ತಾಂತ್ರಿಕರ ಅಧಿದೇವತೆ - ಬಗ್ಲಾಮುಖಿ

ಅನಿರುದ್ಧ ಜೋಷಿ

‘‘ಹ್ರೀಂ ಬಗ್ಲಾಮುಖೀ ಸರ್ವ ದುಷ್ಟಾನಾಂ ವಾಚಂ ಮುಖಂ ಪದಂ ಸ್ತಂಭಯ ಜಿಹ್ವಾಂ ಕೀಲಂ ಬುದ್ಧಿಂ ವಿನಾಶಯ ಹ್ರೀಂ ಓಂ ಸ್ವಾಹಾ।’’

ಮಂತ್ರ ತಂತ್ರಕ್ಕೆ ಸಂಬಂಧಿಸಿದಂತೆ ಪ್ರಾಚೀನ ಗ್ರಂಥಗಳಲ್ಲಿ 10 ಮಹಾವಿದ್ಯೆಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲೊಂದು ಬಗ್ಲಾ ಮುಖಿ. ಎಲ್ಲ ದೇವಿಯರ ಸಾಲಿನಲ್ಲಿ ಬಗ್ಲಾಮುಖಿ ಮಾತೆಗೆ ವಿಶೇಷ ಸ್ಥಾನಮಾನವಿದೆ. ಮಾತೆ ಬಗ್ಲಾಮುಖಿಗೆ ಸೇರಿದ ಪ್ರಮುಖವಾದ ಮೂರು ಪುರಾತನ ದೇವಾಲಯಗಳಿದ್ದು, ಇವನ್ನು ಸಿದ್ಧಪೀಠ ಎಂದು ಕರೆಯಲಾಗುತ್ತದೆ. ಅವುಗಳಲ್ಲೊಂದು ನಳಖೇಡಾದಲ್ಲಿರುವ ಮಂದಿರ.

ಧಾರ್ಮಿಕ ಯಾತ್ರೆಯ ಈ ಸರಣಿಯಲ್ಲಿ ನಾವು ನಳಖೇಡಾದಲ್ಲಿರುವ ಬಗ್ಲಾಮುಖಿ ಮಾತೆಯ ಮಂದಿರದ ಬಗ್ಗೆ ತಿಳಿದುಕೊಳ್ಳೋಣ.

ಮಾತೆ ಬಗ್ಲಾ ಮುಖಿಗೆ ಇಡೀ ಭಾರತದಲ್ಲಿರುವುದು ಮೂರು ಮಂದಿರಗಳು. ಮಧ್ಯಪ್ರದೇಶದ ದಾತಿಯಾ, ಹಿಮಾಚಲ ಪ್ರದೇಶದ ಕಾಂಗ್ಡಾ ಮತ್ತು ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯಲ್ಲಿರುವ ನಳ್‌ಖೇಡಾ. ಪ್ರತಿಯೊಂದು ಮಂದಿರವೂ ತನ್ನದೇ ಆದ ವಿಶೇಷತೆಗಳನ್ನು ಹೊಂದಿವೆ.
WD


ಮಧ್ಯಪ್ರದೇಶದಲ್ಲಿ, ಮೂರು ಮುಖಗಳುಳ್ಳ (ತ್ರಿಮುಖಿ) ಮಾತೆ ಬಗ್ಲಾಮುಖಿಯ ಮಂದಿರ ಇರುವುದು ಶಾಜಾಪುರ ಜಿಲ್ಲೆಯ ನಳಖೇಡಾದ ಲಾಕುಂದರ್ ನದೀ ತಟದಲ್ಲಿ. ದ್ವಾಪರಯುಗದ ಈ ಮಂದಿರವು ಸಾಕಷ್ಟು ಪವಾಡ ಶಕ್ತಿಗಳಿಗೆ ಹೆಸರಾಗಿದೆ. ದೇಶದ ವಿವಿಧೆಡೆಯ ಸಂತರು ಮತ್ತು ಮಾಂತ್ರಿಕರು, ತಾಂತ್ರಿಕರು ಇಲ್ಲಿಗೆ ಬಂದು, ವಿಶೇಷ ಶಕ್ತಿ ಪಡೆಯುವುದಕ್ಕಾಗಿ ಪ್ರಾರ್ಥನೆ-ಪೂಜೆ ಸಲ್ಲಿಸುತ್ತಾರೆ.

WD
ಈ ಮಂದಿರದಲ್ಲಿ ಬಗ್ಲಾಮುಖಿ ಮಾತ್ರವಲ್ಲದೆ, ಲಕ್ಷ್ಮಿ, ಕೃಷ್ಣ, ಹನುಮಾನ್, ಭೈರವ ಮತ್ತು ಸರಸ್ವತಿ ಮೂರ್ತಿಗಳೂ ಇವೆ. ಮಹಾಭಾರತ ಯುದ್ಧವನ್ನು ಗೆಲ್ಲುವ ನಿಟ್ಟಿನಲ್ಲಿ ಶ್ರೀಕೃಷ್ಣನ ಆದೇಶಾನುಸಾರ ಈ ಮಂದಿರವನ್ನು ಯುಧಿಷ್ಠಿರನು ಕಟ್ಟಿಸಿದ ಎಂಬ ಪ್ರತೀತಿ ಇದೆ. ಈ ಮಂದಿರದಲ್ಲಿರುವ ವಿಗ್ರಹವು ಸ್ವಯಂಭೂ ವಿಗ್ರಹ ಎಂದೂ ನಂಬಲಾಗಿದೆ.

