ಮಹಿಳೆಯರ ಶಬರಿಮಲೆ- ಅಟ್ಟುಕಲ್ ಭಗವತಿ ಮಂದಿರ

WD
ಕನ್ನಡಿಗರ ಕಣ್ಮಣಿಯಾದ ನಮ್ಮ ಪೋರ್ಟಲ್‌ನ ಧಾರ್ಮಿಕ ಯಾತ್ರೆಯ ಅಂಕಣದಲ್ಲಿ ನಿಮಗಿಂದು ಜಗತ್ತಿನಲ್ಲೇ ಪ್ರಖ್ಯಾತಿ ಪಡೆದ ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿರುವ ತಿರುವನಂತಪುರಂ ಜಿಲ್ಲೆಯ ಭಗವತಿ ಮಂದಿರಕ್ಕೆ ಕರೆದೊಯ್ಯುತ್ತಿದ್ದೇವೆ.

ಅಟ್ಟುಕಲ್ ಭಗವತಿ ಮಂದಿರ ಮಹಿಳೆಯರ ಶಬರಿಮಲೆ ಎಂದು ಖ್ಯಾತಿ ಪಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಭೇಟಿ ನೀಡುವ ಏಕೈಕ ಮಂದಿರವಾಗಿದ್ದು, ಇದೇ ಕಾರಣಕ್ಕೆ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲೂ ಈ ದೇವಸ್ಥಾನದ ಹೆಸರು ಸೇರ್ಪಡೆಯಾಗಿದೆ.

ತಿರುವನಂತಪುರಂನ ಎಂ.ಜಿ. ರಸ್ತೆಯಿಂದ ಕೇವಲ ಎರಡು ಕಿ.ಮೀ. ದೂರದಲ್ಲಿರುವ ಭಗವತಿ ಮಂದಿರ ತುಂಬಾ ಪುರಾತನವಾದದ್ದು. ಈ ಸ್ಥಳದಲ್ಲಿ ದೇವಿಗೆ ಕಿರೀಟವನ್ನು ತೊಡಿಸುವುದರಿಂದ ಮುಡಿಪ್ಪುರ ಎಂದು ಕರೆಯುತ್ತಾರೆ. ಇತ್ತೀಚೆಗೆ ಮಂದಿರವನ್ನು ನವೀಕರಿಸಲಾಗಿದ್ದು ಬೃಹತ್ ಮಂದಿರ ನಿರ್ಮಾಣ ಮಾಡಲಾಗಿದೆ. ಪೊಂಗಾಲ ಹಬ್ಬದಲ್ಲಿ ಅತಿ ಹೆಚ್ಚು ಮಹಿಳೆಯರು ಸೇರುವ ಜಗತ್ತಿನ ಏಕೈಕ ಸ್ಥಳವೆಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ.

WD
ಅಟ್ಟುಕಲ್ ಭಗವತಿ ಕನ್ನಿಕೆಯ ಅವತಾರವೆಂದು ಭಾವಿಸುತ್ತಾರೆ. ತಮಿಳಿನ ಪುರಾಣ ಪ್ರಸಿದ್ದ ಶಿಲಾಪಠಿಕರಮ್‌ನ ಪ್ರಮುಖ ನಾಯಕಿ ಎಂದು ಉಲ್ಲೇಖಿಸಲಾಗಿದೆ. ಮಧುರೈಯನ್ನು ಹಾಳುಗೆಡವಿದ ನಂತರ ಕನ್ನಿಕೆ ಕೇರಳವನ್ನು ಪ್ರವೇಶಿಸಿದಳು.ಮುಂದೆ ಸಾಗುವಾಗ ಅಟ್ಟುಕಲ್‌ನಲ್ಲಿ ಕೆಲಕಾಲ ವಿಶ್ರಾಂತಿ ಪಡೆದಿದ್ದಳು ಎಂದು ಪ್ರತೀತಿ ಇದೆ. ಪೊಂಗಾಲ ಹಬ್ಬವನ್ನು ನೇರವೇರಿಸುವುದರಿಂದ ಕನ್ನಿಕೆ ಪ್ರಸನ್ನಳಾಗಿ ಬೇಡಿದ ವರವನ್ನು ನೀಡುತ್ತಾಳೆ ಎನ್ನುವ ನಂಬಿಕೆ ಮಹಿಳಾ ಭಕ್ತರದ್ದು.

ಅಟ್ಟುಕಲ್ ಭಗವತಿ ಮಂದಿರದಲ್ಲಿ ಪ್ರತಿ ವರ್ಷ ಪೊಂಗಾಲ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 22ರಂದು ಬೃಹತ್ ವಿಜೃಂಭಣೆಯಿಂದ ಆಚರಿಸಲಾಯಿತು.

WD
ಅಟ್ಟುಕಲ್ ಪೊಂಗಾಲ ಹಬ್ಬ ಇತರ ಹಬ್ಬಗಳಿಗಿಂತ ಭಿನ್ನವಾಗಿರುತ್ತದೆ. ಪೊಂಗಾಲ ಹಬ್ಬವು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾದ ಹಬ್ಬ. ಮಹಿಳೆಯರು ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ಆಚರಿಸುವ ಜಗತ್ತಿನ ಏಕೈಕ ಹಬ್ಬವಾಗಿದೆ.

