ಸರ್ವರೋಗ ಪರಿಹಾರಕ: ವೈದ್ಯನಾಥ ಸ್ವಾಮಿ

ಭಾನುವಾರ, 15 ಜೂನ್ 2008 (17:46 IST)
ಅಯ್ಯನಾಥನ್
WD
ದೇಶದ ಪ್ರಸಿದ್ಧ ಶಿವ ಮಂದಿರಗಳಲ್ಲಿ ಚೆನ್ನೈ-ತಂಜಾವೂರು ಮಾರ್ಗದಲ್ಲಿರುವ ವೈದ್ಯೇಶ್ವರ ದೇವಾಲಯಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಇಲ್ಲಿನ ಅಧಿದೇವತೆ ವೈದ್ಯನಾಥ. ನಂಬಿಕೆಯ ಪ್ರಕಾರ ಇಲ್ಲಿನ ಈ ದೇವರು 4,480 ಸಂಖ್ಯೆಯ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದ್ದಾನೆ.

ಈ ದೇವಸ್ಥಾನ ವಿಶೇಷವಾದುದು. ಪೌರಾಣಿಕ ಹಿನ್ನೆಲೆ ಪ್ರಕಾರ, ರಾಮಾಯಣದಲ್ಲಿ ಸೀತೆಯನ್ನು ರಾವಣ ಹೊತ್ತೊಯ್ಯುತ್ತಿದ್ದಾಗ ತಡೆದ ಜಟಾಯು, ರಾವಣನ ಪ್ರಹಾರಕ್ಕೆ ಈಡಾಗಿ ತನ್ನೆರಡೂ ರೆಕ್ಕೆಗಳನ್ನು ಕಳೆದುಕೊಂಡು ಬಿದ್ದದ್ದು ಈ ಪ್ರದೇಶದಲ್ಲಿಯಂತೆ. ಸೀತೆಯನ್ನು ಅರಸುತ್ತಾ ಬಂದ ರಾಮ ಲಕ್ಷ್ಮಣರು ಜಟಾಯುವಿನಿಂದಾಗಿ ಸೀತೆ ಎಲ್ಲಿದ್ದಾಳೆ ಎಂಬುದನ್ನು ತಿಳಿದುಕೊಂಡರು. ತನ್ನ ಅಂತ್ಯಸಂಸ್ಕಾರವನ್ನು ಇಲ್ಲೇ ನೆರವೇರಿಸಬೇಕೆಂದು ಜಟಾಯುವು ರಾಮನಲ್ಲಿ ಕೋರುತ್ತಾನೆ. ಶ್ರೀರಾಮನು ಜಟಾಯುವಿನ ಅಂತ್ಯಸಂಸ್ಕಾರ ನೆರವೇರಿಸಿದ ಸ್ಥಳವೇ ಜಟಾಯು ಕುಂಡ. ಇದು ದೇವಾಲಯದೊಳಗಿದ್ದು, ಇಲ್ಲಿಗೆ ಬರುವ ಭಕ್ತಾದಿಗಳು ಜಾತಿ-ಮತ ಭೇದವಿಲ್ಲದೆ ಈ ಕುಂಡದಿಂದ ವಿಭೂತಿ ಪ್ರಸಾದ ತೆಗೆದುಕೊಳ್ಳುತ್ತಾರೆ.

ರಾವಣನೊಂದಿಗೆ ಯುದ್ಧ ಮುಗಿದ ನಂತರ ಶ್ರೀರಾಮನು ಇಲ್ಲಿಗೆ ಸೀತೆಯೊಂದಿಗೆ ಬಂದು, ಶಿವನನ್ನು ಪ್ರಾರ್ಥಿಸಿದ. ಪದ್ಮಶೂರನೆಂಬ ರಕ್ಕಸನನ್ನು ಕೊಲ್ಲಲು ಷಣ್ಮುಖನು ಶಕ್ತಿಯಿಂದ ವೇಲ್ (ಭರ್ಜಿ) ಆಯುಧವನ್ನು ಪಡೆದ ಸ್ಥಳವೂ ಇದೇ. ಅಂತೆಯೇ ವಿಶ್ವಾಮಿತ್ರ, ವಸಿಷ್ಠ ಮುಂತಾದ ಮಹರ್ಷಿಗಳು ಶಿವನನ್ನು ಪ್ರಾರ್ಥಿಸಿದ ಸ್ಥಳವಿದಾಗಿದೆ.