ಈ ಮಂದಿರಕ್ಕೆ ಅತ್ಯಂತ ಪ್ರಾಚೀನ ಇತಿಹಾಸವಿದ್ದು, 10ನೇ ಪೀಳಿಗೆಯ ಮಂದಿ ಈ ದೇವಿಯನ್ನು ಅರ್ಚಿಸುತ್ತಿದ್ದಾರೆ ಎನ್ನುತ್ತಾರೆ ಮಂದಿರದ ಅರ್ಚಕ ಕೈಲಾಸ ನಾರಾಯಣ ಶರ್ಮಾ. 1815ರಲ್ಲಿ ಈ ಮಂದಿರವು ನವೀಕರಣಗೊಂಡಿತ್ತು. ತಮ್ಮ ಅಭೀಷ್ಟ ನೆರವೇರಿಸಿಕೊಳ್ಳುವುದಕ್ಕಾಗಿ ಮತ್ತು ಯಾವುದೇ ಕ್ಷೇತ್ರದಲ್ಲಿ ಉನ್ನತಿ, ಶ್ರೇಯಸ್ಸು ಸಾಧಿಸಲು ಯಜ್ಞ-ಹವನಗಳನ್ನು ನಡೆಸುವುದಕ್ಕಾಗಿ ಭಕ್ತ ಜನರು ಇಲ್ಲಿಗೆ ಬರುತ್ತಾರೆ.
WD


ಈ ಮಂದಿರವು ಮಸಣ ಭೂಮಿಯಲ್ಲಿ ಸ್ಥಿತವಾಗಿದೆ ಮತ್ತು ಮೂಲತಃ ಬಗ್ಲಾ ದೇವಿಯು ತಾಂತ್ರಿಕರ ಅಧಿದೇವತೆ ಎನ್ನುತ್ತಾರೆ ಇಲ್ಲಿನ ಅರ್ಚಕರಾದ ಗೋಪಾಲ ಪಂಡಾ, ಮನೋಹರಲಾಲ್ ಪಂಡಾ ಮತ್ತಿತರರು. ಈ ಕಾರಣದಿಂದ ಹಲವು ತಾಂತ್ರಿಕರು ಇಲ್ಲಿಗೆ ಬರುತ್ತಾರೆ ಮತ್ತು ಮಂತ್ರ-ತಂತ್ರಾದಿಗಳನ್ನು ನೆರವೇರಿಸುತ್ತಾರೆ. ಮತ್ತು ಅವರಿಗಿದು ಅತ್ಯಂತ ಶ್ರೇಷ್ಠ ತಾಣವಾಗಿದೆ. ಬಗ್ಲಾ ಮುಖಿ ದೇವಿಗೆ ಮೂರು ಮಂದಿರಗಳಿದ್ದರೂ, ಇಲ್ಲಿನ ಮಂದಿರವು ಹೆಚ್ಚು ಪ್ರಾಮುಖ್ಯವಾಗಿದ್ದೇಕೆಂದರೆ ಇಲ್ಲಿರುವ ಸ್ವಯಂಭೂ ವಿಗ್ರಹದಿಂದಾಗಿ ಮತ್ತು ಈ ಮಂದಿರವನ್ನು ಸ್ವತಃ ಯುಧಿಷ್ಠಿರನೇ ಕಟ್ಟಿಸಿದ್ದ ಎಂಬ ಕಾರಣದಿಂದ.
WD


ಇಲ್ಲಿಗೆ ಹೋಗುವುದು ಹೇಗೆ?:

ವಾಯುಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಇಂದೋರ್.

ರೈಲು ಮಾರ್ಗ: ದೇವಾಸ್ ಅಥವಾ ಉಜ್ಜಯಿನಿ ರೈಲು ನಿಲ್ದಾಣಗಳಿಂದ ಅನುಕ್ರಮವಾಗಿ 30 ಕಿ.ಮೀ. ಮತ್ತು 60 ಕಿ.ಮೀ. ದೂರದಲ್ಲಿರುವ ನಳಖೇಡಾಕ್ಕೆ ಟ್ಯಾಕ್ಸಿ ಸೌಲಭ್ಯಗಳಿವೆ.

ರಸ್ತೆ ಮಾರ್ಗ: ಇಂದೋರ್‌ನಿಂದ ನಳಖೇಡಾಕ್ಕೆ ಸಾಕಷ್ಟು ಬಸ್ಸು, ಟ್ಯಾಕ್ಸಿ ವ್ಯವಸ್ಥೆ ಇದೆ. ಇಂದೋರ್ ಮತ್ತು ನಳಖೇಡಾ ನಡುವಿನ ಅಂತ ಸುಮಾರು 165 ಕಿ.ಮೀ.