ಪರಶಿವನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ "ತ್ರ್ಯಂಬಕ" ಎಂಬ ಪುಟ್ಟ ಗ್ರಾಮದಲ್ಲಿದೆ.
ಸಹ್ಯಾದ್ರಿಯ ಬೆಟ್ಟಗಳ ಅಡಿಯಲ್ಲಿ ಬರುವ ಈ ಗ್ರಾಮದ ಉದ್ದಗಲಕ್ಕೂ ಹರಡಿರುವ ವನಸಿರಿ, ಹಸಿರು ಗಿಡಮರಗಳ ಸಾಲಿನಲ್ಲಿ ಪ್ರಣವ ಸ್ವರೂಪಿ ಓಂಕಾರ ನಾದ ಮತ್ತು ಮಹಾಮೃತ್ಯುಂಜಯ ಮಂತ್ರ, ಭಾವುಕ ಮನದ ವ್ಯಕ್ತಿಗೆ ಭಕ್ತಿ ಮಾರ್ಗದ ಮೋಕ್ಷವನ್ನು ಸಾಕ್ಷಾತ್ಕರಿಸುತ್ತದೆ.
ನಾಸಿಕ್ ನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಗ್ರಾಮವನ್ನು ಪ್ರವೇಶಿಸಿದ ಕೂಡಲೆ ನಮಗೆ ತ್ರ್ಯಂಬಕೇಶ್ವರ ಕ್ಷೇತ್ರದ ಹೆಬ್ಬಾಗಿಲು ಕಾಣುತ್ತದೆ. ಬೃಹತ್ತಾದ ಈ ದೇವಸ್ಥಾನ ಇಂಡೋ-ಆರ್ಯನ್ ಶೈಲಿಯ ಶಿಲ್ಪಕಲೆಗೆ ಉತ್ತಮ ಉದಾಹರಣೆಯಾಗಿ ನಿಂತಿದೆ.
ಮಂದಿರದ ಗರ್ಭಗೃಹವನ್ನು ಪ್ರವೇಶಿಸಿದ ಮೇಲೆ ಅರ್ಘ್ಯ ಪಾತ್ರೆಯಂತೆ ಕಾಣುವ ಸ್ಥಳದಲ್ಲಿ ಒಂದು ಇಂಚು ಅಳತೆಯ ಮೂರು ಶಿವಲಿಂಗಗಳನ್ನು ಕಾಣಬಹುದು. ಈ ಮೂರು ಲಿಂಗಗಳು ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ಪ್ರತಿಪಾದಿಸುತ್ತವೆ. "ಸೃಷ್ಟಿಕರ್ತನಾದ ಬ್ರಹ್ಮ, ಸ್ಥಿತಿಕರ್ತನಾದ ವಿಷ್ಣು ಮತ್ತು ಲಯ ಕರ್ತನಾದ ಪರಶಿವ, ಜ್ಯೋತಿರ್ಲಿಂಗ ಸ್ವರೂಪದಲ್ಲಿ ಇಲ್ಲಿ ನೆಲೆ ನಿಂತಿದ್ದಾರೆ" ಎಂಬುದು ನಂಬಿಕೆ. ಬ್ರಾಹ್ಮೀ ಮುಹೂರ್ತದ ಪೂಜೆಯ ನಂತರ ಶಿವನು ಪಂಚಮುಖಿಯಾಗುತ್ತಾನೆ. ಪೂಜೆಯ ನಂತರ ಅತಿರುದ್ರನಿಗೆ ಬೆಳ್ಳಿಯಿಂದ ಮಾಡಲಾಗಿರುವ ಪಂಚಮುಖವನ್ನು ತೊಡಿಸಲಾಗುತ್ತದೆ.
ಐತಿಹಾಸಿಕ ಹಿನ್ನೆಲೆ: ತ್ರ್ಯಂಬಕೇಶ್ವರ ದೇವಸ್ಥಾನ ಅತಿ ಪುರಾತನವಾದದ್ದು. 1755 ರಿಂದ 1786ರವರೆಗೆ ಮರಾಠಾ ಸಾಮ್ರಾಜ್ಯದ ಬಾಲಾಜಿರಾವ್ ಪೇಶ್ವೆ ಅಂದು ಸುಮಾರು 16 ಲಕ್ಷ ರೂ.ಗಳ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡನು ಎಂದು ಇತಿಹಾಸದಲ್ಲಿ ವಿವರಿಸಲಾಗಿದೆ.
WD
ಶಿವನ ಅವತಾರ ಎಂದು ಪೌರಾಣಿಕ ಹಿನ್ನೆಲೆ ಹೊಂದಿರುವ ಬ್ರಹ್ಮಗಿರಿ ಬೆಟ್ಟದ ಅಡಿಯಲ್ಲಿ ಈ ತ್ರ್ಯಂಬಕೇಶ್ವರ ದೇವಸ್ಥಾನವಿದ್ದು. ಇದೇ ಬೆಟ್ಟದಲ್ಲಿ ಗೋದಾವರಿ ನದಿ ಹುಟ್ಟಿದೆ.