ಕುಷ್ಠರೋಗ ಪೀಡಿತನಾದ ಅಂಗಾರಕನು ಈ ಕ್ಷೇತ್ರಕ್ಕೆ ಬಂದು ಶಿವನನ್ನು ಪೂಜಿಸಿ, ರೋಗಮುಕ್ತನಾದ. ಈ ಕಾರಣಕ್ಕೆ ಇದು ನವಗ್ರಹ ಕ್ಷೇತ್ರಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿದ್ದು, ಅಂಗಾರಕನಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಜಾತಕದಲ್ಲಿ ದೋಷವಿರುವ ಮಂದಿ ದೋಷದಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.

ಬಿಲ್ವ ವೃಕ್ಷದ ಬೇರಿನ ಪುಡಿ, ಸಂಜೀವಿನಿ ಮತ್ತು ತೈಲದ ಮಿಶ್ರಣದೊಂದಿಗೆ ಶಿವನು ಶಕ್ತಿ ಸಹಿತನಾಗಿ ಈ ಕ್ಷೇತ್ರಕ್ಕೆ ಆಗಮಿಸಿದ ಎಂಬ ಪ್ರತೀತಿ ಇದೆ. ಸಿದ್ಧ ವೈದ್ಯದ ಪ್ರಕಾರವಾಗಿರುವ ಈ ಮಿಶ್ರಣವು 4,480 ರೋಗಗಳನ್ನು ಗುಣಪಡಿಸಬಲ್ಲ ಶಕ್ತಿ ಹೊಂದಿದೆ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ಇಲ್ಲಿ ಶಿವನಿಗೆ ವೈದ್ಯನಾಥೇಶ್ವರ ಎಂಬ ಹೆಸರು ಬಂತು.

ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗಾಗಮಿಸಿ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಒಂದು ವಿಶೇಷ ವಿಧಾನದ ಮೂಲಕ ಮಾತ್ರೆ ತಯಾರಿಸುವ ಪ್ರಾಚೀನ ಪದ್ಧತಿಯೊಂದು ಇಲ್ಲಿ ಈಗಲೂ ಚಾಲ್ತಿಯಲ್ಲಿದೆ. ಶುಕ್ಲ ಪಕ್ಷದ ಶುಭ ಮುಹೂರ್ತದಲ್ಲಿ ವ್ಯಕ್ತಿಯೊಬ್ಬ ಅಂಗಸಂತಾನ ತೀರ್ಥದಲ್ಲಿ ಮಿಂದು, ಈ ಕೊಳದ ತಳಭಾಗದಲ್ಲಿರುವ ಮರಳನ್ನೆತ್ತಿ, ಜಟಾಯು ಕುಂಡದ ವಿಭೂತಿ ಪ್ರಸಾದದೊಂದಿಗೆ ಮಿಶ್ರ ಮಾಡಿ, ಮತ್ತೊಂದು ಪವಿತ್ರ ತೀರ್ಥವಾದ ಸಿದ್ಧಾಮೃತ ತೀರ್ಥದ ನೀರನ್ನು ಸೇರಿಸಬೇಕು. ಇವನ್ನು ಮುರುಗ (ಷಣ್ಮುಖ) ದೇವರ ಸನ್ನಿಧಿಯಲ್ಲಿರುವ ಅರೆಕಲ್ಲಿನಲ್ಲಿ ಅರೆಯಬೇಕು. ಅರೆಯುವಾಗ ಪಂಚಾಕ್ಷರಿ ಮಂತ್ರ ಜಪಿಸಬೇಕು. ಅರೆದಾದ ಮೇಲೆ ಲಭ್ಯವಾಗುವ ಮಿಶ್ರಣವನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಶಕ್ತಿ ಸನ್ನಿಧಿಗೆ ಒಯ್ದು, ಅದಕ್ಕೆ ಪೂಜೆ ಮಾಡಿಸಬೇಕು. ಬಳಿಕ ಅದನ್ನು ಸಿದ್ಧಾಮೃತ ತೀರ್ಥದ ಪವಿತ್ರ ಜಲದೊಂದಿಗೆ ಸೇವಿಸಬೇಕು. ಯಾವುದೇ ರೋಗಗಳನ್ನೂ ಈ ಔಷಧಿಯು ನಿವಾರಿಸಬಹುದಾಗಿದೆ. ಈ ಜನ್ಮದ ಮಾತ್ರವೇ ಅಲ್ಲ, ಐದು ಜನ್ಮಗಳಲ್ಲೂ ಯಾವುದೇ ರೋಗರುಜಿನಗಳಿಲ್ಲದೆ ಜೀವಿಸಬಹುದಾಗಿದೆ ಎನ್ನುತ್ತದೆ ತಮಿಳಿನ ಒಂದು ಶ್ಲೋಕ.

