ಪವಾಗಢದ ಶಕ್ತಿಪೀಠ

WD
ಗುಜರಾತ್‌ನ ವಡೋದರಾ ನಗರದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಚಂಪಾನೇರ್ ಎಂಬ ಪ್ರದೇಶದಲ್ಲಿ ಈ ಪವಾಗಢ ಶಕ್ತಿ ಪೀಠವಿದ್ದು, ಚಂಪಾನೇರ್ ಗುಜರಾತಿನ ಪ್ರಾಚೀನ ರಾಜಧಾನಿಯಾಗಿತ್ತು.

ಅರಸೂರಿನ ಅಂಬಾಜಿ, ಚುನ್ವಾಲ್‌ನ ಬಾಲಾ ಮಂದಿರ ಮತ್ತು ಪವಾಗಢದ ಕಾಳಿಕಾ ಮಂದಿರ ಗುಜರಾತ್ ರಾಜ್ಯದಲ್ಲಿ ಮೂರು ಪ್ರಮುಖ ಶಕ್ತಿಪೀಠ ಕೇಂದ್ರಗಳಾಗಿದ್ದು, ಇದೇ ರಾಜ್ಯದಲ್ಲಿ ಇನ್ನೂ ಹಲವು ಶಕ್ತಿಪೀಠಗಳಿವೆ. ಅವುಗಳಲ್ಲಿ ಮೌಂಟ್ ಅಬುವಿನ ಅರ್ಬುದಾದೇವಿ, ಹಳ್ವಾಡಿನ ಸುಂದರಿ ಮತ್ತು ಕೊಯ್ಲಾದ ಹರಸಿದ್ಧಿ ಅಲ್ಲದೆ ನರ್ಮದಾದಲ್ಲಿನ ಅನಸೂಯಾ ಪೀಠಗಳು ಪ್ರಖ್ಯಾತಿ ಪಡೆದಿವೆ.

WD
ದಕ್ಷ ಸಂಹಾರದ ಸಂದರ್ಭದಲ್ಲಿ ಶಿವನ ರುದ್ರ ತಾಂಡವ ಪ್ರಾರಂಭವಾಯಿತು. ಈ ಸಮಯದಲ್ಲಿ ಅಗ್ನಿಗೆ ತನ್ನನ್ನು ಅರ್ಪಿಸಿಕೊಂಡ ಗಿರಿಜೆಯ ದೇಹದ ಭಾಗಗಳು ದೇಶದ ಎಲ್ಲೆಡೆ ಚದುರಿ ಬಿದ್ದವು. ಹಾಗೆ ಬಿದ್ದ ಅವಯವಗಳ ಸ್ಥಳ ಶಕ್ತಿ ಪೀಠವಾಗಿ ರೂಪುಗೊಂಡವು ಎಂಬ ಪ್ರತೀತಿ ಇದ್ದು. ಗಿರಿಜೆಯ ಎಡ ಸ್ತನ ಚಂಪಾನೇರದಲ್ಲಿ ಬಿದ್ದಿತು ಎಂದು ಇಲ್ಲಿನ ನಾಗರಿಕರು ನಂಬಿದ್ದಾರೆ.

WD
ತನ್ನ ತಪಸ್ಸಿನ ಬಲದಿಂದ ರಾಜರ್ಷಿಯಿಂದ ಬ್ರಹ್ಮರ್ಷಿಯ ಸ್ಥಾನಕ್ಕೆ ಏರಿದ ವಿಶ್ವಾಮಿತ್ರನು ಇಲ್ಲಿ ಕಾಳಿಕಾದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದೂ, ಮತ್ತು ವಿಶ್ವಾಮಿತ್ರರ ತಪೋ ಶಕ್ತಿ ಇಲ್ಲಿ ನೆಲೆಯೂರಿತ್ತು ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿಯೇ ವಿಶ್ವಾಮಿತ್ರಿ ನದಿಯ ಮೂಲ ಇದೆ. ಅರಾವಳಿ ಬೆಟ್ಟದ ಸಾಲಿನಡಿ ಬರುವ ಈ ಮಂದಿರ ಸುತ್ತ ಹಸಿರು ವನಸಿರಿ ನೋಡುಗರ ಮನವನ್ನು ಉಲ್ಲಸಿತಗೊಳಿಸುತ್ತದೆ.

ಇಲ್ಲಿನ ಕಾಳಿಮಾತೆಯನ್ನು ದಕ್ಷಿಣ ಕಾಳಿ ಎಂದು ಪೂಜಿಸಲಾಗುತ್ತದೆ. ಅಲ್ಲದೇ ಇಲ್ಲಿಯ ಕಾಳಿಯನ್ನು ದಕ್ಷಿಣ ದಿಕ್ಕಿನಿಂದ ವೇದ ಮಂತ್ರ, ಘೋಷಗಳಿಂದ ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಆ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

WD
ಕ್ರಿ.ಶ. ಎರಡನೆ ಶತಮಾನದಲ್ಲಿ ನಿರ್ಮಾಣವಾದ ಇಲ್ಲಿನ ಕೋಟೆ, ಅನೇಕ ಯುದ್ಧದ ಗುರುತುಗಳನ್ನು ಇಟ್ಟುಕೊಂಡು ಇತಿಹಾಸದ ಸಾಕ್ಷಿಯಾಗಿ ನಿಂತಿದೆ. ಮೊದಲು ರಜಪೂತರ ವಶದಲ್ಲಿದ್ದ ಇಲ್ಲಿನ ಚಂಪಾನೇರ್ ಕೋಟೆಯು 15ನೇ ಶತಮಾನದ ಅವಧಿಯಲ್ಲಿ ಗುಜರಾತ್ ಸುಲ್ತಾನರ ಆಡಳಿತಕ್ಕೆ ಒಳಪಟ್ಟಿತು. ನಂತರ ಸುಲ್ತಾನ ಬಹಾದ್ದೂರ್ ಶಾನ ಕೈಗೆ ಕೋಟೆಯು ಸ್ವಾಧೀನಕ್ಕೆ ಬಂದಿತು. ಕೊನೆಗೆ ಮೊಘಲ್ ಚಕ್ರವರ್ತಿ ಅಕ್ಬರ್‌ನ ಆಡಳಿತಕ್ಕೆ ಸಿಲುಕಿತು. ಮೊಘಲ್ ಸಾಮ್ರಾಜ್ಯದ ಪತನದ ನಂತರ ಮರಾಠರ ಕೈಯಲ್ಲಿ, ನಂತರ ಅಂತಿಮವಾಗಿ ಭಾರತ ಸ್ವಾತಂತ್ರ್ಯಗೊಳ್ಳುವವರೆಗೆ ಬ್ರಿಟಿಷರ ಆಡಳಿತಕ್ಕೆ ಚಂಪಾನೇರ್ ಕೋಟೆ ಒಳಪಟ್ಟಿತ್ತು ಎಂದು ಇತಿಹಾಸ ದಾಖಲೆಗಳು ಹೇಳುತ್ತವೆ.

ಬೆಟ್ಟದ ತುದಿಯಲ್ಲಿ ಮಹಾಕಾಳಿಯ ದೇವಸ್ಥಾನವಿದ್ದು. ಮಂದಿರಕ್ಕೆ ತೆರಳಲು ರೋಪ್ ವೇ ಸೌಲಭ್ಯ ಕೂಡ ಮಾಡಲಾಗಿದೆ. ಹತ್ತಿರದ ಮಾಚಿಯಿಂದ ಮಂದಿರಕ್ಕೆ ಕಾಲ್ನಡಿಗೆಯ ಮೂಲಕ ಕೂಡ ಹೋಗಬಹುದು. ಇದೇ ಬೆಟ್ಟದ ಮೇಲೆ ಪೀರ್ ಅದಾನ್ ಶಾ ದರ್ಗಾ ಇದ್ದು, ಇಲ್ಲಿಗೆ ಮುಸ್ಲಿಂ ಧರ್ಮಾನುಯಾಯಿಗಳು ಭೇಟಿ ನೀಡುತ್ತಾರೆ.
ಸಾರಿಗೆ ಸೌಲಭ್ಯ

ವಿಮಾನ:
ಅಹ್ಮದಾಬಾದ್ ಮತ್ತು ವಡೋದರಾ ಹತ್ತಿರದ ವಿಮಾನ ನಿಲ್ದಾಣಗಳಾಗಿದ್ದು. ಪವಾಗಢದಿಂದ ಕ್ರಮವಾಗಿ 190 ಮತ್ತು 50 ಕಿ.ಮೀ. ದೂರದ ಅಂತರದಲ್ಲಿವೆ.

ರೈಲು ಸಂಪರ್ಕ: ವಡೋದರಾಕ್ಕೆ ದೇಶದ ಎಲ್ಲ ಭಾಗಗಳಿಂದ ರೈಲು ಸೇವೆ ಇದ್ದು, ಇಲ್ಲಿಂದ ಪವಾಗಢಕ್ಕೆ ಬಸ್ ಮೂಲಕ ಪ್ರಯಾಣಿಸಬಹುದು.

ಬಸ್ ಸೌಲಭ್ಯ: ಗುಜರಾತ್‌ನ ಪ್ರಮುಖ ನಗರಗಳಿಂದ ಖಾಸಗಿ ಮತ್ತು ಸರಕಾರಿ ಬಸ್ ಸೌಲಭ್ಯ ಪವಾಗಢವರೆಗೆ ಇದೆ.