ದೇವರ ಅಸ್ತಿತ್ವದ ನಂಬಿಕೆಯಿಂದ ಜಗತ್ತಿನಲ್ಲಿ ನಿಶ್ಚಿಂತೆ

ಮಂಗಳವಾರ, 21 ಜೂನ್ 2016 (19:26 IST)
ದೇವರೆಂದರೆ ಪ್ರತಿಯೊಬ್ಬರಿಗೂ ಭಯ, ಭಕ್ತಿ ಇದ್ದೇ ಇರುತ್ತದೆ. ಅನೇಕ ಮಂದಿ ಬೆಳಿಗ್ಗೆ ಎದ್ದರೆ ದೇವರಿಗೆ ನಮಸ್ಕಾರ ಮಾಡುವ ಮೂಲಕ, ದೇವಸ್ಥಾನಗಳಿಗೆ ದರ್ಶನ ನೀಡುವ ಮೂಲಕ ದೇವರಿಗೆ ಸಂಪೂರ್ಣ ಶರಣಾಗುತ್ತಾರೆ. ಲೌಕಿಕ ಜಗತ್ತಿನಲ್ಲಿರುವ ನಾವು ಅಲೌಕಿಕ ಶಕ್ತಿಯನ್ನು ಪೂಜಿಸುವುದಕ್ಕೆ ನಿಜವಾಗಲೂ ಕಾರಣವೇನು? ದೇವರನ್ನು ನೋಡಿದವರು ಇದುವರೆಗೂ ಯಾರೂ ಇಲ್ಲ. ದೇವರ ಅಸ್ತಿತ್ವವನ್ನು ಸಾರಿ ಹೇಳಿದವರು ಯಾರೂ ಇಲ್ಲ. ಆದರೂ ದೇವರೆಂಬ ಆ ಅವ್ಯಕ್ತ ಮೂರ್ತಿಗೆ ನಾವು ವಂದಿಸುತ್ತೇವೆ.

ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತೇವೆ. ಒಂದು ವೇಳೆ ನಮ್ಮ ಇಷ್ಟಾರ್ಥ ನೆರವೇರಿದರೆ ಅದಕ್ಕೆ ದೇವರೇ ಕಾರಣವೆಂದು ಅವನನ್ನು ಹೊಗಳುತ್ತೇನೆ.  ದೇವರು ಇದ್ದಾನೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಜಗತ್ತಿನಲ್ಲಿ ದೇವರ ಅಸ್ತಿತ್ವವಿದೆಯೆಂದು ಜನರು ಭಾವಿಸಿರುವುದರಿಂದಲೇ ಜನರು ಪಾಪಗಳನ್ನು, ಕ್ರೌರ್ಯಗಳನ್ನು ಎಸಗಲು ಹೆದರುತ್ತಾರೆ. ಲೌಕಿಕ ಜಗತ್ತಿನ ಶಿಕ್ಷೆಗಿಂತ ಹೆಚ್ಚಾಗಿ ಅಲೌಕಿಕ ಜಗತ್ತಿನ ದೇವರು ತನಗೆ ಶಿಕ್ಷಿಸುತ್ತಾನೆಂಬ ಭಯ ಜನರಲ್ಲಿ ಮನೆಮಾಡಿರುತ್ತದೆ.

ಹೀಗಾಗಿ ಜನರು ತಪ್ಪುಗಳನ್ನು ಮಾಡಲು, ಪಾಪಗಳನ್ನು ಎಸಗಲು ಹೆದರುತ್ತಾರೆ. ಪಾಪಗಳನ್ನು ಎಸಗಿದರೆ ದೇವರು ತಮಗೆ ಈ ಜನ್ಮದಲ್ಲೇ ಯಾವುದಾದರೂ ರೀತಿಯಲ್ಲಿ ಶಿಕ್ಷಿಸುತ್ತಾನೆಂದು ಭಯ ಪಡುತ್ತಾರೆ. ಯಾರಾದರೂ ಪಾಪಕೃತ್ಯಗಳನ್ನು ಮಾಡಿರುವವರು ಮೃತಪಟ್ಟರೆ ಅವನು ಮಾಡಿದ ಪಾಪಕ್ಕೆ ತಕ್ಕ ಫಲವನ್ನು ದೇವರು ನೀಡಿದ ಎಂದು ಹೇಳುತ್ತಾರೆ. ಆದರೆ ಒಳ್ಳೆಯ ವ್ಯಕ್ತಿ ದಿಢೀರ್ ಮೃತಪಟ್ಟಾಗ ದೇವರು ಅವನ ಪುಣ್ಯದ ಫಲ ತುಂಬಿದಾಗ ಕರೆಸಿಕೊಂಡ ಎನ್ನುತ್ತಾರೆ. ಒಟ್ಟಿನಲ್ಲಿ ದೇವರ ಅಸ್ತಿತ್ವವಿದೆಯೆಂದು ಜನರು ನಂಬಿರುವುದರಿಂದ ಜಗತ್ತು ನಿಶ್ಚಿಂತೆಯಿಂದ ಸಾಗುತ್ತಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