WD
ದೇವಸ್ಥಾನದ ಹಿರಿಯ ಗುರುಗಳು (ಅರ್ಚಕರು) ಹೇಳುವ ಪ್ರಕಾರ: ಶಿವನು ಇಲ್ಲಿ ವೈದ್ಯನಾಥನ ರೂಪದಲ್ಲಿ ಅವತರಿಸಿದ್ದಾನೆ. ಅಂಗಾರಕನ ನವಗ್ರಹ ಕ್ಷೇತ್ರವೂ ಇದಾಗಿದ್ದು, ಇಲ್ಲಿ ಚೆವ್ವ (ಕುಜ) ದೋಷ ಪರಿಹಾರವಾಗುತ್ತದೆ. ಗಣಪತಿಯು ಕಾಮಧೇನು ಮತ್ತು ಕಲ್ಪವೃಕ್ಷದಂತೆ ವರದಾಯಕನಾಗಿದ್ದಾನೆ.

ಕುಜ ದೋಷಕ್ಕೆ, ವಿವಾಹ ಸಂಬಂಧಿತ ಸಮಸ್ಯೆಗಳಿಗೆ ಮತ್ತು ಆಸ್ತಿಗೆ ಸಂಬಂಧಿಸಿದ ತೊಂದರೆಗಳಿಗೆ ಇದು ಸಿದ್ಧ ಕ್ಷೇತ್ರವಾಗಿದೆ. ಇಲ್ಲಿ ಮುರುಗ (ಷಣ್ಮುಖ)ನು ಪುತ್ರ ಭಾಗ್ಯ ಕರುಣಿಸುತ್ತಾನೆ. ತಯ್ಯಲ್‌ನಾಯಕಿ ಅಮ್ಮ ಸುಮಂಗಲಿಯರ ಔನ್ನತ್ಯಕ್ಕೆ ಕಾರಕಳಾಗಿರುತ್ತಾಳೆ.

ಈ ಕ್ಷೇತ್ರದಲ್ಲಿ ಒಂದೇ ಸಾಲಿನಲ್ಲಿ ಎಲ್ಲಾ ನವಗ್ರಹರೂ ನಿಂತಿರುವಂತಹ ವಿಗ್ರಹಗಳಿವೆ. ಆದುದರಿಂದ ಸರ್ವ ಗ್ರಹ ದೋಷವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ.

ಬಿಲ್ವ, ಶ್ರೀಗಂಧ ಮತ್ತು ವಿಭೂತಿಯ ಮಿಶ್ರಣದ ಮೂಲಕ ದೇವರು ಎಲ್ಲ ರೋಗಗಳನ್ನೂ ಪರಿಹರಿಸುತ್ತಾನೆ. ಈ ಸ್ಥಳದಲ್ಲಿ ಎಲ್ಲಾ ನಾಲ್ಕು ಯುಗಗಳಲ್ಲಿ ಬೇರೆ ಬೇರೆಯೇ ವೃಕ್ಷಗಳಿದ್ದವು ಎಂಬ ನಂಬಿಕೆ ಇದೆ. ಅಂದರೆ ಕೃತ ಯುಗದಲ್ಲಿ ಕದಂಬ ವೃಕ್ಷ, ತ್ರೇತಾ ಯುಗದಲ್ಲಿ ಬಿಲ್ವ ವೃಕ್ಷ, ದ್ವಾಪರ ಯುಗದಲ್ಲಿ ಬಕುಳ ವೃಕ್ಷ ಹಾಗೂ ಕಲಿಯುಗದಲ್ಲಿ ಬೇವು ವೃಕ್ಷ ಇಲ್ಲಿದೆ.