ಪೌರಾಣಿಕ ಹಿನ್ನೆಲೆ: ಪೌರಾಣಿಕ ಹಿನ್ನೆಲೆಯನ್ನೂ ಹೊಂದಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಗೌತಮ ಮಹರ್ಷಿ ಆಶ್ರಮ ಇತ್ತು ಎಂದೂ ಮತ್ತು ಗೋ ಹತ್ಯೆಯ ಪಾಪ ವಿಮೋಚನೆಗಾಗಿ ಗೌತಮ ಋಷಿ ಇಲ್ಲಿ ಕಠಿಣ ತಪಸ್ಸು ಕೈಗೊಂಡನು ಎಂದು ಪ್ರತೀತಿ ಇದೆ.
ಗೌತಮ ಋಷಿಯ ತಪಸ್ಸಿನಿಂದ ಸಂಪ್ರೀತನಾದ ಶಿವನು ಗೌತಮನೆದುರು ಪ್ರತ್ಯಕ್ಷನಾದನು. ಗೌತಮ ಮಹರ್ಷಿಯು, ಪಾಪ ವಿನಾಶಿನಿ ಗಂಗೆ ಇಲ್ಲಿ ಹರಿಯಬೇಕು ಎಂದು ಕೇಳಿಕೊಂಡನು. ಶಿವನು ಒಪ್ಪಿದ ನಂತರ ಗೋದಾವರಿ ನದಿ ಇಲ್ಲಿ ಹುಟ್ಟಿತು ಎಂದು ನಂಬಿಕೆ ಇದೆ. ಗೋದಾವರಿ ನದಿಗೆ ‘ದಕ್ಷಿಣ ಗಂಗೆ’ ಎಂಬ ಹೆಸರು ಇದೆ.
ಗೌತಮ ಋಷಿಯ ತಪಸ್ಸಿನಿಂದ ಇಲ್ಲಿ ಶಿವನು ತ್ರ್ಯಂಬಕನಾಗಿ ನೆಲೆಸಿದ್ದಾನೆ. ಶಿವನು ತನ್ನ ಮೂರು ಕಣ್ಣುಗಳೊಂದಿಗೆ ಇಲ್ಲಿ ನೆಲೆಸಿರುವುದರಿಂದ ಸ್ಥಳಕ್ಕೆ 'ತ್ರ್ಯಂಬಕ’ ಎಂಬ ಹೆಸರು ಬಂದಿದೆ. ಉಜ್ಜಯಿನಿಯ ಮಹಾಕಾಲ ಮತ್ತು ಓಂಕಾರೇಶ್ವರದಂತೆ ಶಿವನು ಈ ಭಾಗದ ಅಧಿಪತಿ. ಪ್ರತಿ ಸೋಮವಾರ ಇಲ್ಲಿ ತ್ರ್ಯಂಬಕೇಶ್ವರನ ಬಹುದೊಡ್ಡ ಮೆರವಣಿಗೆ ನಡೆಯುತ್ತದೆ. ಮೆರವಣಿಗೆಯಲ್ಲಿನ ಉತ್ಸವ ಮೂರ್ತಿಗೆ ಚಿನ್ನದ ಪಂಚಮುಖವನ್ನು ತೊಡಿಸಲಾಗುತ್ತದೆ.
ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ಲಕ್ಷಗಟ್ಟಲೆ ಶಿವ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶಿವನು ಸ್ನಾನ ಮಾಡುತ್ತಾನೆ ಎಂಬ ಪ್ರತೀತಿ ಇರುವ ಕೊಳದಲ್ಲಿ ಸ್ನಾನ ಮಾಡಿ ತ್ರ್ಯಂಬಕೇಶ್ವರನ ದರ್ಶನ ಪಡೆಯುತ್ತಾರೆ.
ಕಾಲ ಸರ್ಪಯೋಗ ವಿಮೋಚನೆ: ತ್ರ್ಯಂಬಕೇಶ್ವರ ದೇವಾಲಯವು ಕಾಳ ಸರ್ಪ ಯೋಗ ವಿಮೋಚನೆಗೆ ಬಹು ಪ್ರಸಿದ್ಧಿ ಪಡೆದಿದೆ. ಈ ದೋಷಯುಕ್ತ ಯೋಗದ ನಿವಾರಣೆಗಾಗಿ ಇಲ್ಲಿ ನಾರಾಯಣ ನಾಗಬಲಿ ನೆರವೇರಿಸಲಾಗುತ್ತದೆ.