ಪುಟ್ಟಪರ್ತಿ ಶ್ರೀ ಸತ್ಯ ಸಾಯಿಬಾಬಾ

ಐ.ವೆಂಕಟೇಶ್ವರ ರಾವ್

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟ ಗ್ರಾಮ ಪುಟ್ಟಪರ್ತಿ. ಈ ಪುಟ್ಟ ಗ್ರಾಮ ಇದೀಗ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರಿಂದಾಗಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಶ್ರೀಸಾಯಿಬಾಬಾ ಅವರ ಆಶ್ರಮವನ್ನು ಅವರ ಭಕ್ತರಿಗಾಗಿಯೇ ಇಲ್ಲಿ ಕಟ್ಟಲಾಗಿದ್ದು, ಇದನ್ನು 'ಪ್ರಶಾಂತಿ ನಿಲಯಂ' ಎಂದೇ ಕರೆಯಲಾಗುತ್ತದೆ. ಪ್ರಶಾಂತಿ ನಿಲಯಂ ಅಂದರೆ ಶಾಂತಿಯ ತಾಣ ಎಂದರ್ಥ. ಆ ಕಾರಣಕ್ಕಾಗಿಯೇ ಪ್ರಶಾಂತಿ ನಿಲಯಂ ದೇಶ-ವಿದೇಶದ ಭಕ್ತಾಧಿಗಳ ನೆಚ್ಚಿನ ತಾಣವಾಗಿ ಹೆಸರು ಗಳಿಸಿದೆ. ಸಾಯಿಬಾಬಾ ಅವರ ಆಶೀರ್ವಾದ ಪಡೆಯಲು ನಾನಾ ದೇಶಗಳಿಂದ ಪ್ರಶಾಂತಿ ನಿಲಯಕ್ಕೆ ಪ್ರತಿನಿತ್ಯ ಭಕ್ತರು ಭೇಟಿ ನೀಡುತ್ತಾರೆ.

ಕುಗ್ರಾಮವಾಗಿದ್ದ ಪುಟ್ಟಪರ್ತಿಯಲ್ಲಿ ಪ್ರಸಕ್ತವಾಗಿ ವಿಮಾನ ನಿಲ್ದಾಣ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸೇರಿದಂತೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಇವೆ. ಸಾಯಿಬಾಬಾ ಅವರ ಆಶೀರ್ವಾದ ಪಡೆಯಲಿಕ್ಕಾಗಿಯೇ ಪ್ರತಿದಿನ ಪ್ರಶಾಂತಿ ನಿಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.
WD
ಮುಖ್ಯವಾಗಿ ಇಲ್ಲಿ ವಿಶೇಷವಾಗಿ ತರಬೇತಿ ಪಡೆದ ತಂಡವೊಂದು ಸಾಮೂಹಿಕವಾಗಿ ಆಧ್ಯಾತ್ಮಿಕ ಸಂಗೀತವನ್ನು ಹಾಡುತ್ತಾರೆ, ಬಳಿಕ ಬಾಬಾ ಧಾರ್ಮಿಕ ಪ್ರವಚನ ನೀಡುತ್ತಾರೆ. ಜೀವನಕ್ಕೆ ಸಂಬಂಧಿಸಿದ ತಾತ್ವಿಕ ನೆಲೆಗಟ್ಟಿನ ವಾಗ್ಝರಿ ಬಾಬಾ ಅವರಿಂದ ಹರಿದು ಬರುವ ಮೂಲಕ ಭಕ್ತ ಸಮೂಹ ತನ್ಮಯವಾಗಿ ಆಲಿಸುವುದೇ ಒಂದು ಪವಾಡ ಎಂಬಂತೆ ಇಲ್ಲಿ ಭಾಸವಾಗುತ್ತದೆ.

ಶಾಂತಿ, ಅಹಿಂಸೆ, ಒಗ್ಗಟ್ಟಿನ ಪ್ರೇಮಗಳೇ ಸತ್ಯ ಎಂಬ ಸಂದೇಶ ಸಾರುವ ಬಾಬಾ ಅವರ ಪ್ರವಚನ ಭಕ್ತಗಡಣಕ್ಕೆ ವೇದವಾಕ್ಯವಾಗಿದೆ. ಬಾಬಾ ಅವರ ಸೇವಾ ಮನೋಭಾವ ಕೇವಲ ಪ್ರವಚನಕ್ಕಷ್ಟೇ ಸೀಮಿತವಲ್ಲ, ಆಶ್ರಮದ ವತಿಯಿಂದ ಶೈಕ್ಷಣಿಕ ಸಂಸ್ಥೆ, ಮ್ಯೂಸಿಯಂ, ಬಾಹ್ಯಾಕಾಶ ಕೇಂದ್ರ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳು ನಡೆಸಲ್ಪಡುತ್ತವೆ.

ಪ್ರತಿವರ್ಷ ನವೆಂಬರ್ 23ರ ಸಾಯಿಬಾಬಾ ಅವರ ಹುಟ್ಟುಹಬ್ಬದ ದಿನದ ಅಂಗವಾಗಿ ಪ್ರಶಾಂತಿ ನಿಲಯಂ ಅನ್ನು ವಿದ್ಯುದ್ದೀಪಾಲಂಕಾರಗಳಿಂದ ಅಲಂಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಭಾವಿ ರಾಜಕಾರಣಿಗಳು ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಸಾಯಿಬಾಬಾ ಅವರ 80ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪುಟ್ಟಪರ್ತಿಗೆ ಅಧಿಕೃತ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಬಾಬಾ ಹುಟ್ಟುಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುತ್ತಾಲ್ಲದೆ, ಇದರಲ್ಲಿ 180 ವಿವಿಧ ದೇಶಗಳಿಂದ ಭಕ್ತರು ಆಗಮಿಸುವುದು ವಿಶೇಷತೆಯಾಗಿದೆ.

ಸತ್ಯ-ಶಿವಂ-ಸುಂದರಂ:

WD
ಪುಟ್ಟ ಪರ್ತಿಯಲ್ಲಿರುವ ಸತ್ಯಸಾಯಿ ಬಾಬಾ ಅವರ ವಾಸ್ತವ್ಯದ ಅಧಿಕೃತ ಆಶ್ರಮ ಪ್ರಶಾಂತಿ ನಿಲಯಂ, ಅದರಂತೆ ಬಾಬಾ ಅವರು ದೇಶದ ಪ್ರಮುಖ ಮೂರು ಸ್ಥಳಗಳಲ್ಲಿ ಮೂರು ಮಂದಿರಗಳನ್ನು ಸ್ಥಾಪಿಸಿದ್ದಾರೆ. ಅದರ ಪ್ರಥಮ ಕೇಂದ್ರ ಮುಂಬೈಯಲ್ಲಿದೆ ಅದರ ಹೆಸರು ಧರ್ಮಕ್ಷೇತ್ರ ಅಥವಾ ಸತ್ಯಂ. ಎರಡನೇ ಕೇಂದ್ರ ಹೈದರಾಬಾದ್‌ನಲ್ಲಿ ಇದರ ಹೆಸರು ಶಿವಂ ಹಾಗೇ ಮೂರನೇ ಕೇಂದ್ರ ಚೆನ್ನೈನಲ್ಲಿದ್ದು ಸುಂದರಂ ಎಂದು ಕರೆಯಲಾಗುತ್ತದೆ.

ಸುಂದರಂ ಕೇಂದ್ರ ಪ್ರಸಿದ್ಧ ಭಜನಾ ತಂಡವನ್ನು ಹೊಂದಿದ್ದು, ಈವರೆಗೆ ಸುಮಾರು 54 ಭಕ್ತಿಗೀತೆಗಳ ಕ್ಯಾಸೆಟ್ ಹಾಗೂ ಸಿ.ಡಿಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ 54ನೇ ಕ್ಯಾಸೆಟ್‌ನಲ್ಲಿ ಸ್ವತಃ ಬಾಬಾ ಅವರೇ ಭಜನೆ ಹಾಡಿರುವುದು ವಿಶೇಷವಾಗಿದೆ.

ದಿನನಿತ್ಯದ ಕಾರ್ಯಕ್ರಮಗಳು:

ಪ್ರಶಾಂತಿ ನಿಯಲಂನಲ್ಲಿ ಪ್ರತಿದಿನ ಬೆಳಿಗ್ಗೆ ಸುಪ್ರಭಾತ(ಪ್ರಾರ್ಥನೆ)ಮಾಡಲಾಗುತ್ತುದೆ. ಅಲ್ಲದೇ ವೇದ ಪಾರಾಯಣ, ನಗರ ಸಂಕೀರ್ತನ(ಬೆಳಗ್ಗಿನ ಭಕ್ತಿಗೀತೆ) ಹಾಗೂ ಎರಡು ದಿನಕ್ಕೊಮ್ಮೆ ಭಜನೆ, ಭಕ್ತರಿಗೆ ಸಾಯಿಬಾಬಾ ದರ್ಶನ ಕಾರ್ಯಕ್ರಮ ನಡೆಯುತ್ತದೆ. ತನ್ನ ಪರಿವಾರದೊಂದಿಗೆ ಆಗಮಿಸುವ ಸಾಯಿಬಾಬಾ ಅವರು ಭಕ್ತ ಸಮೂಹದೊಂದಿಗೆ ಮಾತುಕತೆ ನಡೆಸಿ, ಪತ್ರಗಳನ್ನು ಸ್ವೀಕರಿಸಿ, ವಿಭೂತಿಯನ್ನು (ಪವಿತ್ರ ಭಸ್ಮ) ಹಂಚುತ್ತಾರೆ.

