ಮೊಧೇರಾದ ಸೂರ್ಯ ದೇವಾಲಯ

ಭೀಕಾ ಶರ್ಮಾ ಹಾಗೂ ಜನಕ್ ಝಲಾ

ಕೋನಾರ್ಕದ ಸೂರ್ಯ ದೇವಸ್ಥಾನ ಕೇಳಿದ್ದೀರಿ. ಮೊಧೇರಾದಲ್ಲೊಂದು ಪ್ರಸಿದ್ಧಿವೆತ್ತ ಸೂರ್ಯ ದೇವಸ್ಥಾನವಿದೆ ಎಂಬುದು ನಿಮಗೆ ಗೊತ್ತೇ? ಗೊತ್ತಿಲ್ಲದಿದ್ದರೆ, ಅತ್ತ ಕಡೆ ಈ ಬಾರಿಯ ಪಯಣ.

ಮೊಧೇರಾ ಇರುವುದು ಪುಷ್ಪವತಿ ನದೀ ತೀರದಲ್ಲಿ.ದೇವಸ್ಥಾನ ಸ್ಥಾಪನೆಯಾದುದು ಕ್ರಿಸ್ತಪೂರ್ವ 1022- 1063ರ ಕಾಲದಲ್ಲಿ. ಭೀಮದೇವ ಸೋಲಂಕಿ ಈ ಸೂರ್ಯ ದೇವಸ್ಥಾನವನ್ನು ಕಟ್ಟಿಸಿದರು. ಇದೇ ಕಾಲದಲ್ಲಿ ಈ ದೇವಸ್ಥಾನ ರಚನೆಯಾಯಿತು ಎಂಬುದಕ್ಕೆ ಅಲ್ಲಿರುವ ಸಾಕಷ್ಟು ಲಿಪಿಗಳೂ, ಪುರಾತನ ಪಳೆಯಳಿಕೆಗಳೇ ಸಾಕ್ಷಿ. ವಿಕ್ರಮ ಸಾಂವತ್ 1083 ಎಂದು ಕೆತ್ತಿರುವ ಲಿಪಿಯೇ ಇದು ಕ್ರಿಸ್ತಪೂರ್ವ ಕಾಲದ್ದು ಎಂಬುದಕ್ಕೆ ಆಧಾರ ನೀಡುತ್ತದೆ. ಮಹಮ್ಮದ್ ಘಜ್ನಿ ಸೋಮನಾಥ ಹಾಗೂ ಸುತ್ತಮುತ್ತಲ ಸಾಮ್ರಾಜ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಂಡ ಸಂದರ್ಭದಲ್ಲಿ ಸೋಲಂಕಿಗಳ ಕೈಯಿಂದ ಈ ದೇವಸ್ಥಾನವೂ ಘಜ್ನಿಯ ಪಾಲಾಯಿತು.
PR


ಅಂದು ಅಹಿಲ್ವಾದ್ ಪಾಟನ್ ಎಂಬುದು ಸೋಲಂಕಿಗಳ ರಾಜಧಾನಿಯಾಗಿತ್ತು. ಆದರೆ ಕಳೆದುಕೊಂಡ ಸಾಮ್ರಾಜ್ಯವನ್ನು ಸೋಲಂಕಿಗಳು ಮತ್ತೆ ಕಟ್ಟತೊಡಗಿದರು. ಸೋಲಂಕಿಗಳ ಆರಾಧ್ಯ ದೇವರು ಸೂರ್ಯ. ಕುಟುಂಬದ ದೇವರೂ ಕೂಡಾ ಸೂರ್ಯ. ಹಾಗಾಗಿ ಅವರು ಸೂರ್ಯ ದೇವಸ್ಥಾನವನ್ನು ಕಟ್ಟಲು ಯೋಚಿಸಿದರು. ಈ ಯೋಚನೆಯ ಫಲವೇ ಮೊಧೇರಾದ ಸೂರ್ಯ ದೇವಸ್ಥಾನ.

