ಮುಂಬಯಿಯ ಮಹಾಲಕ್ಷ್ಮಿಯ ವೈಭವ

ಭೀಕಾ ಶರ್ಮಾ

ಭಾನುವಾರ, 29 ಜೂನ್ 2008 (14:49 IST)
WD
ಮುಂಬಯಿಯ ಮಹಾಲಕ್ಷ್ಮಿ ಮಂದಿರವು ಈ ಪಟ್ಟಣದ ಅತ್ಯಂತ ಹಳೆಯ ದೇವಸ್ಥಾನಗಳಲ್ಲೊಂದು. ಬ್ರೀಚ್ ಕ್ಯಾಂಡಿಯ ಬಿ.ದೇಸಾಯಿ ರೋಡ್‌ನಲ್ಲಿರುವ ಶ್ರೀ ಮಹಾಲಕ್ಷ್ಮಿ ಮಂದಿರ, ಅರಬ್ಬಿ ಸಮುದ್ರಾಭಿಮುಖವಾಗಿ ಕಂಗೊಳಿಸುತ್ತಿದ್ದು, ಲಕ್ಷಾಂತರ ಭಕ್ತರ ಭಕ್ತಿಯ ತಾಣವಾಗಿದೆ.

ಹಿಂದೂ ನಂಬಿಕೆಯ ಪ್ರಕಾರ ಮಹಾಲಕ್ಷ್ಮಿ ಸಂಪತ್ತಿನ ಅಧಿದೇವತೆ. ಅದಕ್ಕೆ ತಕ್ಕಂತೆ, ಈ ಮಂದಿರದ ಮುಖ್ಯ ದ್ವಾರವು ವೈಭವಯುತವಾಗಿ ಅಲಂಕೃತವಾಗಿದ್ದು, ಮಂದಿರ ಸಂಕೀರ್ಣದಲ್ಲಿ ಹೂವಿನ ಮಾಲೆ ಮತ್ತು ಇತರ ಪೂಜಾ ಪರಿಕರಗಳನ್ನು ಮಾರಾಟ ಮಾಡುವ ಸಾಕಷ್ಟು ಮಳಿಗೆಗಳಿವೆ. ಮೆಟ್ಟಿಲೇರಿದರೆ ಮಹಾಲಕ್ಷ್ಮಿಯ ಗುಡಿಗೆ ನೀವು ತಲುಪುತ್ತೀರಿ.

ದೇವ ದೇವತೆಗಳ ಅದ್ಭುತವಾದ ಮತ್ತು ಸಾಲಂಕೃತವಾದ ಪ್ರತಿಮೆಗಳೊಂದಿಗೆ ಮಹಾಲಕ್ಷ್ಮಿ ಮಂದಿರದಲ್ಲಿ ದೇವಿಯರ ಹಲವು ಮೂರ್ತಿಗಳೂ ಇವೆ. ಹಿಂದೂಗಳಲ್ಲಿ ಅದೃಷ್ಟ ದೇವಿಯೆಂದೇ ಪರಿಗಣಿಸಲ್ಪಟ್ಟಿರುವ ಶ್ರೀಮಂತಿಕೆಯ ಸಾಕಾರಮೂರ್ತಿ ಮಹಾಲಕ್ಷ್ಮಿಯ ಈ ಮಂದಿರಕ್ಕೆ ತನ್ನದೇ ಆದ ಕುತೂಹಲಕಾರಿ ಇತಿಹಾಸವಿದೆ.

ಈ ಮಂದಿರದಿಂದಾಗಿಯೇ ಮುಂಬಯಿಯ ಈ ಉಪನಗರ ಪ್ರದೇಶಕ್ಕೆ ಮಹಾಲಕ್ಷ್ಮಿ ಎಂದೇ ಹೆಸರು. ಇತಿಹಾಸದ ಪ್ರಕಾರ, ಬ್ರಿಟಿಷರು ಮಹಾಲಕ್ಷ್ಮಿ ಪ್ರದೇಶವನ್ನು ವರ್ಲಿ ಎಂಬಲ್ಲಿಗೆ ಜೋಡಿಸಲು ಬ್ರೀಚ್ ಕ್ಯಾಂಡಿ ರಸ್ತೆಗೆ ಯೋಜನೆ ರೂಪಿಸಿದ್ದರು. ಆದರೆ ಸಮುದ್ರದ ಭಾರಿ ಅಲೆಗಳಿಂದಾಗಿ ಅವರಿಗೆ ಈ ಯೋಜನೆಯಲ್ಲಿ ಯಶಸ್ಸು ದೊರಕಿರಲಿಲ್ಲ. ಆ ದಿನಗಳಲ್ಲಿ, ಯೋಜನೆಯ ಗುತ್ತಿಗೆದಾರ ರಾಮ್‌ಜಿ ಶಿವಜಿ ಎಂಬವರ ಕನಸಿನಲ್ಲಿ ಕಾಣಿಸಿಕೊಂಡ ಲಕ್ಷ್ಮೀ ದೇವಿಯು, ಸಮುದ್ರ ತಳದಲ್ಲಿ ಮೂರು ವಿಗ್ರಹಗಳಿದ್ದು, ಅವುಗಳನ್ನು ಅಲ್ಲಿಂದ ಮೇಲಕ್ಕೆತ್ತಿ ಗುಡಿ ಕಟ್ಟಿಸುವಂತೆ ಅಭಯ ನೀಡಿದಳು. ದೇವಿಯ ಇಚ್ಛಾನುಸಾರ ರಾಮ್‌ಜಿಯು ವಿಗ್ರಹಗಳನ್ನು ಶೋಧಿಸಿ, ಅವುಗಳಿಗೆ ಮಂದಿರ ಕಟ್ಟಿಸಿದ ನಂತರ ಯೋಜನೆಯು ಸುಲಭವಾಗಿ ಕೈಗೂಡಿತು.

ಈ ಮಂದಿರದಲ್ಲಿ ಮಹಾಲಕ್ಷ್ಮಿ, ಮಹಾಕಾಳಿ ಮತ್ತು ಮಹಾಸರಸ್ವತಿಯರ ವಿಗ್ರಹಗಳಿವೆ. ಎಲ್ಲ ಮೂರು ವಿಗ್ರಹಗಳಿಗೆ ಮೂಗುತಿ, ಚಿನ್ನದ ಕೈಬಳೆಗಳು ಮತ್ತು ಮುತ್ತಿನ ಹಾರಗಳಿವೆ. ಸಾಲಂಕೃತವಾದ ಈ ಮೂರು ಮೂರುತಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದ್ದು, ಭಕ್ತರಲ್ಲಿ ಅಧ್ಯಾತ್ಮ ಜಾಗೃತಿಯನ್ನು ಮೂಡಿಸುತ್ತದೆ. ತಮ್ಮ ನಿಜಭಕ್ತರ ಎಲ್ಲ ಬೇಡಿಕೆಗಳನ್ನು ಮಹಾಲಕ್ಷ್ಮಿ ಈಡೇರಿಸುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿ ಬಲವಾಗಿ ಬೇರೂರಿದೆ.

ದೇವಿಯ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಭಕ್ತರು ತಾಳ್ಮೆಯಿಂದ ಕಾಯುತ್ತಾರೆ. ತಮ್ಮ ತಮ್ಮ ಹರಕೆಗಳೊಂದಿಗೆ ಈ ಮಂದಿರ ಸಂದರ್ಶಿಸುವ ಭಕ್ತರು, ಇಷ್ಟಾರ್ಥ ಸಿದ್ಧಿಗಾಗಿ ಭಕ್ತಿಯಿಂದ ಪ್ರಾರ್ಥಿಸುತ್ತಾರೆ.

ಹೋಗುವುದು ಹೇಗೆ?:

ಮುಂಬಯಿಯು ನಮ್ಮ ದೇಶದ ವಾಣಿಜ್ಯ ರಾಜಧಾನಿ. ರಸ್ತೆ, ರೈಲು ಮತ್ತು ವಿಮಾನ ಮಾರ್ಗಗಳ ಮೂಲಕ ಭಾರತದ ಪ್ರಮುಖ ಪಟ್ಟಣಗಳೆಲ್ಲರಿಂದಲೂ ಸಂಪರ್ಕಗೊಂಡಿದೆ. ಮುಂಬಯಿಯ ಯಾವುದೇ ಸ್ಥಳದಿಂದ ಲೋಕಲ್ ಬಸ್, ಆಟೋ ರಿಕ್ಷಾ ಅಥವಾ ಲೋಕಲ್ ರೈಲನ್ನೇರಿ ಇಲ್ಲವೇ ಟ್ಯಾಕ್ಸಿಗಳನ್ನೇರಿ ಮಹಾಲಕ್ಷ್ಮಿ ತಲುಪಬಹುದು.

ವೆಬ್ದುನಿಯಾವನ್ನು ಓದಿ