ಕದರಹಿತ ಮಾಯೆ ಶನಿ ಶಿಂಗ್ಣಾಪುರ

ದೀಪಕ್ ಖಂಡಗಲೆ

WD
ಈ ಗ್ರಾಮ ಶನೀಶ್ವರ ದೇವಾಲಯದಿಂದಾಗಿ ಹೆಸರುವಾಸಿ. ಇಲ್ಲಿನ ವಿಶೇಷತೆ ಅಂದರೆ, ಈ ಊರಿನ ಯಾವ ಬಾಗಿಲಿಗೂ ಬೀಗವಿಲ್ಲ. ಅದು ಮನೆ ಇರಲಿ, ಅಂಗಡಿ ಇರಲಿ, ಇಲ್ಲ ಬ್ಯಾಂಕೇ ಆಗಿರಲಿ. ಈ ಗ್ರಾಮವು ದೇವರಿಂದ ರಕ್ಷಿತವಾದುದು ಮತ್ತು ಇಲ್ಲಿಂದ ಏನಾದರೂ ಕದ್ದರೆ ಆ ಕಳ್ಳ ಗಡಿದಾಟುವ ಮುನ್ನವೇ ಸಾಯುತ್ತಾನಂತೆ! ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ಗ್ರಾಮದಲ್ಲಿ ಕಳ್ಳತನವಾದ ದಾಖಲೆಗಳು ಇಲ್ಲ.

ಮಹಾರಾಷ್ಟ್ರದ ನಾಸಿಕ್ ಸಮೀಪ ಇರುವ ಶನಿ-ಶಿಂಗ್ಣಾಪುರ ಸುಪ್ರಸಿದ್ಧ ಧಾರ್ಮಿಕ ಸ್ಥಳ. ಇದನ್ನು ಕದರಹಿತ ಮಾಯೆ ಎಂದೂ ಕರೆಯಲಾಗುತ್ತದೆ. ಇಲ್ಲಿನ ಇನ್ನೂ ಒಂದು ವೈಶಿಷ್ಠ್ಯವೆಂದರೆ, ಇಲ್ಲಿನ ನಿರ್ದಿಷ್ಟವಾದ ದೇವರ ಪ್ರತಿಮೆಯಾಗಲಿ, ಮೂರ್ತಿಯಾಗಲಿ ಇಲ್ಲ, ಆದರೆ ಒಂದು ಕಲ್ಲಿನ ಸ್ತಂಭ ಇದೆ. ಇದನ್ನು ಅಪರಿಮಿತ ಭಕ್ತಿ ಗೌರವಗಳಿಂದ ಇಲ್ಲಿಗೆ ಆಗಮಿಸುವ ಜನತೆ ಪೂಜಿಸುತ್ತಾರೆ.
WD


ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ, ಇಲ್ಲಿ ದೇವರಿಗೆ ಪೂಜೆಮಾಡಲು ಯಾವುದೇ ಪೂಜಾರಿ ಇಲ್ಲ. ದೇವಾಲದೊಳಗೆ ತೆರಳುವ ಗಂಡಸರು ದೇವಾಲಯದ ಬಳಿ ಇರುವ ಪವಿತ್ರ ನೀರಿನಲ್ಲಿ ತಲೆಗೆ ಸ್ನಾನ ಮಾಡಿ ಕೇಸರಿ ವಸ್ತ್ರ ತೊಡಬೇಕು. ಪ್ರಾರ್ಥನೆಗಳನ್ನು ಪಠಿಸುತ್ತಾ ಕಲ್ಲಿನ ಸ್ತಂಭಕ್ಕೆ ಪ್ರದಕ್ಷಿಣೆ ಹಾಕುವುದೇ ಪೂಜೆ ಸಲ್ಲಿಸುವ ವಿಧಾನ. ಪವಿತ್ರ ಕಲ್ಲಿನ ಸ್ತಂಭಕ್ಕೆ ಭಕ್ತರು ಅಭಿಷೇಕ ನೆರವೇರಿಸುತ್ತಾರೆ. ವಿವಿಧ ದ್ರವ್ಯಗಳು, ನೀರು ಮತ್ತು ಎಳ್ಳೆಣ್ಣೆಯ ಅಭಿಷೇಕವನ್ನು ಮಾಡಲಾಗುತ್ತದೆ. ಶನಿ ಅಮವಾಸ್ಯೆಯಂದು ಇಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಪ್ರಸಿದ್ಧ ವ್ಯಕ್ತಿಗಳೂ ಆ ದಿನದಂದು ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