ಭಾರತದಲ್ಲಿರುವ ಮೂರೇ ಮೂರು ಸೂರ್ಯ ದೇವಾಲಯಗಳ ಪೈಕಿ ಮೊಧೇರಾದ ಸೂರ್ಯ ದೇವಾಲಯವೂ ಒಂದು. ಇನ್ನೊಂದು ಒರಿಸ್ಸಾದ ಕೋನಾರ್ಕದ್ದಾದರೆ, ಮತ್ತೊಂದು ಜಮ್ಮುವಿನ ಮಾರ್ತಾಂಡ ಸೂರ್ಯ ದೇವಸ್ಥಾನ. ಆದರೆ ಮೊಧೇರಾದ ಸೂರ್ಯ ದೇವಸ್ಥಾನ ಶಿಲ್ಪಕಲೆಯ ಶ್ರೀಮಂತಿಕೆಗೊಂದು ದೃಶ್ಯಕಾವ್ಯ. ಈ ದೇವಸ್ಥಾನದ ರಚನೆಯಲ್ಲಿ ಅಂಟಿಸುವ ವಸ್ತುವಾಗಿ ಯಾವುದನ್ನೂ ಬಳಸಿಲ್ಲ. ಲೈಮ್ ಪುಡಿಯನ್ನೂ ಬಳಸದೆ ಕಟ್ಟಿದ ದೇವಾಲಯವಿದು.

ದೇವಸ್ಥಾನದ ಗೋಪುರ 51 ಅಡಿ ಒಂಭತ್ತು ಇಂಚು ಎತ್ತರವಿದ್ದರೆ 25 ಅಡಿ ಎಂಟು ಇಂಚಗಳಷ್ಟು ಅಗಲವ್ನನೂ ಹೊಂದಿದೆ. ಈ ದೇವಾಲಯದಲ್ಲಿ 52 ಕಂಬಗಳಿದ್ದು, ಪ್ರತಿಯೊಂದು ಕಂಬವೂ ಚೆಂದನೆಯ ಶಿಲ್ಪಕಲೆಯಲ್ಲಿ ಮೇಳೈಸಿದೆ. ಪ್ರತಿಯೊಂದು ಕಂಬವೂ ರಾಮಾಯಣ ಮಹಾಭಾರತದ ಕಥೆಯನ್ನು ಹೇಳುತ್ತವೆ. ಸೂರ್ಯನ ಮೊದಲ ಕಿರಣ ತಾಕುವುದೇ ದೇವಾಲಯದ ಗೋಪುರಕ್ಕೆ. ಅಂಥಾ ಮಾದರಿಯಲ್ಲಿ ದೇವಾಲಯವನ್ನು ಕಟ್ಟಲಾಗಿದೆ.
PR


ಅಲ್ಲಾವುದ್ದೀನ್ ಖಿಲ್ಜಿ ಈ ದೇವಾಲಯವನ್ನು ಹಾಳುಗೆಡವಲು ಸಾಕಷ್ಟು ಪ್ರಯತ್ನಪಟ್ಟಿದ್ದು ಕಾಣಸಿಗುತ್ತದೆ. ಖಿಲ್ಜಿಯಿಂದಾಗಿಯೇ ದೇವಾಲಯದ ಮುಖ್ಯ ಸೂರ್ಯನ ವಿಗ್ರಹ ಸಂಪೂರ್ಣ ನಾಶಗೊಂಡರೂ, ಭವ್ಯ ಇತಿಹಾಸವ್ನನು ಸಾರುವ ಸೂರ್ಯ ದೇವಸ್ಥಾನ ಹಾಗೇಯೇ ನಿಂತಿದೆ.

ತಲುಪುವುದು ಹೇಗೆ?

ರಸ್ತೆಯ ಮೂಲಕ- ಅಹಮದಾಬಾದ್‌ನಿಂದ 102 ಕಿ.ಮೀ ದೂರದಲ್ಲಿ ಮೊಧೇರಾದಲ್ಲಿ ಈ ಸೂರ್ಯ ದೇವಸ್ಥಾನವಿದೆ. ಅಹ್ಮದಾಬಾದ್‌ನಿಂದ ಬೇಕಾದಷ್ಟು ಬಸ್ಸುಗಳು ಹಾಗೂ ಟ್ಯಾಕ್ಸಿಗಳು ಸಿಗುತ್ತವೆ.
ರೈಲಿನ ಮೂಲಕ- ಅಹಮದಾಬಾದ್‌ವರೆಗೆ ರೈಲಿನಲ್ಲಿ ಬಂದು ನಂತರ ರಸ್ತೆಯ ಮೂಲಕವೇ ಪ್ರಯಾಣಿಸಬೇಕು.
ವಿಮಾನದ ಮೂಲಕ- ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದು ರಸ್ತೆಯ ಮೂಲಕ 102 ಕಿ.ಮೀ ದೂರದ ಮೊಧೇರಾಕ್ಕೆ ಪ್ರಯಾಣಿಸಬಹುದು. (ಮೊಧೇರಾ ಸೂರ್ಯ ದೇವಾಲಯದ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ)