ಪ್ರತಿಕಾಶಿಯ ಕೇದಾರೇಶ್ವರ ಕ್ಷೇತ್ರ

ಶನಿವಾರ, 3 ಜನವರಿ 2009 (20:43 IST)
ವಿಕಾಸ್ ಶ್ರೀಪುರ್‌ಕರ್

ಹಿಂದೂ ಧರ್ಮೀಯರಲ್ಲಿ ಪ್ರತಿಯೊಬ್ಬರಿಗೂ ಜೀವನದಲ್ಲೊಂದು ಬಾರಿ ಕಾಶಿ ಸಂದರ್ಶಿಸಬೇಕೆಂಬ ಅದಮ್ಯ ಆಕಾಂಕ್ಷೆ ಇರುತ್ತದೆ. ಅಲ್ಲಿಗೆ ಹೋಗುವುದು ಅಸಾಧ್ಯವೇ ಆದರೆ, ಕನಿಷ್ಠ ತನ್ನ ಅಸ್ಥಿಯನ್ನಾದರೂ ಕಾಶಿಯಲ್ಲಿ ಗಂಗೆಯಲ್ಲಿ ವಿಸರ್ಜಿಸಬೇಕು ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಆದರೆ, ಕಾಶಿಯಷ್ಟೇ ಪ್ರಾಮುಖ್ಯತೆ ಪಡೆದಿರುವ ಮತ್ತೊಂದು ಶ್ರದ್ಧಾ ಕೇಂದ್ರವಿದೆ. ಈ ಬಾರಿಯ ‘ಧಾರ್ಮಿಕ ಯಾತ್ರೆ’ಯಲ್ಲಿ ನಾವು ನಿಮ್ಮನ್ನು ಕರೆದೊಯ್ಯುತ್ತಿರುವುದು ಈ ಪ್ರತಿ-ಕಾಶಿ ಕ್ಷೇತ್ರಕ್ಕೆ. ಪ್ರತಿಕಾಶಿ ಕೇದಾರೇಶ್ವರ ಕ್ಷೇತ್ರ ಸಂದರ್ಶಿಸಿದರೆ, ಕಾಶಿಯನ್ನು ನೂರು ಬಾರಿ ಸಂದರ್ಶಿಸಿದಷ್ಟೇ ಪುಣ್ಯ ಬರುತ್ತದೆ ಎಂಬುದು ಜನರ ನಂಬಿಕೆ.

ಪ್ರತಿಕಾಶಿ ಇರುವುದು ಮಹಾರಾಷ್ಟ್ರದ ಗುಜರಾತ್-ಮಧ್ಯಪ್ರದೇಶ ಗಡಿಭಾಗದಲ್ಲಿರುವ ನಂದರ್ಬಾರ್ ಜಿಲ್ಲೆಯಲ್ಲಿ. ಈ ಕ್ಷೇತ್ರವಿರುವುದು ತಪತಿ, ಪುಳಂದಾ ಮತ್ತು ಗೋಮಯಿ ನದಿಗಳ ಸಂಗಮ ಸ್ಥಾನದಲ್ಲಿ. ಈ ಸಂಗಮ ಕ್ಷೇತ್ರದಲ್ಲಿ 108 ದೇವಾಲಯಗಳಿವೆ. ಇದೇ ಕಾರಣಕ್ಕೆ ಇದು ಪ್ರತಿಕಾಶಿ ಎಂದು ಕರೆಯಲ್ಪಡುತ್ತದೆ.
WD
ವಿಶ್ವದ ಯಾವುದೇ ಮೂಲೆಯಿಂದ ಭಕ್ತರು ಇಲ್ಲಿಗಾಗಮಿಸುತ್ತಾರೆ ಮತ್ತು ದಿನಂಪ್ರತಿ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಪುರಾಣದ ಪ್ರಕಾರ, ಹಿಂದೆ ದಿನಗಳು ಮತ್ತು ರಾತ್ರಿಗಳು ತಲಾ ಆರು ತಿಂಗಳಿನವಾಗಿದ್ದವು. ಆ ಕಾಲದಲ್ಲಿ ಭಗವಾನ್ ಈಶ್ವರನು ಭಕ್ತನೊಬ್ಬನ ಕನಸಿನಲ್ಲಿ ಕಾಣಿಸಿಕೊಂಡು, ಒಂದು ರಾತ್ರಿಯೊಳಗೆ ಎಲ್ಲಿ 108 ದೇವಾಲಯಗಳನ್ನು ಕಟ್ಟಿಸಲಾಗುತ್ತದೆಯೋ ಅಲ್ಲಿ ತಾನು ಶಾಶ್ವತವಾಗಿ ನೆಲಸುವುದಾಗಿ ಹೇಳಿದ. ಈ ಕಾರಣಕ್ಕೆ, 108 ದೇವಾಲಯಗಳನ್ನು ಕಟ್ಟಿಸಲು ಈ ಸಂಗಮ ಕ್ಷೇತ್ರವನ್ನು ಆರಿಸಲಾಯಿತು. ಶಿವ ಭಕ್ತರು ಒಂದು ರಾತ್ರಿಯಲ್ಲಿ 107 ದೇವಾಲಯಗಳನ್ನು ನಿರ್ಮಿಸಿದರು. ಆದರೆ 108ನೇ ದೇವಾಲಯವು ಕಟ್ಟಿಸಲಾರಂಭಿಸಿದಾಗ ಬೆಳಗಾಗಿತ್ತು. ಸೂರ್ಯ ಕಿರಣಗಳು ಬಿದ್ದಾಗ ಈ ಮಂದಿರ ನಿರ್ಮಾಣವಾಗುತ್ತಿತ್ತಾದ್ದರಿಂದ ಇಲ್ಲಿಗೆ ಪ್ರಕಾಶ ಎಂಬ ಹೆಸರೂ ಇದೆ. ಆದರೆ, ಆ ಬಳಿಕ ಕಾಶಿಯಲ್ಲಿ 108 ಮಂದಿರಗಳು ಒಂದೇ ರಾತ್ರಿಯಲ್ಲಿ ನಿರ್ಮಾಣವಾದ ಕಾರಣ, ಅಲ್ಲಿ ಕಾಶಿ ವಿಶ್ವೇಶ್ವರನಾಗಿ ಭಗವಾನ್ ಈಶ್ವರನು ನೆಲೆಯಾದ.