WD
ಈ ಊರಿನಲ್ಲಿರುವ ಯಾವುದೇ ಮನೆ ಅಥವಾ ಅಂಗಡಿಗಳಿಗೆ ಬಾಗಿಲುಗಳೇ ಇಲ್ಲ. ಇಲ್ಲಿ ಕಳ್ಳತನವಾಗುವುದಿಲ್ಲ. ಒಂದೊಮ್ಮೆ ಯಾರಾದರೂ ಕಳ್ಳತನಕ್ಕೆ ಯತ್ನಿಸಿದರೆ ಅಂತಹವರು ಬದುಕುವುದೂ ಇಲ್ಲ. ಊರಿನ ಗಡಿ ದಾಟುತ್ತಲೆ ಸತ್ತು ಬೀಳುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. ವಸ್ತುಗಳನ್ನು ಕಳಕೊಂಡವರು ತಮ್ಮ ವಸ್ತುಗಳನ್ನು ಮರಳಿ ಪಡೆದ ಉದಾಹರಣೆಗಳು ಇವೆ. ಈ ಊರನ್ನು ಶವಿದೇವರು ಕಾಪಾಡುತ್ತಾರೆ ಎಂಬುದು ನಂಬುಗೆ. ಶಿಂಗ್ಣಾಪುರದಲ್ಲಿ ಯಾರಿಗಾದರೂ ಹಾವುಕಚ್ಚಿದಲ್ಲಿ, ಅವರನ್ನು ದೇವಾಲಯಕ್ಕೆ ಕರೆತಂದು ದೇವರ ಎದುರು ಕೆಲವು ಧಾರ್ಮಿಕವಿಧಿಗಳನ್ನು ನಡೆಸಿದಲ್ಲಿ ವಿಷವಿಳಿಯುತ್ತದೆ ಎಂಬ ನಂಬುಗೆಯೂ ಇದೆ.

ಶನೀಶ್ವರದ ಪಶ್ಚಿಮಕ್ಕಿರುವ ಊರು ದೇವಗಡ, ದತ್ತ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಈ ದೇವಾಲಯವು 24 ಗಂಟೆಗಳ ಕಾಲವೂ ಭಕ್ತರಿಗಾಗಿ ತೆರೆದಿರುತ್ತದೆ. ಮಹಾರಾಷ್ಟ್ರದ ಇನ್ನೊಂದು ಪವಿತ್ರ ಸ್ಥಳ ಶಿರ್ಡಿಯೂ ಶನಿ-ಶಿಂಗ್ಣಾಪುರಕ್ಕೆ ಸಮೀಪದಲ್ಲಿದೆ.

WD
ಪೂಜಾ ವಿಧಾನ
ಶಿಂಗ್ಣಾಪುರದಲ್ಲಿ ಶನಿದೇವರಿಗೆ ಪೂಜೆ ಸಲ್ಲಿಸಬೇಕಿರುವವರು, ತಲೆಗೆ ಸ್ನಾನಮಾಡಿ ಒದ್ದೆ ಬಟ್ಟೆಯಲ್ಲಿ ಶನಿಮಹಾರಾಜನ ಸ್ವಯಂಭೂ ಮೂರ್ತಿಗೆ ಪೂಜೆಸಲ್ಲಿಸಬೇಕು. ಬಳಿಕ ಪ್ರದಕ್ಷಿಣೆ ಹಾಕುತ್ತಾ ಪ್ರಾರ್ಥನೆ ಸಲ್ಲಿಸುತ್ತಾರೆ. ಅದಾದ ಬಳಿಕ ಬಳಿಯಲ್ಲಿರುವ ಪವಿತ್ರ ಬಾವಿಯಿಂದ ತಂದ ನೀರು ಹಾಗೂ ತೈಲದಿಂದ ಅಭಿಷೇಕ ಮಾಡುತ್ತಾರೆ. ಇಲ್ಲಿ ಯಾವುದೇ ಬಲಿದಾನಗಳು ಇರುವುದಿಲ್ಲ. ಭಕ್ತಾದಿಗಳಲ್ಲಿ ಗಂಡಸರು ಒದ್ದೆ ಬಟ್ಟೆಯಲ್ಲಿ ದೇವರ ಪೀಠದ ಸಮೀಪಕ್ಕೆ ತೆರಳಬಹುದು. ಆದರೆ ಸ್ತ್ರೀಯರು ಕಟ್ಟೆಯ ಸಮೀಪಕ್ಕೆ ತೆರಳುವಂತಿಲ್ಲ. ದೂರದಿಂದಲೇ ಪ್ರಾರ್ಥನೆ ಸಲ್ಲಿಸಬೇಕು. ಇಲ್ಲಿರುವ ಇನ್ನೊಂದು ಬಾವಿಯಿಂದ ಶನಿಮಹಾರಾಜನ ಧಾರ್ಮಿಕ ವಿಧಿಗಳಿಗೆ ಮಾತ್ರ ನೀರನ್ನು ಬಳಸಲಾಗುತ್ತದೆ. ಈ ಬಾವಿಯನ್ನು ಮಹಿಳೆಯರು ಬಳಸುವಂತಿಲ್ಲ.

