ಬನ್ನಿ, ಈ ಬಾರಿ ನೋಡೋಣ ಪ್ರಸಿದ್ಧ ಪುಣ್ಯಕ್ಷೇತ್ರ ಬಾವನ್ಗಜವನ್ನು. ಇಲ್ಲಿ ಇತ್ತೀಚೆಗಷ್ಟೇ ಈ ಶತಮಾನದ ಮೊದಲ ಮಹಾಮಸ್ತಕಾಭಿಷೇಕವನ್ನು ನೆರವೇರಿಸಲಾಗಿತ್ತು. ಬಾವನ್ಗಜವು ಅದೆಷ್ಟೇ ಧಾರ್ಮಿಕ ಗುರುಗಳಿಗೆ, ಸಂತರಿಗೆ ಪುಣ್ಯಭೂಮಿ. ಸಾತ್ಪುರ ಪರ್ವತ ಶ್ರೇಣಿಯ ಮಧ್ಯಭಾಗದಲ್ಲಿ, 4000 ಅಡಿ ಎತ್ತರದಲ್ಲಿ ಜೈನ ಧರ್ಮ ಸಂಸ್ಥಾಪಕನಾದ ಪ್ರಥಮ ತೀರ್ಥಂಕರ ವೃಷಭದೇವನ ಏಕಶಿಲಾ ವಿಗ್ರಹವಿದೆ.
ಇದರ ವಿಶೇಷತೆಯೆಂದರೆ ಈ ಏಕಶಿಲಾ ಮೂರ್ತಿಯ ಎತ್ತರ 84 ಅಡಿ. ಇದುವೇ ಬಾವನ್ಗಜ. ಇಲ್ಲಿನ ಮೂರ್ತಿಯು ವಿಶ್ವದ ಅತ್ಯಂತ ಎತ್ತರದ ಮೂರ್ತಿಗಳಲ್ಲೊಂದು ಮತ್ತು ಸಮೃದ್ಧ ಕಲಾ ಕೌಶಲದಿಂದ ರಾರಾಜಿಸುತ್ತಿದೆ. ಧ್ಯಾನಮಗ್ನ ಸ್ಥಿತಿಯಲ್ಲಿರುವ ಈ ವಿಗ್ರಹವು ನೂರಾರು ವರ್ಷಗಳಿಂದ ಆಸ್ತಿಕರಲ್ಲಿ ತನ್ಮಯತೆ, ಭಕ್ತಿ ಭಾವ ಸ್ಫುರಿಸುತ್ತಾ ಬಂದಿದೆ.
WD
ಇತಿಹಾಸ: ಬಾವನ್ಗಜ ವಿಗ್ರಹವನ್ನು ಯಾವಾಗ ಕೆತ್ತಲಾಗಿದೆ ಎಂಬುದರ ಬಗ್ಗೆ ನಿಖರ ಸಮಯದ ಮಾಹಿತಿ ಇಲ್ಲ. ಆದರೆ ಇದು 13ನೇ ಶತಮಾನಕ್ಕಿಂತಲೂ ಮೊದಲಿನದು ಎಂಬುದು ಖಚಿತ. ಮಂದಿರದಲ್ಲಿ ದೊರೆತ ಶಾಸನವೊಂದರ ಪ್ರಕಾರ, ವಿಕ್ರಮ ಶಕೆ 1516ರಲ್ಲಿ ಭಟ್ಟಾರಕ ರತ್ನಕೀರ್ತಿ ಎಂಬವರಿಂದ ಈ ಮಂದಿರವನ್ನು ಪುನರುಜ್ಜೀವನಗೊಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅವರು ಈ ಪರಿಸರದಲ್ಲಿ 10 ಜಿನಾಲಯಗಳನ್ನು ಕೂಡ ಕಟ್ಟಿಸಿದ್ದರು.
