ಈ ಬಾರಿಯ ಧಾರ್ಮಿಕ ಯಾತ್ರೆಯಲ್ಲಿ ನಾವು ನಿಮ್ಮನ್ನು ಕರೆದೊಯ್ಯಲಿರುವುದು ಮಹಾರಾಷ್ಟ್ರದಲ್ಲಿರುವ ಜೆಜುರಿಯ ಖಂಡೋಬಾ ಮಂದಿರಕ್ಕೆ. ಮರಾಠಿಯಲ್ಲಿ ಈ ಮಂದಿರವನ್ನು ಕರೆಯುವುದು 'ಖಂಡೋಬಾಚಿ ಜೆಜುರಿ' ಎಂಬುದಾಗಿ. ಜೆಜುರಿಯ ದೇವರು ಮ್ಹಾಲ್ಸಕಾಂತ್ ಅಥವಾ ಮಲ್ಹಾರಿ ಮಾರ್ತಾಂಡ. ಮ್ಹಾಲ್ಸಕಾಂತ್ ಮಹಾರಾಷ್ಟ್ರದ ಅತ್ಯಂತ ಪುರಾತನವಾದ ಬುಡಕಟ್ಟು ಜನಾಂಗವಾದ ಢಂಗಾರ್‌ಗಳ ಅಧಿದೇವತೆ. ಮರಾಠಾ ಸಂಪ್ರದಾಯದ ಪ್ರಕಾರ, ಹೊಸದಾಗಿ ವಿವಾಹವಾದ ದಂಪತಿಗಳು ಈ ಮಂದಿರಕ್ಕೆ ಭೇಟಿ ನೀಡುವುದು ಕಡ್ಡಾಯ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫಲ್ತಾನ್ ಎಂಬ ಪಟ್ಟಣದ ಸಮೀಪವಿದೆ ಜೆಜುರಿ. ಪುಟ್ಟ ಬೆಟ್ಟದ ಮೇಲಿರುವ ಖಂಡೋಬಾ ಮಂದಿರಕ್ಕೆ ಹೋಗಬೇಕಿದ್ದರೆ 200 ಮೆಟ್ಟಿಲು ಏರಬೇಕು. ಮೆಟ್ಟಿಲೇರುತ್ತಿರುವಂತೆಯೇ ಮಂದಿರದ ಆವರಣವನ್ನು ಸುತ್ತುವರಿದ ಐತಿಹಾಸಿಕ ‘ದೀಪ ಮಾಲೆಗಳು’ (ಕಲ್ಲಿನಿಂದ ಮಾಡಿರುವ ದೀಪಗಳ ಸರಪಳಿ) ಆಕರ್ಷಿಸುತ್ತವೆ. ಬೆಟ್ಟದ ಮೇಲಿಂದ ಜೆಜುರಿ ಪಟ್ಟಣವನ್ನು ನೋಡುವುದೇ ಆಹ್ಲಾದದಾಯಕ.
ಮಂದಿರದಲ್ಲಿ ಸಾಮಾನ್ಯವಾಗಿರುವಂತೆಯೇ ಎರಡು ಭಾಗಗಳು- ಗರ್ಭಗೃಹ ಮತ್ತು ಮಂಟಪ. ಮಂಟಪದಲ್ಲಿ ಭಕ್ತಾದಿಗಳು ತಮ್ಮ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರೆ, ಗರ್ಭಗೃಹದಲ್ಲಿ ಖಂಡೋಬಾ ದೇವರ ಭವ್ಯ ಮೂರ್ತಿ ಇದೆ. ಈ ಮಂದಿರದಲ್ಲಿ 10x12 ಅಡಿ ಅಳತೆಯ ಹಿತ್ತಾಳೆಯ ಕೂರ್ಮವಿದೆ. ಐತಿಹಾಸಿಕ ಮಹತ್ವದ ವೈವಿಧ್ಯಮಯ ಆಯುಧಗಳು ಕೂಡ ಮಂದಿರದಲ್ಲಿವೆ. ದಸರಾ ದಿನದಂದು ಖಡ್ಗವನ್ನು ಎತ್ತುವ ಸ್ಪರ್ಧೆಯಂತೂ ಆಸಕ್ತಿಕರ. ಅಂದರೆ, ಅತ್ಯಂತ ಭಾರದ ಈ ಖಡ್ಗವನ್ನು ಸ್ಪರ್ಧಿಯು ಗರಿಷ್ಠ ಕಾಲ ಎತ್ತರಕ್ಕೆ ಎತ್ತಿ ಹಿಡಿಯಬೇಕಾಗುತ್ತದೆ.
ಜೆಜುರಿ ಪ್ರದೇಶವು ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. ಶಿವಾಜಿಯು ತನ್ನ ತಂದೆ ಶಹಾಜಿಯನ್ನು ಸುದೀರ್ಘ ಕಾಲದ ಬಳಿಕ ಮೊದಲು ಭೇಟಿಯಾಗಿದ್ದು ಇದೇ ತಾಣದಲ್ಲಿ. ಕೆಲವು ಕಾಲ ಅವರಿಬ್ಬರೂ ಜತೆಯಾಗಿದ್ದರು ಮತ್ತು ಮೊಘಲರನ್ನು ಸೋಲಿಸಲು ಯುದ್ಧ ಕಾರ್ಯತಂತ್ರಗಳನ್ನು ರೂಪಿಸಿದ್ದರು. ಆ ಸಮಯದಲ್ಲಿ ಜೆಜುರಿಯು ದಕ್ಷಿಣ ಭಾಗದ ಅತ್ಯಂತ ಪ್ರಮುಖ ಕೋಟೆಗಳಲ್ಲಿ ಒಂದಾಗಿತ್ತು.
ಜೆಜುರಿಯ ಈ ದೇವರು ಮಧ್ಯಪ್ರದೇಶದ ಹೋಳ್ಕರ್ ರಾಜಮನೆತನದ ಕುಲ ದೇವರೂ ಹೌದು. ಪ್ರತಿವರ್ಷ ಇಲ್ಲಿ ‘ಯಾತ್ರಾ’ ಹೆಸರಿನಲ್ಲಿ ಉತ್ಸವವನ್ನು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಉತ್ಸವ ನಡೆಯುವುದು ಚೈತ್ರ, ಮಾರ್ಗಶಿರ, ಪೌಷ ಮತ್ತು ಮಾಘ ಮಾಸಗಳಲ್ಲಿ. ‘ಯಾತ್ರಾ’ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಈ ಮಂದಿರಕ್ಕೆ ಹರಿದು ಬರುತ್ತಾರೆ.
ಹೋಗುವುದು ಹೇಗೆ?
ರಸ್ತೆ ಮಾರ್ಗ: ಜೆಜುರಿಯು ಪುಣೆಯಿಂದ 40 ಕಿ.ಮೀ. ದೂರದಲ್ಲಿದೆ. ಬಸ್ಸುಗಳು, ಟ್ಯಾಕ್ಸಿಗಳು ಲಭ್ಯವಿದೆ.
ರೈಲು ಮಾರ್ಗ: ಪುಣೆ-ಮೀರಜ್ ರೈಲು ಮಾರ್ಗದ ಮಧ್ಯೆ ಜೆಜುರಿ ರೈಲು ನಿಲ್ದಾಣವಿದೆ.
ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವಿರುವುದು ಪುಣೆಯಲ್ಲಿ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.