ಸಾತ್ಪುರ ಕಾನನದ ನಡುವೆ ಮನುದೇವಿ ಮಂದಿರ

ಈ ಬಾರಿ ಧಾರ್ಮಿಕ ಯಾತ್ರೆಯಲ್ಲಿ, ಬನ್ನಿ, ಶ್ರೀ ಕ್ಷೇತ್ರ ಮನುದೇವಿ ಮಂದಿರವನ್ನು ನೋಡೋಣ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶವನ್ನು ಪ್ರತ್ಯೇಕಿಸುವ ಸಾತ್ಪುರ ಪರ್ವತಾವಳಿಯ ಹಚ್ಚ ಹಸಿರಿನ ಮಡಿಲಲ್ಲಿದೆ ಖಾಂದೇಶ್‌ನ ಮನುದೇವಿ ಮಂದಿರ. ಇಲ್ಲಿಯ ಅಧಿದೇವತೆ ಮಾತೆ ಮನುದೇವಿ.

ಮಹಾರಾಷ್ಟ್ರದ ಯಾವಲ್-ಚೋಪ್ರಾ ಹೆದ್ದಾರಿಯ ಉತ್ತರ ಭಾಗದಲ್ಲಿರುವ ಕಾಸರ್‌ಖೇಡ್-ಅಡಗಾಂವ್ ಗ್ರಾಮದಿಂದ ಸುಮಾರು 8 ಕಿ.ಮೀ. ದೂರದಲ್ಲಿದೆ ಈ ಪುರಾತನ ಮಂದಿರ. ಬೆಟ್ಟ ಗುಡ್ಡಗಳಿಂದ ಆವೃತವಾದ ಈ ತಾಣವು ಭಕ್ತಿ ಭಾವವನ್ನು ಉದ್ದೀಪನಗೊಳಿಸುತ್ತದೆ. ಸುತ್ತಮುತ್ತಲಿನ ಮಂದಿ ಈ ಕ್ಷೇತ್ರಕ್ಕೆ ಬಂದು ಇಷ್ಟಾರ್ಥ ಸಿದ್ಧಿಗಾಗಿ ಶ್ರೀದೇವಿಯನ್ನು ಪ್ರಾರ್ಥಿಸುತ್ತಾರೆ.

ಕ್ರಿಸ್ತಪೂರ್ವ 1200 ಅವಧಿಯಲ್ಲಿ, ಸಾತ್ಪುರ ಪರ್ವತಾವಳಿ ಪ್ರದೇಶದ ಗಾವ್ಳಿ ವಾಡಾದ ರಾಜನಾಗಿದ್ದ ದೊರೆ ಈಶ್ವರೇಶನ್. ಆತನಿಗೆ ಗೋವುಗಳ ಮಂದೆಯಿತ್ತು. ಕೆಲವು ಗೋವುಗಳು ನೀರು ಕುಡಿಯಲೆಂದು ಮಹಾರಾಷ್ಟ್ರದ ತಪತಿ ನದಿಯತ್ತಲೂ, ಮತ್ತೆ ಕೆಲವು ಹಸುಗಳು ನೀರಿಗಾಗಿ ಮಧ್ಯಪ್ರದೇಶದ ನರ್ಮದಾ ನದಿಯತ್ತಲೂ ತೆರಳುತ್ತಿದ್ದವು.
WD


ಆ ಸಮಯದಲ್ಲಿ ಭೀಕರ ‘ಮಾನ್ಮೋಡಿ’ ಎಂಬ ಮಾರಕ ರೋಗವು ಆ ಪ್ರದೇಶದಲ್ಲಿ ಕಾಣಿಸಿಕೊಂಡಿತು. ಇಡೀ ಖಾಂದೇಶ್ ಪ್ರದೇಶವೇ ರೋಗಬಾಧಿತವಾಯಿತು ಮತ್ತು ಆ ಪ್ರದೇಶದಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡಿತು.

ಕ್ರಿ.ಪೂ.1250ರಲ್ಲಿ, ಈ ರೋಗವನ್ನು ನಿವಾರಿಸಲು ರಾಜಾ ಈಶ್ವರೇಶನ್ ಗಾವ್ಳಿ ವಾಡಾದಿಂದ 3 ಕಿ.ಮೀ. ದೂರದಲ್ಲಿರುವ ತಾಣಕ್ಕೆ ತೆರಕಳಿ, ಅಲ್ಲಿ ಸಂಪ್ರದಾಯ ವಿಧಿಗಳಿಗೆ ಅನುಸಾರವಾಗಿ ಮನು ದೇವಿಯ ಗುಡಿ ಕಟ್ಟಿಸಿದ. ಇದಕ್ಕೆ ಸಾಕ್ಷಿಯಾಗಿ ನಿಂತಿದೆ 13 ಅಡಿ ಅಗಲದ ಗೋಡೆ. ಅದು ಮಂದಿರ ಮತ್ತು ಗಾವ್ಳಿ ವಾಡಾ ನಡುವೆ ಮೇಲೆದ್ದು ನಿಂತಿದೆ.

ದುಷ್ಟಶಕ್ತಿಗಳು ಮತ್ತು ಮಾನ್ಮೋಡಿ ರೋಗಕ್ಕೆ ಪ್ರತಿರೋಧಕವಾಗಿ ಈ ಗೋಡೆ ಕಟ್ಟಿಸಲಾಗಿತ್ತು. ಪುರಾಣ ಕಥಾನಕಗಳಲ್ಲೂ ಈ ಕ್ಷೇತ್ರದ ಉಲ್ಲೇಖವಿದ್ದು, ಮನುದೇವಿಯು ಸಾತ್ಪುರ ಪರ್ವತ ವಲಯದ ದಟ್ಟ ಕಾನನದಲ್ಲಿ ನೆಲೆಸಬೇಕೆಂದು ಎಂದು ಭಗವಾನ್ ಶ್ರೀಕೃಷ್ಣ ಆದೇಶಿಸಿದ್ದ ಎಂಬ ಕಥೆಯೂ ಇದೆ.

ಮಂದಿರದ ಆವರಣದಲ್ಲಿ ಏಳೆಂಟು ಬಾವಿಗಳಿವೆ. ಮನುದೇವಿ, ಗಣೇಶನ ವಿಗ್ರಹಗಳು, ಶಿವಲಿಂಗ ಮತ್ತು ಅನ್ನಪೂರ್ಣ ಮಾತೆಯ ವಿಗ್ರಹವು ಮಂದಿರ ನಿರ್ಮಾಣವಾಗುವಾಗಲೇ ದೊರೆತಿದ್ದವು. ಮಂದಿರದ ಸಮೀಪದಲ್ಲೇ ಇದೆ ಆಕರ್ಷಕ ಕೌತಾಲ್ ಎಂಬ ಜಲಪಾತ. ಇದರ ಆಳ ಸುಮಾರು 400 ಅಡಿ.

WD
ವರ್ಷದಲ್ಲಿ ನಾಲ್ಕು ಬಾರಿ ಜನ ಈ ಮಂದಿರಕ್ಕೆ ಸಂದರ್ಶಿಸುತ್ತಾರೆ. ನವರಾತ್ರಿಯ ಎಲ್ಲಾ ದಿನಗಳಲ್ಲೂ ಯಾತ್ರಾರ್ಥಿಗಳು ಇಲ್ಲಿಗೆ ಬಂದು ದೇವಿಯ ದರ್ಶನ ಪಡೆದು, ಪ್ರಾರ್ಥನೆ, ಪೂಜೆ, ಪುನಸ್ಕಾರಗಳನ್ನು ನೆರವೇರಿಸುತ್ತಾರೆ.

ನವದಂಪತಿಗಳು ಇಲ್ಲಿಗೆ ಸಂದರ್ಶಿಸಿದರೆ, ಅವರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಈ ಹಿಂದೆ ಭಕ್ತರು ಸಾತ್ಪುರದ ದಟ್ಟ ಕಾನನದಲ್ಲಿ ನಡೆದುಕೊಂಡು ಈ ಕ್ಷೇತ್ರಕ್ಕೆ ಬರಬೇಕಾಗಿತ್ತು. ಆದರೆ ಈಗ ಮಹಾರಾಷ್ಟ್ರ ಸರಕಾರ ಹಾಗೂ ಮನುದೇವಿ ಟ್ರಸ್ಟ್‌ಗಳು ಒಗ್ಗೂಡಿ ಈ ಮಂದಿರಕ್ಕೆ ಸೂಕ್ತ ಮಾರ್ಗವೊಂದನ್ನು ನಿರ್ಮಿಸಿವೆ.

ಇಲ್ಲಿಗೆ ಹೋಗುವುದು ಹೇಗೆ?
WD

ರಸ್ತೆ ಮಾರ್ಗ: ಯಾವಲ್ ಪಟ್ಟಣವು ಭುಸಾವಲ್‌ನಿಂದ 20 ಕಿ.ಮೀ. ದೂರದಲ್ಲಿದೆ. ಅಲ್ಲಿಂದ ಬಸ್ ಸೇವೆ ಇದೆ.

ರೈಲು ಮಾರ್ಗ: ಭುಸಾವಲ್ ರೈಲು ನಿಲ್ದಾಣವು ಎಲ್ಲಾ ಪ್ರಮುಖ ರೈಲ್ವೇ ನಿಲ್ದಾಣಗಳಿಂದ ಸಂಪರ್ಕಗೊಂಡಿದೆ.

ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ 175 ಕಿ.ಮೀ. ದೂರದಲ್ಲಿರುವ ಔರಂಗಾಬಾದ್.