ಇಲ್ಲಿನ ಸಿದ್ಧಾಮೃತ ಕೊಳವು ಆಕರ್ಷಕವಾಗಿದೆ. ಕೃತಯುಗದಲ್ಲಿ ಕಾಮಧೇನುವು ಇಲ್ಲಿಗೆ ಬಂದು ಶಿವ ಲಿಂಗಕ್ಕೆ ಕ್ಷೀರಾಭಿಷೇಕ ಮಾಡಿದ್ದು, ಉಕ್ಕಿ ಹರಿದ ಹಾಲು ಕೊಳವನ್ನು ತುಂಬಿತು, ಈ ಮೂಲಕ ಕೊಳಕ್ಕೆ ದೈವೀಕ ಶಕ್ತಿ ನೀಡಿತು ಎಂಬ ನಂಬಿಕೆಯಿದೆ. ದುಷ್ಟಶಕ್ತಿಗಳ ಬಾಧೆಗೀಡಾದ ವ್ಯಕ್ತಿಗಳು ಈ ಪವಿತ್ರ ಕೊಳದಲ್ಲಿ ಸ್ನಾನ ಮಾಡಿದರೆ, ಬಾಧೆ ನಿವಾರಣೆಯಾಗುತ್ತದೆ. ಅಲ್ಲದೆ, ವಿಶೇಷವೆಂದರೆ ಈ ಕೊಳದಲ್ಲಿ ಕಪ್ಪೆಗಳಿಲ್ಲ ಮತ್ತು ನೀರು ಹಾವುಗಳೂ ಇಲ್ಲ. ಇದಕ್ಕೆ ಕಾರಣ, ಋಷಿಯೊಬ್ಬ ತಮ್ಮ ತಪೋಬಲದ ಮೂಲಕ ಅವುಗಳು ಈ ಕೊಳದಲ್ಲಿ ಇರದಂತೆ ಮಾಡಿದ್ದ ಎನ್ನಲಾಗುತ್ತದೆ.

ಈ ಕ್ಷೇತ್ರವನ್ನು ಪುಳ್ಳಿರುಕ್ವೇಲೂರು ಅಂತಲೂ ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿನ ದೇವರನ್ನು ಪುಳ್ (ಪಕ್ಷಿ-ಜಟಾಯು), ಋಗ್ವೇದ (ರುಕ್), ಮುರುಗನ ಆಯುಧ (ವೇಲ್) ಮತ್ತು ಸೂರ್ಯ (ಊರ್) ಪೂಜಿಸಿದ್ದಾರೆ.

ವೈದ್ಯನಾಥ ಸ್ವಾಮಿಯಲ್ಲದೆ, ಈ ಕ್ಷೇತ್ರವು ನಾಡಿ ಜ್ಯೋತಿಷ್ಯಕ್ಕೂ ಅತ್ಯಂತ ಪ್ರಸಿದ್ಧಿ ಪಡೆದಿದೆ. ತಾಳೆ ಗ್ರಂಥಗಳ ಮೂಲಕ ವ್ಯಕ್ತಿಯೊಬ್ಬನ ಭೂತ, ವರ್ತಮಾನ ಮತ್ತು ಭವಿಷ್ಯಗಳನ್ನು ತಿಳಿಯಬಲ್ಲ ಈ ಶಾಸ್ತ್ರದಲ್ಲಿ ಕೇವಲ ಹೆಬ್ಬೆರಳ ಮುದ್ರೆಯ ಮೂಲಕ ಭವಿಷ್ಯ ನುಡಿಯಲಾಗುತ್ತದೆ. ಪಟ್ಟಣದ ಅಲ್ಲಲ್ಲಿ ನಾಡಿಜ್ಯೋತಿಷ್ಯ ಕೇಂದ್ರಗಳನ್ನು ನಾವು ಕಾಣಬಹುದಾಗಿದೆ.

ವೈದ್ಯೇಶ್ವರ ದೇವಾಲಯಕ್ಕೆ ಹೋಗುವುದು ಹೇಗೆ:

ರೈಲು ಮೂಲಕ : ಚೆನ್ನೈ-ತಂಜಾವೂರು ಮಾರ್ಗ ಮಧ್ಯೆ ವೈದ್ಯೇಶ್ವರ ಕೋವಿಲ್ (ದೇವಸ್ಥಾನ) ರೈಲ್ವೈ ನಿಲ್ದಾಣವಿದೆ.

ರಸ್ತೆ ಮಾರ್ಗ: ಇದು ಚೆನ್ನೈಯಿಂದ 235 ಕಿ.ಮೀ. ದೂರದಲ್ಲಿರುವ ಚಿದಂಬರಂನಿಂದ 26 ಕಿ.ಮೀ. ದೂರವಿದೆ.ಚಿದಂಬರಂನಿಂದ 35-40 ನಿಮಿಷದಲ್ಲಿ ದೇವಸ್ಥಾನ ತಲುಪಬಹುದು.

ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಚೆನ್ನೈ. ಚೆನ್ನೈಯಿಂದ ರಸ್ತೆ ಅಥವಾ ರೈಲು ಮೂಲಕ ಕ್ಷೇತ್ರ ತಲುಪಬಹುದು. ತಿರುಚ್ಚಿಯಿಂದಲೂ ಹೋಗಬಹುದು. ಆದರೆ ರಸ್ತೆ ಪ್ರಯಾಣ ಮಾತ್ರ ತ್ರಾಸದಾಯಕ.