ಬಸವನಗುಡಿ ಧಾರ್ಮಿಕ ಮಂದಿರವಾಗಿದ್ದು, ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯ ದಕ್ಷಿಣ ಕೊನೆಯಲ್ಲಿ ಬಸವನಗುಡಿ ನೆಲೆಗೊಂಡಿದೆ. ಬಸವನಗುಡಿ ಎಂಬ ಪದವು ಬಸವನಿಂದ ಜನ್ಯವಾಗಿದ್ದು, ಇದರ ಅರ್ಥ ನಂದಿ. ಮಂದಿರದ ವಿಶೇಷ ಆಕರ್ಷಣೆ ಬಸವನ ಬೃಹತ್ ಮೂರ್ತಿ. ಕ್ರಿ.ಶ. 1537ರಲ್ಲಿ ಈ ದೇವಾಲಯವನ್ನು ಕೆಂಪೇಗೌಡ ಕಟ್ಟಿಸಿದನೆಂದು ಹೇಳಲಾಗಿದೆ. ದೊಡ್ಡ ಬೆಟ್ಟದ ಮೇಲಿರುವ ಈ ಮಂದಿರವನ್ನು ಸ್ಥಳೀಯ ಬಸ್, ಟ್ಯಾಕ್ಸಿಗಳ ಮೂಲಕ ತಲುಪಬಹುದು.
ಏಕ ಗ್ರಾನೈಟ್ ಶಿಲೆಯಲ್ಲಿ ನಂದಿ ವಿಗ್ರಹವನ್ನು ಕೆತ್ತಲಾಗಿದ್ದು ಆರಂಭದಲ್ಲಿ ಇದರ ಬಣ್ಣ ಕಂದಾಗಿತ್ತು. ಭಕ್ತರು ಕೊಬ್ಬರಿ ಎಣ್ಣೆ ಲೇಪಿಸಿದ್ದರಿಂದ ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗಿತು. ವಿಶ್ವಭಾರತಿ ನದಿ ನಂದಿಯ ಪಾದದಿಂದ ಉಗಮವಾಗಿದೆ ಎಂಬ ಪ್ರತೀತಿಯಿದೆ. ನಂದಿಯ ಮೂರ್ತಿಯ ಹಿಂದೆ ಶಿವಲಿಂಗವಿದೆ. ಭಾರತದ ಅನೇಕ ದೇವಾಲಯಗಳ ರೀತಿ ಬಸವನಗುಡಿ ಸ್ಥಾಪನೆಯ ಹಿಂದೆಯೂ ಒಂದು ಕಥೆಯಿದೆ. ಅಲ್ಲಿ ಜಮೀನುಗಳಲ್ಲಿ ಬೆಳೆದಿದ್ದ ಕಡಲೆಕಾಯಿ ಬೆಳೆಗಳನ್ನು ನಾಶಮಾಡುತ್ತಿದ್ದ ನಂದಿಯನ್ನು ಸಂತೃಪ್ತಿಪಡಿಸಲು ಈ ದೇವಾಲಯ ನಿರ್ಮಿಸಲಾಯಿತೆಂಬ ಪ್ರತೀತಿಯಿದೆ.