WD
ಅಥವಾ ಭಕ್ತರನ್ನು ಗುಂಪಾಗಿ ಯಾ ಪ್ರತ್ಯೇಕವಾಗಿ ಸಂದರ್ಶನಕ್ಕೆ ಕರೆಯುತ್ತಾರೆ. ಈ ರೀತಿಯಾಗಿ ಸಂದರ್ಶನದಲ್ಲಿ ಆಯ್ಕೆ ಮಾಡಿದ ವ್ಯಕ್ತಿಗಳನ್ನು ಗುರುವಲಯಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಓರ್ವ ವ್ಯಕ್ತಿ ಈ ರೀತಿಯಾಗಿ ಬಾಬಾನ ಸಂದರ್ಶನದಲ್ಲಿ ಆಯ್ಕೆಯಾಗಿ ಅನುಗ್ರಹಕ್ಕೆ ಪಾತ್ರರಾಗುವುದು ಮಹತ್ವದ್ದು ಎಂದೇ ಭಾವಿಸಲಾಗುತ್ತದೆ.

ನಾನು ದೈವಾಂಶ ಸಂಭೂತ ಹಾಗೂ ನೀವು ಕೂಡ ದೇವರುಗಳೇ, ಆದರೆ ಇದರಲ್ಲಿ ನನಗೂ ಮತ್ತು ನಿಮಗೂ ಇರುವ ವ್ಯತ್ಯಾಸ ಏನೆಂದರೆ ನಾನು ಎಲ್ಲವನ್ನೂ ತಿಳಿದಿರುವ ಜ್ಞಾನಿ, ನೀವು ಸಂಪೂರ್ಣ ಅರಿವು ಇಲ್ಲದ ವ್ಯಕ್ತಿಗಳಾಗಿದ್ದೀರಿ ಅಷ್ಟೇ ಎಂಬುದು ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಅಮೃತವಾಣಿಯಾಗಿದೆ.

WD
ನಿಜಕ್ಕೂ ದಕ್ಷಿಣ ಭಾರತದ ಪ್ರವಾಸದಲ್ಲಿ ನೀವು ಪುಟ್ಟಪರ್ತಿ ಸಾಯಿಬಾಬಾ ಆಶ್ರಮಕ್ಕೆ ಭೇಟಿ ನೀಡದಿದ್ದರೇ ಅದು ಅಪೂರ್ಣ ಎಂದೇ ಅರ್ಥ. ಪುಟ್ಟಪರ್ತಿಯಲ್ಲಿ ಹಲವಾರು ಆಕರ್ಷಕ ಸ್ಥಳಗಳಿವೆ. ಇಲ್ಲಿ ಸತ್ಯಭಾಮ ದೇವಾಲಯ, ಸಾಯಿಬಾಬಾ ಜನಿಸಿದ ಚಿತ್ರಾವತಿ ನದಿ ದಡದಲ್ಲಿನ ಶಿವ ದೇವಾಲಯ ''ಕಲ್ಪವೃಕ್ಷ' ಪ್ರಮುಖ ಸ್ಥಳಗಳಾಗಿವೆ.

ಇಲ್ಲಿಗೆ ತಲುಪುವುದು ಹೇಗೆ:

ರಸ್ತೆ ಮಾರ್ಗ: ಆಂಧ್ರದ ಅನಂತಪುರದಿಂದ 80ಕಿ,ಮೀ,ದೂರದಲ್ಲಿ ಪುಟ್ಟಪರ್ತಿಗೆ ಬಸ್‌ನಲ್ಲಿ ಪ್ರಯಾಣಿಸಬಹುದು.

ರೈಲು ಮಾರ್ಗ:ಅನಂತಪುರದಿಂದ ರೈಲ್ವೆ ನಿಲ್ದಾಣದಿಂದ ಪುಟ್ಟಪರ್ತಿಗೆ.

ವಾಯು ಮಾರ್ಗ: ಹೈದರಾಬಾದ್ ಮತ್ತು ಬೆಂಗಳೂರಿನಿಂದ ವಿಮಾನದಲ್ಲಿಯೂ ಆಗಮಿಸಬಹುದು.