ಇಲ್ಲಿಯೂ ಕಾಶಿ ವಿಶ್ವನಾಥೇಶ್ವರ ಮತ್ತು ಕೇದಾರೇಶ್ವರ ಮಂದಿರಗಳು ಒಂದೇ ದೇವಾಲಯದ ಆವರಣದಲ್ಲಿವೆ. ಇಲ್ಲಿ ಪುಷ್ಪದಂತೇಶ್ವರ ಮಂದಿರವು ವಿಶೇಷ ಪ್ರಾಮುಖ್ಯತೆ ಪಡೆದಿದೆಯೇಕೆಂದರೆ, ಕಾಶಿಯಲ್ಲಿಯೂ ಇದನ್ನು ನಿರ್ಮಿಸಲಾಗಿಲ್ಲ. ಕಾಶಿ ಕ್ಷೇತ್ರ ಸಂದರ್ಶಿಸಿದ ಬಳಿಕ ಯಾರೇ ಆದರೂ ಇಲ್ಲಿ ಉತ್ತರ ಪೂಜೆ ನೆರವೇರಿಸದಿದ್ದರೆ, ಅವರ ಪುಣ್ಯ ಸಂಪಾದನೆಗೆ ಅರ್ಥವಿರುವುದಿಲ್ಲ ಎಂಬ ಭಾವನೆಯೂ ಆಸ್ತಿಕರಲ್ಲಿದೆ.
WD
ಕೇದಾರೇಶ್ವರ ಮಂದಿರದ ಎದುರು ಅಲ್ಲೊಂದು ಜ್ಯೋತಿಯಿದೆ. ಅಸ್ಥಿ ವಿಸರ್ಜನೆಗೆ ಮತ್ತು ಉತ್ತರ ಕ್ರಿಯಾದಿಗಳಿಗೆ ನದಿ ತಟದಲ್ಲಿ ಏರ್ಪಾಡು ಇದೆ.

ಇಲ್ಲಿಗೆ ಹೋಗುವುದು ಹೇಗೆ?

ರಸ್ತೆ ಮಾರ್ಗ: ಈ ಕ್ಷೇತ್ರವಿರುವುದು ನಂದರ್ಬಾರ್‌ನಿಂದ 40 ಕಿ.ಮೀ. ದೂರದಲ್ಲಿ. ನಾಸಿಕ್, ಮುಂಬಯಿ, ಪುಣೆ, ಸೂರತ್ ಮತ್ತು ಇಂದೋರ್‌ನಿಂದ ಬಸ್ ಸೌಕರ್ಯ ಇದೆ.
WD
ರೈಲು ಮಾರ್ಗ: ಸಮೀಪದ ರೈಲು ನಿಲ್ದಾಣವೆಂದರೆ ನಂದರ್ಬಾರ್. ಇದು ಸೂರತ್-ಭುಸಾವಲ್ ರೈಲು ಮಾರ್ಗದಲ್ಲಿದೆ.

ವಿಮಾನ ಮಾರ್ಗ: ನಂದರ್ಬಾರ್‌ಗೆ ಸಮೀಪ ಇರುವ ವಿಮಾನ ನಿಲ್ದಾಣವೆಂದರೆ 150 ಕಿ.ಮೀ. ದೂರದಲ್ಲಿರುವ ಸೂರತ್ ವಿಮಾನ ನಿಲ್ದಾಣ.