕಿಯೊಂದಿಗೆ ಇಲ್ಲಿ ನೆಲೆಸಿದ್ದರಿಂದ ಪುತ್ರನ ಮೇಲಿನ ವಾತ್ಸಲ್ಯದಿಂದ ಶಿವಪಾರ್ವತಿಯರು ಕುಕ್ಕೆಲಿಂಗ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಕುಮಾರಸ್ವಾಮಿಯು ನಾಲ್ಕು ಪುರುಷಾರ್ಥಗಳನ್ನು ಅನುಗ್ರಹಿಸಬಲ್ಲ ದೇವತೆಯಾಗಿದ್ದು, ಬ್ರಹ್ಮಜ್ಞಾನ, ಆಯಸ್ಸು, ಆರೋಗ್ಯ, ಉಪಸ್ಮಾರ, ಕುಷ್ಠಾದಿ ಮಹಾ ರೋಗಗಳ ಪರಿಹಾರ, ಭೂತ ಪೀಡೆ ಪರಿಹಾರ, ಸಂತಾನ ಸೌಭಾಗ್ಯ, ಪುಷ್ಠಿ, ತುಷ್ಠಿ, ಕೀರ್ತಿ, ಶತ್ರುಜಯವನ್ನು ವಿಶೇಷವಾಗಿ ಕರುಣಿಸುತ್ತಿದ್ದಾನೆ. ಸುಬ್ರಹ್ಮಣ್ಯನಿಗೆ ಸ್ಕಂದ, ಕಾರ್ತಿಕೇಯ, ಷಣ್ಮುಖ, ಕುಮಾರಸ್ವಾಮಿ ಎಂಬ ನಾಮಗಳಿವೆ.

ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನನ್ನು ನಾಗ(ಸರ್ಪ) ರೂಪದಲ್ಲಿ ಪೂಜಿಸಲಾಗುತ್ತಿದೆ. ಸರ್ಪದೋಷದಿಂದ ಬಳಲುವವರು ಇಲ್ಲಿ ಎರಡು ದಿನಗಳ ಕಾಲ ತಂಗಿ ಸೇವೆ ಕೈಗೊಂಡರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ನಾಗಪೂಜೆಯ ನಾಡಾಗಿ ಪ್ರಸಿದ್ದಿ ಹೊಂದಿದೆ.

ಇಲ್ಲಿನ ನಾಗಮಂಟಪದಲ್ಲಿ ಶಿಲಾ ನಾಗನ ಪ್ರತಿಷ್ಠೆ, ಆಶ್ಲೇಷ ಬಲಿ ಹೀಗೆ ವಿವಿಧ ಸೇವೆಗಳು ಕೂಡ ನಡೆಯುತ್ತವೆ. ಷಷ್ಠಿ ದಿನದಂದು ಬ್ರಹ್ಮರಥ, ಪಂಚಮಿ ತೇರು, ಚಂದ್ರಮಂಡಲ, ಹೂವಿನ ತೇರುಗಳನ್ನು ಎಳೆಯಲಾಗುತ್ತದೆ. ಇಲ್ಲಿರುವ ಬ್ರಹತ್ ಆಕಾರದ ರಥ ಸುಮಾರು ಒಂದೂವರೆ ಶತಮಾನಗಳ ಹಿಂದಿನದು ಎಂದು ಹೇಳಲಾಗಿದೆ.

WD
ಕುಮಾರಸ್ವಾಮಿಯು ದೇವಸೇನೆಯೊಂದಿಗೆ ಮತ್ತು ಭಕ್ತ ವಾಸುಕಿಯೊಂದಿಗೆ ಇಲ್ಲಿ ನೆಲೆಸಿದ್ದರಿಂದ ಪುತ್ರನ ಮೇಲಿನ ವಾತ್ಸಲ್ಯದಿಂದ ಶಿವಪಾರ್ವತಿಯರು ಕುಕ್ಕೆಲಿಂಗ ರೂಪದಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಕುಮಾರಸ್ವಾಮಿಯು ನಾಲ್ಕು ಪುರುಷಾರ್ಥಗಳನ್ನು ಅನುಗ್ರಹಿಸಬಲ್ಲ ದೇವತೆಯಾಗಿದ್ದು, ಬ್ರಹ್ಮಜ್ಞಾನ, ಆಯಸ್ಸು, ಆರೋಗ್ಯ, ಉಪಸ್ಮಾರ, ಕುಷ್ಠಾದಿ ಮಹಾ ರೋಗಗಳ ಪರಿಹಾರ, ಭೂತ ಪೀಡೆ ಪರಿಹಾರ, ಸಂತಾನ ಸೌಭಾಗ್ಯ, ಪುಷ್ಠಿ, ತುಷ್ಠಿ, ಕೀರ್ತಿ, ಶತ್ರುಜಯವನ್ನು ವಿಶೇಷವಾಗಿ ಕರುಣಿಸುತ್ತಿದ್ದಾನೆ. ಸುಬ್ರಹ್ಮಣ್ಯನಿಗೆ ಸ್ಕಂದ, ಕಾರ್ತಿಕೇಯ, ಷಣ್ಮುಖ, ಕುಮಾರಸ್ವಾಮಿ ಎಂಬ ನಾಮಗಳಿವೆ.

ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯನನ್ನು ನಾಗ(ಸರ್ಪ) ರೂಪದಲ್ಲಿ ಪೂಜಿಸಲಾಗುತ್ತಿದೆ. ಸರ್ಪದೋಷದಿಂದ ಬಳಲುವವರು ಇಲ್ಲಿ ಎರಡು ದಿನಗಳ ಕಾಲ ತಂಗಿ ಸೇವೆ ಕೈಗೊಂಡರೆ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ ನಾಗಪೂಜೆಯ ನಾಡಾಗಿ ಪ್ರಸಿದ್ದಿ ಹೊಂದಿದೆ.

ಇಲ್ಲಿನ ನಾಗಮಂಟಪದಲ್ಲಿ ಶಿಲಾ ನಾಗನ ಪ್ರತಿಷ್ಠೆ, ಆಶ್ಲೇಷ ಬಲಿ ಹೀಗೆ ವಿವಿಧ ಸೇವೆಗಳು ಕೂಡ ನಡೆಯುತ್ತವೆ. ಷಷ್ಠಿ ದಿನದಂದು ಬ್ರಹ್ಮರಥ, ಪಂಚಮಿ ತೇರು, ಚಂದ್ರಮಂಡಲ, ಹೂವಿನ ತೇರುಗಳನ್ನು ಎಳೆಯಲಾಗುತ್ತದೆ. ಇಲ್ಲಿರುವ ಬ್ರಹತ್ ಆಕಾರದ ರಥ ಸುಮಾರು ಒಂದೂವರೆ ಶತಮಾನಗಳ ಹಿಂದಿನದು ಎಂದು ಹೇಳಲಾಗಿದೆ.

WD
ಸುಬ್ರಹ್ಮಣ್ಯ ದೇವಾಲಯದಿಂದ ಕೆಲವೇ ದೂರದಲ್ಲಿ ಕಾಶಿಕಟ್ಟೆಯಿದ್ದು, ಇಲ್ಲಿ ಆಂಜನೇಯ ಹಾಗೂ ಗಣಪತಿ ದೇವರುಗಳ ದೇವಾಲಯ ಹಾಗೂ ಬೃಹತ್ ಅಶ್ವತ್ಥ ಕಟ್ಟೆಯನ್ನೂ ಕಾಣಬಹುದು. ತೇರು ಬೀದಿಯ ಉತ್ತರಕ್ಕೆ ದ್ವೈತ ಸಂಪ್ರದಾಯದ ಉತ್ತರಾದಿಮಠವಿದ್ದು, ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ದೇವಾಲಯದಿಂದ ಕುಮಾರಧಾರಾ ನದಿಯತ್ತ ಸಾಗುವಾಗ ದಾರಿ ಮಧ್ಯೆ ಕಂಡು ಬರುವ ಬಿಲದ್ವಾರ ಪವಿತ್ರಕ್ಷೇತ್ರವಾಗಿದ್ದು, ಇದೊಂದು ಗುಹೆಯಾಗಿದ್ದು, ಇದಕ್ಕೆ ಎರಡು ದಾರಿಗಳಿವೆ. ಒಂದು ದಕ್ಷಿಣಕ್ಕೆ, ಮತ್ತೊಂದು ಉತ್ತರಕ್ಕೆ ಸಾಗುತ್ತದೆ. ಕಾರ್ತಿಕದಿಂದ ಜೇಷ್ಠಮಾಸದವರೆಗೆ ಯಾತ್ರಿಕರು ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಪುರಾಣದ ಪ್ರಕಾರ ಗರುಡ ನೀಡುತ್ತಿದ್ದ ತೊಂದರೆಯಿಂದ ತಪ್ಪಿಸಿಕೊಳ್ಳಲು ವಾಸುಕಿ ಈ ಗುಹೆಯಲ್ಲಿ ಆಶ್ರಯ ಪಡೆದಿದ್ದನೆಂದು ಹೇಳಲಾಗಿದೆ.

