ಜೈ ಕನಕ ದುರ್ಗಾ...ಜೈಜೈ ಕನಕ ದುರ್ಗಾ

WD
ಬೆಟ್ಟದ ತುತ್ತ ತುದಿಯಲ್ಲಿರುವ ಮಂದಿರದಲ್ಲಿ ಮೊಳಗುವ ಮಂತ್ರಘೋಷಗಳು ಭಕ್ತರನ್ನು ಮತ್ತಷ್ಟು ಆಕರ್ಷಿಸುವ ಮೂಲಕ ಧಾರ್ಮಿಕತೆಯನ್ನು ಎಲ್ಲೆಡೆ ಪಸರಿಸುವ ಮೂಲಕ ಬೆಟ್ಟದ ಕನಕದುರ್ಗಾ ದೇವಾಲಯ ಖ್ಯಾತಿ ಪಡೆದಿದೆ.

ಬೆಟ್ಟದ ಮೇಲಿರುವ ಕನಕದುರ್ಗಾ ಮಂದಿರಕ್ಕೆ ಮೆಟ್ಟಿಲುಗಳ ಹಾಗೂ ಘಾಟ್‌ ರಸ್ತೆಯ ಮೂಲಕವು ಸೇರಬಹುದು. ಆದರೆ ಹೆಚ್ಚಿನ ಸಂಖ್ಯೆಯ ಭಕ್ತರು ಮಂದಿರಕ್ಕೆ ಮೆಟ್ಟಿಲುಗಳ ಮೂಲಕವೇ ತೆರಳುತ್ತಾರೆ.ಆದರೆ ಮಹಿಳೆಯರಿಗೆ ಮಕ್ಕಳಿಗೆ ಮೆಟ್ಟಿಲುಗಳನ್ನು ಏರುವುದು ಸಾಹಸದ ಮಾತೇ ಸರಿ.ಹೀಗೆ ಮೆಟ್ಟಿಲುಗಳ ಮೇಲೆ ಸಾಗುವ ಭಕ್ತರು ಮೆಟ್ಟಿಲುಗಳಿಗೆ ಸುಗಂಧ ಭರಿತ ಅರಶಿನ ಪೌಡರ್‌ನ್ನು ಲೇಪಿಸಿ ಮೆಟ್ಟಿಲು ಪೂಜೆಯನ್ನು ನೆರವೇರಿಸುತ್ತಾರೆ.

WD
ವಿಜಯವಾಡದ ಇಂದ್ರಾಕಿಲಾದ್ರಿ ಪರ್ವತದಲ್ಲಿ ನೆಲೆಸಿರುವ ಮಾತಾ ಕನಕದುರ್ಗೇಶ್ವರಿ ಮಾತೆ ಆಂಧ್ರಪ್ರದೇಶದ ಪ್ರಮುಖ ದೇವತೆ. ನೂರಾರು ವರ್ಷಗಳಿಂದ ಭಕ್ತರು ಕನಕದುರ್ಗಾ ಮಾತೆಯ ಆರ್ಶಿರ್ವಾದ ಪಡೆಯಲು ಬಂದು ಸೇರುತ್ತಾರೆ. ವರ್ಷದ ಎಲ್ಲ ತಿಂಗಳುಗಳಲ್ಲಿ ಭಕ್ತರು ಮಂದಿರಕ್ಕೆ ಆಗಮಿಸಿ ಮಾತಾ ಕನಕದುರ್ಗಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷವಾಗಿ ನವರಾತ್ರಿ ಹಬ್ಬದಲ್ಲಿ ಲಕ್ಷಾಂತರ ಭಕ್ತರು ಮಾತೆ ಕನಕಾದುರ್ಗೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಪ್ರಾಚೀನ ಮಂದಿರವಾದ ಕಸನಕದುರ್ಗಾ ಮಾತೆಯ ಮಂದಿರ ಇಂದ್ರಕಿಲಾದ್ರಿ ಪರ್ವತದ ಕೃಷ್ಣಾ ನದಿಯ ತಟದಲ್ಲಿದೆ. ಕನಕದುರ್ಗಾ ಮಾತೆಯ ಮಂದಿರವನ್ನು 'ಸ್ವಯಂಭೂ"(ಮನುಷ್ಯ ಸ್ಥಾಪಿತವಲ್ಲದ) ಎಂದು ಕರೆಯುತ್ತಿದ್ದು, ಕನಕದುರ್ಗೆಗೆ ಭಕ್ತರ ಪಾಲಿಗೆ ತುಂಬಾ ಶಕ್ತಿಶಾಲಿ ದೇವರಾಗಿದ್ದಾಳೆ.

ಅರ್ಜುನ ತಪಸ್ಸನ್ನಾಚರಿಸಿ ಶಿವನನ್ನು ಒಲಿಸಿಕೊಂಡು ಪಾಶುಪತಾಸ್ತ್ರ ಪಡೆದ ಸ್ಥಳವೇ ಇಂದ್ರಕಿಲಾದ್ರಿ ಪರ್ವತ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಕನಕದುರ್ಗಾ ಮಾತೆಯ ಮಂದಿರವನ್ನು ಸ್ವತಃ ಅರ್ಜುನ ನಿರ್ಮಿಸಿದನೆಂದು ಪ್ರತೀತಿ ಇದೆ. ಆದಿ-ಶಂಕರಾಚಾರ್ಯರು ಮಂದಿರಕ್ಕೆ ಭೇಟಿ ನೀಡಿ ಶ್ರೀಚಕ್ರವನ್ನು ಸ್ಥಾಪಿಸಿ ವೈದಿಕ ಶಾಸ್ತ್ರದ ಮೂಲಕ ಕನಕದುರ್ಗಾ ಮಾತೆಯ ಪೂಜೆಯನ್ನು ಆರಂಭಿಸಿದರೆಂದು ಹೇಳಲಾಗಿದೆ.

WD
ರಾಕ್ಷಸರು ದೇವಾದಿದೇವತೆಗಳಿಂದ ವರಗಳನ್ನು ಪಡೆದು ಭೂಮಿಯ ಮೇಲಿರುವ ಋಷಿಮುನಿಗಳನ್ನು ಪೀಡಿಸಲು ಆರಂಭಿಸಿದ್ದರೆನ್ನಲಾಗಿದೆ.ಆ ಸಂದರ್ಭ ಪಾರ್ವತಿ ಶಕ್ತಿರೂಪಿಯಾಣಿಯಾಗಿ ದುಷ್ಟ ರಾಕ್ಷಸರ ಮರ್ದನ ಮಾಡಿರುವುದಾಗಿ ಪುರಾಣದಲ್ಲಿ ಹೇಳಲಾಗಿದೆ.ಶುಂಭ ಮತ್ತು ನಿಶುಂಭ ರಾಕ್ಷಸರನ್ನು ದಮನಕ್ಕಾಗಿ ಕೌಸುಕಿ ರೂಪ, ಮಹಿಷಾಸುರನ ದಮನಕ್ಕಾಗಿ ಮಹಿಷಾಸುರ ಮರ್ದಿನಿ, ದುರ್ಗಾಮಾಸುರನ ದಮನಕ್ಕಾಗಿ ದುರ್ಗೆ ಮಾತೆಯ ರೂಪವನ್ನು ತಾಳಿದ್ದಳು ಎಂದು ಪುರಾಣ ಕಥೆಗಳಲ್ಲಿ ತಿಳಿಸಲಾಗಿದೆ.ಆ ಬಳಿಕ ಭಕ್ತರ ಇಷ್ಟರ್ಥಾವನ್ನು ಪೂರೈಸಲು ತಾನು ಬೆಟ್ಟದ ಮೇಲೆ ನೆಲೆಸುವುದಾಗಿ ಕೀಲುಡು ಎನ್ನುವ ಭಕ್ತನಲ್ಲಿ ಅಭಯ ನೀಡಿರುವುದಾಗಿ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಅಂದಿನಿಂದ ಇಂದ್ರಕಿಲಾದ್ರಿಯಲ್ಲಿ ದುರ್ಗಾಮಾತೆ ನೆಲೆಸಿದ್ದು, ಮಹಿಷಾಸುರ ಮರ್ದಿನಿಯ ರೂಪವಾದ ಸಿಂಹದ ಮೇಲೆ ಸವಾರಿ, ಎಂಟು ಕೈಗಳಲ್ಲಿ ಶಸ್ತ್ರಾಸ್ತ್ರ, ಪಕ್ಕದಲ್ಲಿ ಶಿವನ ಜ್ಯೋತಿರ್ಲಿಂಗ ರೂಪದಿಂದ ಪ್ರಕಟವಾಗಿದ್ದಾಳೆ ಎಂದು ದಂತಕಥೆಗಳಲ್ಲಿ ಹೇಳಲಾಗಿದೆ.ಮತ್ತೊಂದೆಡೆ ಶಿವನ ಲಿಂಗಸ್ವರೂಪದ ಜ್ಯೋತಿರ್ಲಿಂಗಕ್ಕೆ ಬ್ರಹ್ಮ ದೇವನು ಮಲ್ಲಿಗೆ ಹೂಗಳಿಂದ ಮಲ್ಲೇಶ್ವರ ಸ್ವಾಮಿಯ ಹೆಸರಲ್ಲಿ ಪೂಜೆಗೈಯುತ್ತಿದ್ದನೆಂದೂ ಹೇಳಲಾಗಿದೆ.

ಸ್ವರ್ಗದ ವಾಸಿಯಾದ ಇಂದ್ರನು ಮಂದಿರಕ್ಕೆ ಭೇಟಿ ನೀಡಿದ ಬಳಿಕ ಇದನ್ನು ಇಂದ್ರಕಿಲಾದ್ರಿ ಪರ್ವತವೆಂದು ಕರೆಯಲಾಯಿತು.ದೇವತೆಗಳ ಸಂಪ್ರದಾಯದಂತೆ ದೇವತೆಗಳು ಎಡಭಾಗದಲ್ಲಿ ಆಸೀನರಾಗುತ್ತಾರೆ.ಆದರೆ ಇಂದ್ರಕಿಲಾದ್ರಿಯಲ್ಲಿ ದುರ್ಗಾಮಾತೆ ಮಲ್ಲೇಶ್ವರನ ಬಲಭಾಗದಲ್ಲಿ ಆಸೀನವಾಗಿದ್ದಾಳೆ. ಇದರಿಂದ ಶಕ್ತಿಗೆ ಇಂದ್ರಕಿಲಾದ್ರಿಯಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಪುರಾಣದಲ್ಲಿ ಹೇಳಲಾಗಿದೆ.

WD
ನವರಾತ್ರಿ ಸಮಯದಲ್ಲಿ ಕನಕದುರ್ಗಾ ಮಾತೆಯನ್ನು ವಿಶೇಷವಾಗಿ ನವವಿಧದಲ್ಲಿ ಅಲಂಕರಿಸಲಾಗುತ್ತದೆ. ಬಾಲತ್ರಿಪುರ ಸುಂದರಿ, ಗಾಯತ್ರಿ, ಅನ್ನಪೂರ್ಣ, ಮಹಾಲಕ್ಷ್ಮೀ, ಸರಸ್ವತಿ, ಲಲಿತಾ ತ್ರಿಪುರ ಸುಂದರಿ, ದುರ್ಗಾದೇವಿ, ಮಹಿಷಾಸುರ ಮರ್ದಿನಿ, ಮತ್ತು ರಾಜರಾಜೇಶ್ವರಿದೇವಿ ರೂಪದಲ್ಲಿ ಅಲಂಕಾರ ಮಾಡಲಾಗುತ್ತದೆ. ವಿಜಯ ದಶಮಿಯಂದು ಭಕ್ತಾದಿಗಳು ಹಂಸಪಕ್ಷಿಯ ಆಕಾರದ ದೋಣಿಯೊಂದರಲ್ಲಿ ಕೃಷ್ಣಾ ನದಿಯನ್ನು ಸುತ್ತು ಹಾಕಿ "ತೆಪ್ಪೋತ್ಸವಂ" ಆಚರಿಸುತ್ತಾರೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಆಚರಣೆ ಆಯುಧಪೂಜೆಯಂದು ಭಕ್ತರು ಶಸ್ತ್ರಾಸ್ತ್ರಗಳನ್ನು ಪೂಜಿಸುತ್ತಾರೆ.

ಇಂದ್ರಕಿಲಾದ್ರಿ ಕನಕದುರ್ಗಾ ಮಾತೆಯ ಮಂದಿರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ವಾರ್ಷಿಕ ಆದಾಯ 40 ಕೋಟಿ ರೂ.ಗಳಿಗೆ ಬಂದು ತಲುಪಿದೆ. ಪವಿತ್ರಗ್ರಂಥಗಳು, ಅನೇಕ ಶಿವಲೀಲೆಗಳು, ಶಕ್ತಿ ಮಹಿಮೆಗಳ ಪ್ರಮುಖ ತಾಣವಾಗಿದೆ. ಆಧ್ಯಾತ್ಮಿಕ ಮಹತ್ವವನ್ನು ಸಾರುವ ಐತಿಹಾಸಿಕ, ಪ್ರಾಚೀನ ಸ್ಥಳವಾಗಿದ್ದರಿಂದ ನೂರಾರು ವರ್ಷಗಳಿಂದ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.

ತಲುಪುವುದು ಹೇಗೆ:

ವಿಜಯವಾಡಾ ನಗರದ ಹೃದಯಭಾಗದಲ್ಲಿದ್ದು, ರೈಲ್ವೆನಿಲ್ದಾಣದಿಂದ ಕೇವಲ 10 ನಿಮಿಷಗಳಲ್ಲಿ ತಲುಪಬಹುದಾಗಿದೆ. ವಿಜಯವಾಡ ಹೈದ್ರಾಬಾದ್‌ನಿಂದ 275 ಕಿ.ಮಿ. ದೂರವಿದ್ದು, ದೇಶದ ಯಾವುದೇ ಮೂಲೆಯಿಂದ ರಸ್ತೆ, ರೈಲು ಮತ್ತು ವಿಮಾನಯಾನದ ಮೂಲಕ ಸುಲಭವಾಗಿ ತಲುಪಬಹುದಾಗಿದೆ.