ಪೊಂಗಾಲ ಹಬ್ಬದಂದು ದೇವಿಗೆ ಭತ್ತ, ಕೊಬ್ಬರಿ, ಮತ್ತು ಬೆಲ್ಲದಿಂದ ಮಾಡಿದ ನೈವೇದ್ಯವನ್ನು ಸಿದ್ದಪಡಿಸಿ ಲಕ್ಷಾಂತರ ಮಹಿಳಾ ಭಕ್ತರು ಗಂಧದ ಕಡ್ಡಿಯನ್ನು ಹಚ್ಚುವುದರಿಂದ ಹೊರಡುವ ಪರಿಮಳ ಮಂದಿರದಾದ್ಯಂತ ಭಕ್ತಿಪರವಶತೆಯನ್ನು ತಂದುಕೊಡುತ್ತದೆ.

ಪೊಂಗಾಲ ಹಬ್ಬ ಹತ್ತು ದಿನಗಳ ಕಾಲ ನಿರಂತರ ನಡೆಯುವ ಹಬ್ಬವಾಗಿದ್ದು, ಒಂಬತ್ತನೇ ದಿನದಂದು ಅಟ್ಟುಕಲ್ ಪೊಂಗಾಲ ಮಹೋತ್ಸವ ಕಾರ್ಯಕ್ರಮ ನಡೆಯುತ್ತದೆ. ಮಂದಿರದಿಂದ ಐದು ಚದರ ಕಿ.ಮೀ.ವರೆಗೆ ಜಾತಿ ಮತ ಪಂಥವೆನ್ನದೇ ಎಲ್ಲಾ ಜನಾಂಗದ ಭಕ್ತರು ದೇವಿಯ ಮೆರವಣಿಗೆ ವೀಕ್ಷಣೆಯಲ್ಲಿ ಪಾಲ್ಗೊಳ್ಳುತ್ತಾರೆ. ವಾಣಿಜ್ಯ ಸಂಸ್ಥೆಗಳ, ಸರಕಾರಿ ಕಚೇರಿಗಳ ಉದ್ಯೋಗಿಗಳು ಸೇರಿದಂತೆ ಲಕ್ಷಾಂತರ ಸಂಖ್ಯೆಯಲ್ಲಿರುವ ಭಕ್ತಸಮೂಹ ನೋಡುಗರ ಮನಸೆಳೆಯುವಂತಿರುತ್ತದೆ.

WD
ಪೊಂಗಾಲ ಹಬ್ಬ ಕೇವಲ ಆಚರಣೆಗೆ ಸೀಮಿತವಾಗಿಲ್ಲ ಭಾವೈಕ್ಯದ ಸಂದೇಶವೂ ಹೌದು. ಪೊಂಗಾಲ ಹಬ್ಬದಂದು ಹಿಂದೂಗಳು ಮುಸ್ಲಿಮರು, ಕ್ರಿಶ್ಚಿಯನ್‌ ಸಮುದಾಯದವರಿಗೆ ಔತಣವನ್ನು ನೀಡುವುದಲ್ಲದೇ ಪೊಂಗಾಲ ಹಬ್ಬದಂದು ಎಲ್ಲರೂ ಸರಿಸಮಾನರು ಎನ್ನುವ ಸಂದೇಶವನ್ನು ಬಿತ್ತರಿಸುತ್ತಾರೆ.

ಪೊಂಗಾಲ ಹಬ್ಬದ ಹತ್ತನೇ ದಿನದಂದು ಅರ್ಚಕರು ಬೆಳಿಗ್ಗೆ 11 ಗಂಟೆಗೆ ದೀಪ ಬೆಳಗಿಸುತ್ತಾರೆ. ಸಾಯಂಕಾಲ 4 ಗಂಟೆಯವರೆಗೆ ಅರ್ಚಕರು ಮಂದಿರದಲ್ಲಿದ್ದು ಪವಿತ್ರ ತೀರ್ಥದೊಂದಿಗೆ ಹೊರಬರುತ್ತಾರೆ. ಇದು ಪೊಂಗಾಲ ಹಬ್ಬದ ಮುಕ್ತಾಯದ ಸೂಚನೆ. ಭಕ್ತರು ನೆಮ್ಮದಿ ಸಂತೋಷದಿಂದ ತಮ್ಮ ತಮ್ಮ ಮನೆಗೆ ಮರಳುತ್ತಾರೆ.


ತಲುಪುವುದು ಹೇಗೆ:

ಹತ್ತಿರದ ರೈಲ್ವೆ ನಿಲ್ದಾಣ -ತಿರುವನಂತಪುರಂ ಸೆಂಟ್ರಲ್‌ನಿಂದ ಕೇವಲ ಎರಡು ಕಿ.ಮೀ.

ಹತ್ತಿರದ ವಿಮಾನ ನಿಲ್ದಾಣ- ಮಂದಿರದಿಂದ ಕೇವಲ ಏಳು ಕಿ.ಮೀ. ದೂರದಲ್ಲಿರುವ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.