WD
ಸುಬ್ರಹ್ಮಣ್ಯ ಕೇತ್ರದಲ್ಲಿ ಹರಿಯುವ ಕುಮಾರಧಾರಾ ನದಿ ಪವಿತ್ರವಾಗಿದ್ದು, ಇದು ಭೂಮಿಯ ಒಡಲಾಳದಿಂದ ಉಕ್ಕಿಹರಿದ ಎಲ್ಲಾ ತೀರ್ಥಗಳ ಸಾರವನ್ನು ಹೊಂದಿದೆ ಎಂದು ನಂಬಲಾಗಿದೆ. ಇದನ್ನು ಹಿಂದೆ ಮಹೀನದಿ ಎಂದು ಕರೆಯಲಾಗುತ್ತಿತ್ತಂತೆ ಕಾಲಾಂತರದಲ್ಲಿ ಈ ನದಿಯ ನೀರನ್ನು ಕುಮಾರಸ್ವಾಮಿ(ಸುಬ್ರಹ್ಮಣ್ಯ)ಯ ಪೂಜೆಯ ಅಭಿಷೇಕಕ್ಕೆ ಉಪಯೋಗಿಸಲು ಆರಂಭಿಸಿದ ಬಳಿಕ ಕುಮಾರಧಾರಾ ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ. ಈ ನದಿಯಲ್ಲಿ ಸ್ನಾನ ಮಾಡಿದರೆ ಚರ್ಮರೋಗಗಳು ವಾಸಿಯಾಗುವುದಾಗಿ ನಂಬಿಕೆಯಿದೆ. ಇಲ್ಲಿರುವ ಮತ್ಸ್ಯತೀರ್ಥದಲ್ಲಿ ಬೃಹತಾಕಾರದ ಮೀನುಗಳು ಕಂಡು ಬರುತ್ತವೆ. ಇಲ್ಲಿ ಭಕ್ತಾಧಿಗಳು ಸ್ನಾನ ಮಾಡಿ ದೇವಾಲಯಕ್ಕೆ ತೆರಳುತ್ತಾರೆ. ಇಲ್ಲಿಯೇ ‘ಬೀದಿಮಡೆ ಸ್ನಾನ’ ಸೇವೆ ಕೂಡ ನಡೆಯುತ್ತದೆ. ಇಲ್ಲಿಗೆ ಸಮೀಪವಿರುವ ಕುಳಕುಂದದಲ್ಲಿ ವರ್ಷಕ್ಕೊಮ್ಮೆ ಜಾನುವಾರುಗಳ ಜಾತ್ರೆ ನಡೆಯುತ್ತದೆ. ಇದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಅತ್ಯಂತ ದೊಡ್ಡ ಜಾನುವಾರು ಜಾತ್ರೆಯಾಗಿದೆ.

WD
ಇನ್ನು ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವವರು ಚಾರಣ ಮಾಡಲು ಬಯಸಿದರೆ ಸುಮಾರು ಹನ್ನೆರಡು ಮೈಲಿ ದೂರದಲ್ಲಿರುವ, ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿರುವ ಕುಮಾರಪರ್ವತವನ್ನು ಏರಬಹುದಾಗಿದೆ. ಅಲ್ಲದೆ ನಿಸರ್ಗ ರಮಣೀಯ ವೀಕ್ಷಣಾ ತಾಣವಾದ ಬಿಸಿಲೆಘಾಟ್ಗೂ ತೆರಳಬಹುದಾಗಿದೆ.

ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಎಲ್ಲಾ ಕಡೆಗಳಿಂದಲೂ ಬಸ್ ಸಂಪರ್ಕವಲ್ಲದೆ, ರೈಲು ಸಂಪರ್ಕವೂ ಇರುವುದರಿಂದ ಭಕ್ತರಿಗೆ ಅನುಕೂಲವಾಗಿದೆ.

ವೆಬ್ದುನಿಯಾವನ್ನು ಓದಿ