ಮುಸಲ್ಮಾನ ರಾಜರ ಆಡಳಿತಾವಧಿಯಲ್ಲಿ ಈ ಮೂರ್ತಿಗೆ ಬಿಸಿಲು, ಮಳೆಯಿಂದ ಯಾವುದೇ ರಕ್ಷಣೆಯಿಲ್ಲದೆ ನಿರ್ಲಕ್ಷ್ಯಕ್ಕೀಡಾಗಿತ್ತು. ಈ ಕಾರಣಕ್ಕೆ ಭಾರಿ ಮಳೆ ಹಾಗೂ ಬಲವಾದ ಗಾಳಿಯಿಂದಾಗಿ ವಿಗ್ರಹಕ್ಕೆ ಹಾನಿಯಾಗಿತ್ತು. ಆ ಬಳಿಕ ದಿಗಂಬರ ಜೈನ ಸಮುದಾಯದವರು ಇದರ ಬಗ್ಗೆ ಕಾಳಜಿ ವಹಿಸಿ, ಅದನ್ನು ರಕ್ಷಣೆ ಮಾಡಲು ನಿರ್ಧರಿಸಿದರು. ಎಂಜಿನಿಯರ್ಗಳು ಮತ್ತು ಪ್ರಾಚ್ಯವಸ್ತುಶಾಸ್ತ್ರ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಂದಿರ ಪುನರುತ್ಥಾನಕ್ಕೆ ಯೋಜನೆ ರೂಪಿಸಲಾಯಿತು. ಅದರಂತೆಯೇ, 1979ರಲ್ಲಿ ಮಂದಿರ ಪುನರ್ನಿರ್ಮಾಣಗೊಂಡಿತು.
WD
ಮಳೆ ಮತ್ತು ಬಿಸಿಲಿನಿಂದ ರಕ್ಷಿಸುವುದಕ್ಕಾಗಿ ವಿಗ್ರಹದ ಮೇಲ್ಭಾಗದಲ್ಲಿ 40'x1.5' ಗಾತ್ರದ ತಾಮ್ರದ ತಗಡನ್ನು ರಚಿಸಲಾಯಿತು. ಅಭಿಷೇಕ ಮತ್ತು ಪೂಜೆ ನೆರವೇರಿಸಲು ಅನುಕೂಲವಾಗುವಂತೆ ಎರಡೂ ಪಾರ್ಶ್ವಗಳಲ್ಲಿ ಗ್ಯಾಲರಿಗಳನ್ನು ನಿರ್ಮಿಸಲಾಯಿತು. ವಿಗ್ರಹಕ್ಕೆ ಪಾಲಿಶ್ ಮಾಡಲಾಯಿತು. ಆ ಕಾಲದಲ್ಲಿ ಈ ಪುನರುಜ್ಜೀವನ ಕಾರ್ಯಕ್ಕೆ ತಗುಲಿದ್ದು ಸುಮಾರು 59 ಸಾವಿರ ರೂ.
ವಿಗ್ರಹದ ಗಾತ್ರ ಒಟ್ಟು ಎತ್ತರ: 84 ಅಡಿ ಎರಡು ಕೈಗಳ ನಡುವಿನ ವಿಸ್ತಾರ: 26 ಅಡಿ. ಕೈಯ ಉದ್ದ: 46'-6 " ಕಟಿ ಮತ್ತು ಹಿಮ್ಮಡಿ ನಡುವಿನ ಎತ್ತರ: 47' ತಲೆಯ ಸುತ್ತಳತೆ: 26' ಪಾದದ ಉದ್ದ: 13'-09 ” ಮೂಗಿನ ಉದ್ದ: 03'-03 ” ಕಣ್ಣಿನ ಉದ್ದ: 03'-03 ” ಕಿವಿಯ ಉದ್ದ: O9'-08 ” ಎರಡು ಕಿವಿಗಳ ನಡುವಿನ ಅಂತರ: 17'-06 ” ಪಾದದ ಅಗಲ: 05' 3”
ಈ ಪರ್ವತ ಭಾಗದಲ್ಲಿ ಚೂಳಗಿರಿ ಮಂದಿರವೂ ಇದ್ದು, ಇದನ್ನು ಸಿದ್ಧಭೂಮಿ ಎಂದೂ ಕರೆಯಲಾಗುತ್ತದೆ.
WD
ಮಹಾ ಮಸ್ತಕಾಭಿಷೇಕ: ಬಾವನ್ಗಜದ ಭಗವಾನ್ ಆದಿನಾಥನಿಗೆ 17 ವರ್ಷಗಳ ಬಳಿಕ ಮಹಾ ಮಸ್ತಕಾಭಿಷೇಕ ನೆರವೇರಿಸಲಾಗುತ್ತಿದೆ. 2008 ಜನವರಿ 20ರಿಂದ ಆರಂಭಗೊಂಡು ಫೆ.4ರವರೆಗೆ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಸಂದರ್ಭ ಲಕ್ಷಾಂತರ ಜೈನ ಧರ್ಮೀಯರು ಕ್ಷೇತ್ರಕ್ಕೆ ಭೇಟಿ ನೀಡಿ ಭಗವಾನ್ ಆದಿನಾಥನನ್ನು ಮನತುಂಬಿಸಿಕೊಂಡು ಪುನೀತರಾಗಿದ್ದಾರೆ.
ಕ್ಷೀರ, ಜಲ ಮತ್ತು ಕೇಸರಿ ಅಭಿಷೇಕ ನಡೆದ ಬಳಿಕ ದುಗ್ಧಾಭಿಷೇಕ ಸಂದರ್ಭದಲ್ಲಿ ಇಡೀ ವಾತಾವರಣವೇ ಭಕ್ತಿಯಿಂದ ತುಂಬಿ ಹೋಗಿದ್ದು, ಭಕ್ತಾದಿಗಳು ಭಕ್ತಿಯ ಹಾಡಿನೊಂದಿಗೆ ನರ್ತಿಸುತ್ತಿದ್ದುದು ಸಾಮಾನ್ಯವಾಗಿತ್ತು.
WD
ಇದೇ ವೇಳೆ ಕೇಸರಿ ಅಭಿಷೇಕವು ವಿಗ್ರಹದ ಬಣ್ಣವನ್ನೇ ಬದಲಾಯಿಸಿದಂತಿತ್ತು. ಅಲ್ಲಿ ಭಕ್ತಿ, ನಂಬಿಕೆ, ಶ್ರದ್ಧೆ ಮೇಳೈಸಿತ್ತು. ಬೆಟ್ಟ ಪ್ರದೇಶವಾದುದರಿಂದ ಬೆಟ್ಟ ಗುಡ್ಡಗಳಿಂದಲೇ ಬುಡಕಟ್ಟು ಜನರು ಈ ಭಕ್ತಿಯ ಪರಾಕಾಷ್ಠೆಯ ಕ್ಷಣಗಳನ್ನು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಕೃತಿ ಸೌಂದರ್ಯ: ಬಾವನ್ಗಜಕ್ಕೆ ತಲುಪುವ ಮಾರ್ಗವಂತೂ ಅತ್ಯಂತ ಸುಂದರ ಮತ್ತು ರಮಣೀಯ. ಸುಂದರ ಬೆಟ್ಟಗಳ ನಡುವಿನ ಅಂಕು ಡೊಂಕಿನ ಮಾರ್ಗವಂತೂ ಕಣ್ಣಿಗೆ ಆನಂದದಾಯಕ. ಮಳೆಗಾಲದಲ್ಲಿ ಈ ಪರ್ವತ ಪ್ರದೇಶವು ಹಚ್ಚ ಹಸುರಿನಿಂದ ಕಂಗೊಳಿಸುತ್ತಾ ನೋಡುಗರ ಕಣ್ಣಿಗೆ ಹಬ್ಬವಾಗುತ್ತದೆ.
ಹೇಗೆ ತಲುಪುವುದು:
ಮಧ್ಯಪ್ರದೇಶದ ಇಂದೋರ್ನಿಂದ (155 ಕಿ.ಮೀ.) ಹಾಗೂ ಖಾಂಡ್ವಾದಿಂದ (180 ಕಿ.ಮೀ.) ಬಸ್ ಮತ್ತು ಟ್ಯಾಕ್ಸಿ ಸೌಲಭ್ಯವಿದೆ.
ಸಮೀಪದ ವಿಮಾನ ನಿಲ್ದಾಣ: ದೇವಿ ಅಹಿಲ್ಯಾ ವಿಮಾನ ನಿಲ್ದಾಣ, ಇಂದೋರ್
ಸಮೀಪದ ರೈಲು ನಿಲ್ದಾಣ: ಇಂದೋರ್, ಖಾಂಡ್ವಾ.
ಉಳಿದುಕೊಳ್ಳುವುದೆಲ್ಲಿ: ಕಣಿವೆಯಲ್ಲೇ ಸುಮಾರು 50 ಕೊಠಡಿಗಳುಳ್ಳ 6 ಧರ್ಮಶಾಲೆಗಳಿವೆ. ಬಾವನ್ಗಜದಿಂದ 8 ಕಿ.ಮೀ. ದೂರದಲ್ಲಿರುವ ಬಾರ್ವಾನಿಯಲ್ಲಿ ಪ್ರತಿಯೊಬ್ಬರ ಬಜೆಟ್ಗೆ ಅನುಕೂಲವಾಗಿರುವ ವಸತಿ ಸೌಲಭ್ಯಗಳು ದೊರೆಯುತ್ತವೆ.