ಇಲ್ಲಿಗೆ ಭೇಟಿ ನೀಡುವ ಭಕ್ತರು 'ಸಂಕೇತ್' ಎನ್ನುವ ಕೆಲವು ನಿಯಮಗಳನ್ನು ಪಾಲಿಸಬೇಕು.
WD

*ಇಲ್ಲಿಗೆ ಪ್ರವೇಶಿಸುವ ಭಕ್ತರು ಶುಚೀರ್ಭೂತರಾಗಿರಬೇಕು. ಭಕ್ತರ ಸ್ನಾನ ಹಾಗೂ ಪರಿಶುದ್ಧತೆಗಾಗಿ ಇಲ್ಲಿ ಸಾಕಷ್ಟು ಸೌಕರ್ಯಗಳು ಲಭಿಸುತ್ತವೆ.

*ದೇವರ ದರ್ಶನದ ವೇಳೆಗೆ ತಲೆಮೇಲೆ ಯಾವುದೇ ಬಟ್ಟೆ ಅಥವಾ ಟೊಪ್ಪಿಗೆಯನ್ನು ಧರಿಸಿರಬಾರದು.

* ಭಕ್ತರು ಒದ್ದೆ ಬಟ್ಟೆಯಲ್ಲೇ ದೇವರಿಗೆ ಅಭಿಷೇಕ ನಡೆಸಬೇಕು. ಶನಿವಾರ ಹಾಗೂ ಸೋಮವಾರಗಳಂದು ಅಭಿಷೇಕಕ್ಕೆ ಇಲ್ಲಿ ಬ್ರಾಹ್ಮರು ಲಭ್ಯ.

* ಅಭಿಷೇಕಕ್ಕಾಗಿ ಭಕ್ತರು ಎಣ್ಣೆ, ತೆಂಗಿನ ಕಾಯಿ, ಒಣಕರ್ಜೂರ, ಅಡಿಕೆ, ಅಕ್ಕಿ, ಅರಿಶಿನ-ಕುಂಕುಮ, ಗುಲಾಬಿ, ಬೇವು, ಸಕ್ಕರೆ, ನೀಲಿ ಹೂವುಗಳು, ಕಪ್ಪುಬಟ್ಟೆ, ಮೊಸರು ಮತ್ತು ಹಾಲು ಇತ್ಯಾದಿಗಳನ್ನು ಬಳಸುತ್ತಾರೆ.

* ತನ್ನ ಸಂಕಟ ಹರಣಕ್ಕಾಗಿ ಭಕ್ತರು ಕಾವಡಿ, ಬಿಬ್ಬ, ಮೊಳೆ, ಪಿನ್ನು ಅಥವಾ ಅಕ್ಕಿ ಮೊದಲಾದುವುಗಳನ್ನು ದೇವರಿಗೆ ಒಪ್ಪಿಸುತ್ತಾರೆ.

*ತಮ್ಮ ಇಚ್ಛೆಗಳು ನೆರವೇರಿದ ಬಳಿಕದ ಅಭಿಷೇಕವನ್ನು ನವಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಬೆಳ್ಳಿನಾಣ್ಯಗಳು, ತ್ರಿಶೂಲ, ಶ್ರಿಫಲ ಅಥವಾ ಗಾಮೇಲದಂತಹ ಕಬ್ಬಿಣದ ವಸ್ತುಗಳು ಅಥವಾ ಕುದುರೆ, ಹಸು, ಕೋಣ ಮುಂತಾದ ಪ್ರಾಣಿಗಳನ್ನು ಒಪ್ಪಿಸುತ್ತಾರೆ.

WD
ಶನಿ ಶಿಂಗ್ಣಾಪುರಕ್ಕೆ ತಲುಪುವ ದಾರಿ ದಿಕ್ಸೂಚಿ

ವಿಮಾನ ಮುಖಾಂತರವಾದರೆ
ಹತ್ತಿರದ ವಿಮಾನ ನಿಲ್ದಾಣವೆಂದರೆ, ಪುಣೆ. ಇಲ್ಲಿಂದ ಶನಿಶಿಂಗ್ಣಾಪುರ 160 ಕಿ.ಮೀ

ರೈಲುದಾರಿ
ಸಮೀಪದ ರೈಲ್ವೇನಿಲ್ದಾಣ ಶ್ರೀರಾಂಪುರ

ರಸ್ತೆಹಾದಿ
ಮುಂಬೈ-ಪುಣೆ-ಅಹ್ಮದಾನಗರ್-ಶನಿ ಶಿಂಗ್ಣಾಪುರ. ಅಂದಾಜು 330 ಕಿ.ಮೀ